ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ 5000 ರೂಪಾಯಿ ಕೊಡ್ತಿನಿ ಬಾ ಎಂದು ಕರೆದ ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ನರ್ಸ್ ಮಂಗಳಾರತಿ ಮಾಡಿದಂತಹ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಯಿಂದ ನರ್ಸ್‌ಗೆ ಕಿರುಕುಳ

ಡೆಹ್ರಾಡೂನ್: ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ 5000 ರೂಪಾಯಿ ಕೊಡ್ತಿನಿ ಬಾ ಎಂದು ಕರೆದ ಮಧ್ಯವಯಸ್ಕ ವ್ಯಕ್ತಿಯೊಬ್ಬನಿಗೆ ನರ್ಸ್ ಮಂಗಳಾರತಿ ಮಾಡಿದಂತಹ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಾಜಿ ಸೈನಿಕ 42 ವರ್ಷದ ರಮೇಶ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಅತ್ತೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಡೆಹ್ರಾಡೂನ್‌ನ ಸಿಎಂಐ ಆಸ್ಪತ್ರೆಗೆ ಬಂದಿದ್ದ. ಆದರೆ ಕುಡಿದ ಮಾತಿನಲ್ಲಿದ್ದ ಈತ ಅಲ್ಲಿನ ನರ್ಸ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೊದಲಿಗೆ ಆತನಿಗೆ ಎಚ್ಚರಿಕೆ ನೀಡಿ ಸುಮ್ಮನಿರಲಾಗಿತ್ತು. ಆದರೆ ಆತ ಮರುದಿನವೂ ಬಂದು ಅಸಭ್ಯವಾಗಿ ವರ್ತಿಸಲು ಶುರು ಮಾಡಿದಾಗ ತಾಳ್ಮೆ ಕಳೆದುಕೊಂಡ ನರ್ಸ್ ಆತನ ಕೆನ್ನೆಗೆ ಬಾರಿಸಿದ್ದಾಳೆ.

5000 ಕೊಡ್ತಿನಿ ಜೊತೆಗೆ ಬಾ ಎಂದು ಕರೆದು ಕಿರುಕುಳ

ಈ ಘಟನೆ ಅಲ್ಲಿದ್ದ ಸ್ಥಳೀಯರ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಆತನಿಗೆ ಥಳಿಸುತ್ತಿರುವ ನರ್ಸ್ 500 ಸಾವಿರ ಕೊಡ್ತಿನಿ ನನ್‌ ಜೊತೆ ಬಾ ಎಂದು ಆತ ಕರೆದಿದ್ದಾನೆ ಎಂದು ಆರೋಪಿಸಿದ್ದಾರೆ. ನೀನು ಯಾಕೆ ಹೀಗೆ ಹೇಳ್ತಿದ್ದೀಯಾ? ನಿನ್ನ ಸಮಸ್ಯೆ ಏನು? ಕಳೆದ ರಾತ್ರಿಯಿಂದ ಈತ ಇಲ್ಲಿ ಹುಡುಗಿಯರಿಗೆ ಕಿರುಕುಳ ನೀಡ್ತಿದ್ದಾನೆ. ಆತ 5000 ಸಾವಿರ ತಗೋ ನನ್ ಜೊತೆ ಬಾ ಅಂತ ಹೇಳ್ತಾನೇ ಇದ್ದಾನೆ. 112ಗೆ ಕರೆ ಮಾಡಿ ಪೊಲೀಸರನ್ನ ಕರೆಸಿ, ನಾವು ಇಲ್ಲಿ ಕೆಲಸ ಮಾಡುವವರು, ಅವಮಾನ ಮಾಡಿಸಿಕೊಳ್ಳಲು ಬಂದವರಲ್ಲ, ಈತ ರೋಗಿಯ ಸಹಾಯಕನಾಗಿ ಇಲ್ಲಿಗೆ ಬಂದಿದ್ದ, ನಿನ್ನೆಯಿಂದ ಈತ ನನ್ನ ಹಿಂದೆ ಬಿದ್ದಿದ್ದು, ನನ್ನ ನಂಬರ್ ನೀಡುವಂತೆ ಕೇಳ್ತಿದ್ದಾನೆ. ನನ್ನ ಫಾಲೋ ಮಾಡುತ್ತಾ ನನ್ನ ಹಿಂದಿಂದೆ ಬರ್ತಿದ್ದಾನೆ ಎಂದು ನರ್ಸ್‌ ಹೇಳುತ್ತಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಆಸ್ಪತ್ರೆ ವ್ಯವಸ್ಥಾಪಕ ಭುವನ್ ಚಂದ್ರ ದಿಮ್ರಿ, ಆರೋಪಿಯು ತನ್ನ ಅತ್ತೆಯೊಂದಿಗೆ ಬಂದಿದ್ದು, ಅವರ ಅತ್ತೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗುರುವಾರ ರಾತ್ರಿ ನಮ್ಮ ನರ್ಸ್ ಒಬ್ಬರಿಗೆ ಆತ ಅಶ್ಲೀಲವಾಗಿ ಮಾತನಾಡಿದ್ದಾನೆ ಆತ ಮದ್ಯದ ಅಮಲಿನಲ್ಲಿದ್ದ ಎಂದು ಅವರು ಶಂಕಿಸಿದ್ದಾರೆ ಘಟನೆಯ ನಂತರ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆತನನ್ನು ಹೊರಹೋಗುವಂತೆ ಕೇಳಿಕೊಂಡರು.

