Rajasthan Cow climbs Water Tank: 60 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹಸುವೊಂದು ಹತ್ತಿದ ಘಟನೆ ನಡೆದಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುವ ಮುನ್ನವೇ ಹಸು ಸ್ವತಃ ಕೆಳಗಿಳಿದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜ್ಮೀರ್: ಕುಡಿದ ಮತ್ತಿನಲ್ಲಿ ಕೆಲವರು ವಾಟರ್ ಟ್ಯಾಂಕನ್ನು ಅಥವಾ ಕರೆಂಟ್ ಕಂಬವನ್ನೋ ಏರುವುದನ್ನು ನೀವು ನೋಡಬಹುದು. ಕೆಲವರು ಹೆಂಡ್ತಿ ಕೋಪಗೊಂಡು ತವರಿಗೆ ಹೋದಳು ಪ್ರೇಯಸಿ ಸಿಗಲಿಲ್ಲ ಎಂದೆಲ್ಲಾ ಕರೆಂಟ್ ಕಂಬವನ್ನು ಟೆಲಿಫೋನ್ ಟವರನ್ನೋ ಏರಿದ ಹಲವು ನಿದರ್ಶನಗಳಿವೆ. ಅದೇ ರೀತಿ ಇಲ್ಲೊಂದು ಕಡೆ ಹಸುವೊಂದು 60 ಅಡಿ ಎತ್ತರದಲ್ಲಿದ್ದ ನೀರಿನ ಟ್ಯಾಂಕ್ ಮೇಲೇರಿ ಹೋಗಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಹಲವು ಕಾಮೆಂಟ್‌ಗಳಿಗೆ ಕಾರಣವಾಗಿದೆ.
ನೀರಿನ ಟ್ಯಾಂಕ್ ಏರಿದ ಹಸುವಿನ ವೀಡಿಯೋ ಭಾರಿ ವೈರಲ್
ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಅಷ್ಟು ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿ ಹೋಗುವುದಕ್ಕೆ ಹಸುವಿಗೆ ಅಲ್ಲಿ ಏನು ಕಾಣಿಸಿತು ಎಂದು ಅಚ್ಚರಿಪಟ್ಟಿದ್ದಾರೆ. ವಿಚಾರ ತಿಳಿದ ಸ್ಥಳೀಯ ಅಧಿಕಾರಿಗಳು ನಂತರ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದರು.
ಹಸುವಿನ ರಕ್ಷಣೆಗಾಗಿ ಮೊದಲಿಗೆ ಪೊಲೀಸರು ಹಾಗೂ ಅಧಿಕಾರಿಗಳು ಕ್ರೇನ್ ತರಿಸಿದ್ದಾರೆ. ಆದರೆ ರಾತ್ರಿಯಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಮುಂಜಾನೆ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಇವರು ತನ್ನ ರಕ್ಷಣೆಗೆ ಬರುತ್ತಾರೆ ಎಂದು ಕಾದರೆ ಇಲ್ಲೇ ಬಾಕಿಯಾಗಬೇಕು ಎಂದು ಅಂದುಕೊಂಡಿತೋ ಏನೋ ಆ ಹಸು ತಾನೇ ಸ್ವತಃ ರಾತ್ರಿಯೇ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿದು ಬಂದಿದೆ. ಆದರೆ ಹಸು ವಾಟರ್ ಟ್ಯಾಂಕ್ ಮೇಲೇರಿರುವ ವೀಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಹಾಸ್ಯ ಚಟಾಕಿಗೆ ಕಾರಣವಾಗಿದೆ.
ಹಲವು ಹಾಸ್ಯಮಯ ಕಾಮೆಂಟ್ ಮಾಡಿದ ನೆಟ್ಟಿಗರು
ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಹಸು ವಾಟರ್ ಟ್ಯಾಂಕ್‌ನ ಮೇಲಿನ ಮೆಟ್ಟಿಲುಗಳಿಂದ ಕೆಲ ಮೆಟ್ಟಿಲು ಕೆಳಗೆ ಮೇಲ್ಮುಖವಾಗಿ ನಿಂತಿದ್ದು, ಟ್ಯಾಂಕ್‌ನ ಮೇಲ್ಭಾಗದಲ್ಲಿ ನೂರಾರು ಪರಿವಾಳಗಳು ಕುಳಿತಿರುವುದನ್ನು ಕಾಣಬಹುದಾಗಿದೆ. ಈ ಹಸುವಿನ ಆಂಟಿ ಅದರ ಮದುವೆಗೆ ನಿರಾಕರಿಸಿದ್ದರಿಂದ ಹಸು ಟ್ಯಾಂಕ್ ಮೇಲೇರಿದೆ ಎಂದು ಒಬ್ಬರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ಶೋಲೆ ಸಿನಿಮಾದ ಪಾರ್ಟ್ 2 ಎಂದಿದ್ದಾರೆ. ಕೆಲವರು ಬಸಂತಿ ಎಂದು ಕರೆದಿದ್ದಾರೆ. ಹಾಗೆಯೇ ಈ ಹಸು ಬಹುಶಃ ರೆಡ್‌ಬುಲ್ ಕುಡಿದಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಹಸುವಿಗೆ ಬಾಯಾರಿಕೆಯಾಗಿರಬೇಕು ನೀರು ಕುಡಿಯುವುದಕ್ಕೆ ಮೇಲೇರಿ ಹೋಗಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಹಸುಗಳು, ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹ:
ಟ್ಯಾಂಕ್‌ನ ಮೆಟ್ಟಿಲುಗಳಿಗೆ ಗೇಟುಗಳಿಲ್ಲ ಇದರಿಂದಾಗಿ ಹಸು ಮೇಲೇರಿ ಹೋಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಕೂಡ ಈ ಹಸು ನೀರಿಗಾಗಿಯೇ ಮೇಲೆ ಹೋಗಿದೆ, ಗ್ರಾಮದಲ್ಲಿರುವವರು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ರಾಜಸ್ಥಾನ ಅತೀಯಾದ ಬಿಸಿಲಿನ ತಾಪವನ್ನು ಹೊಂದಿರುವ ರಾಜ್ಯವಾಗಿದೆ.
ಮನೆಯೊಂದಕ್ಕೆ ಬಂದ ಗಾಯಾಳು ಚಿರತೆಯ ರಕ್ಷಣೆ:
ಹಾಗೆಯೇ ರಾಜಸ್ಥಾನದ ದುಂಗರ್‌ಪುರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಅಸ್ವಸ್ಥಗೊಂಡಿದ್ದ ಚಿರತೆಯೊಂದು ಮನೆಯೊಂದಕ್ಕೆ ಬಂದ ಘಟನೆ ನಡೆದಿದ್ದು, ಈ ದೃಶ್ಯವೂ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಈ ಗಾಯಗೊಂಡಿದ್ದ ಚಿರತೆಯನ್ನು ರಕ್ಷಿಸಿದ್ದಾರೆ. ಚಿರತೆ ಮನೆಯ ವಾರೆಂಡದಲ್ಲಿ ಓಡಾಡುತ್ತಿರುವ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ನಾಲ್ಕು ಭಾರಿ ಕಂಪಿಸಿದ ಭೂಮಿ: ನವಜಾತ ಶಿಶುಗಳ ರಕ್ಷಿಸಿದ ನರ್ಸ್‌ಗಳು: ವೀಡಿಯೋ
ಇದನ್ನೂ ಓದಿ: ಗೂಗಲ್ ಜೆಮಿನಿ ನ್ಯಾನೋ ಬನಾನಾ ಟ್ರೆಂಡ್: ರೆಟ್ರೊ ಬಾಲಿವುಡ್ ಲುಕ್‌ನಲ್ಲಿ ಮಿಂಚಲು ಈ ಸೂಪರ್ ಪ್ರಾಂಪ್ಟ್‌ಗಳನ್ನು ಬಳಸಿ