ಆದರೂ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಶಿಫ್ಟ್ ಬದಲಾಗುವ ಮೊದಲು ಆತ ಮತ್ತೆ ಹಿಂತಿರುಗಿದ್ದಾನೆ ಹಾಗೂ ಅದೇ ನರ್ಸ್ ಜೊತೆ ಆತ ಅನುಚಿತ ವರ್ತನೆಯನ್ನು ಮುಂದುವರಿಸಿದ್ದಾನೆ ಇದು ಉದ್ವಿಗ್ನತೆಯನ್ನು ಹೆಚ್ಚಿಸಿತು ನಮ್ಮ ಸಿಬ್ಬಂದಿ ಮಧ್ಯಪ್ರವೇಶಿಸಿ ಪೊಲೀಸರನ್ನು ಆಸ್ಪತ್ರೆಗೆ ಕರೆಸಲಾಯಿತು ಎಂದು ದಿಮ್ರಿ ಹೇಳಿದ್ದು, ಕರ್ತವ್ಯದಲ್ಲಿರುವ ನರ್ಸಿಂಗ್ ತಂಡದ ಸುರಕ್ಷತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಆಸ್ಪತ್ರೆ ಆಡಳಿತ ಮಂಡಳಿಯ ದೂರಿನ ಆಧಾರದ ಮೇಲೆ, ರಮೇಶ್ ಸಿಂಗ್ ವಿರುದ್ಧ ಬಿಎನ್ಎಸ್ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ) ಮತ್ತು 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ದಲನ್ವಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಘರ್ ಪೊಲೀಸ್ ಚೆಕ್‌ಪೋಸ್ಟ್‌ನ ಉಸ್ತುವಾರಿ ಎಸ್‌ಐ ನರೇಂದ್ರ ಕೋಥಿಯಾಲ್ ಹೇಳಿದ್ದಾರೆ.

ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಕಿರುಕುಳ ನೀಡಿದ ವ್ಯಕ್ತಿಗೆ ಸರಿಯಾಗಿ ಬಾರಿಸಿದ ನರ್ಸ್‌ ಬೆಂಬಲಕ್ಕೆ ನಿಂತಿದ್ದಾರೆ. ಆತನಿಗೆ ಹೊಡೆದ ಒಂದೊಂದು ಹೊಡೆತವೂ ಸಮಾಧಾನ ನೀಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ಕೃತ್ಯವನ್ನು ಎಸಗಿದ ಆತನನ್ನು ಕೆಲ ಪುರುಷರು ಕಾಮೆಂಟ್‌ಗಳಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ದಿಗ್ಭ್ರಮೆ ಮೂಡಿಸಿದೆ.

ಇದನ್ನೂ ಓದಿ: ದಿವಾಳಿಯಿಂದ ಸಂಸ್ಥೆಯನ್ನು ಲಾಭದ ಹಂತಕ್ಕೇರಿಸಿದ ಉದ್ಯೋಗಿಗಳಿಗೆ ಲಕ್ಸುರಿ ಕಾರು ಗಿಫ್ಟ್ ನೀಡಿದ ಮಾಲೀಕ

ಇದನ್ನೂ ಓದಿ: Plane Crash: ಸ್ಕಿಡ್ ಆಗಿ ರನ್‌ವೇಯಿಂದ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ : ಇಬ್ಬರು ಸಾವು

View post on Instagram