ಅಸ್ಸಾಂನಲ್ಲಿ ಭಾನುವಾರ ಸಂಭವಿಸಿದ ಭೂಕಂಪದಲ್ಲಿ ಆಸ್ಪತ್ರೆಯೊಂದರ ಎನ್‌ಐಸಿಯು ಘಟಕದಲ್ಲಿ ನವಜಾತ ಶಿಶುಗಳನ್ನು ರಕ್ಷಿಸಿದ ನರ್ಸ್‌ಗಳ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ. ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾದ ಭೂಕಂಪದಿಂದ ಇನ್ಕ್ಯುಬೇಟರ್‌ಗಳು ಅಲುಗಾಡಿದ್ದವು.

ಅಸ್ಸಾಂ ಭೂಕಂಪಕ್ಕೆ ಅಲುಗಿದ ಕಟ್ಟಡಗಳು

ಗುವಾಹಟಿ: ನಿನ್ನೆ ಭಾನುವಾರ ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ರಿಕ್ಟರ್ ಮಾಪಕದಲ್ಲಿ ಇದರ ಪ್ರಮಾಣ 5.8 ತೀವ್ರತೆ ದಾಖಲಾಗಿತ್ತು. ಹಲವು ಸ್ಥಳಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಅದೇ ರೀತಿ ಅಸ್ಸಾಂನ ಆಸ್ಪತ್ರೆಯೊಂದರ ಸಿಸಿಟಿವಿಯಲ್ಲಿ ಭೂಮಿ ಕಂಪಿಸುತ್ತಿರುವ ದೃಶ್ಯವೂ ರೆಕಾರ್ಡ್‌ ಆಗಿದೆ. ನವಜಾತ ಶಿಶುಗಳನ್ನು ಇರಿಸಿರುವ ಎನ್‌ಐಸಿಯು ಘಟಕದಲ್ಲಿ ಭೂಮಿಯ ಕಂಪನಕ್ಕೆ ಮಕ್ಕಳನ್ನು ಮಲಗಿಸಿರುವ ಇನ್ಕ್ಯುಬೇಟರ್‌ಗಳು ಅತ್ತಿತ್ತ ಅಲುಗಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಆ ಘಟಕದಲ್ಲಿದ್ದ ನರ್ಸ್‌ಗಳು ಓಡಿ ಬಂದು ನವಜಾತ ಶಿಶುಗಳನ್ನು ಮಲಗಿಸಿರುವ ಇನ್ಕ್ಯುಬೆಟರ್‌ಗಳನ್ನು ಅಅಲುಗಾಡದಂತೆ ಗಟ್ಟಿಯಾಗಿ ಹಿಡಿದು ಮಕ್ಕಳನ್ನು ರಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಿಸಿಟಿವಿ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನರ್ಸ್‌ಗಳಿಂದ ಎನ್‌ಐಸಿಯುನಲ್ಲಿದ ನವಜಾತ ಶಿಶುಗಳ ರಕ್ಷಣೆ

ಅಸ್ಸಾಂನ ಆದಿತ್ಯ ಆಸ್ಪತ್ರೆಯಲ್ಲಿ ಸೆರೆಯಾದ ದೃಶ್ಯ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗಷ್ಟೇ ಜನಿಸಿದ ಮಕ್ಕಳನ್ನು ಕೆಲವು ಆರೋಗ್ಯ ಸಮಸ್ಯೆಯ ಕಾರಣಕ್ಕೆ ಅಥವಾ ನಿಗದಿತ ದಿನಗಳಿಗಿಂತ ಮೊದಲೇ ಜನಿಸಿದ ಕಾರಣಕ್ಕೆ ಅಥವಾ ಬೆಚ್ಚಗಿನ ವಾತಾವರಣದ ಅಗತ್ಯದ ಕಾರಣಕ್ಕೆ, ಅಗತ್ಯ ಔಷಧಿಯ ಚಿಕಿತ್ಸೆಯ ಅಗತ್ಯವಿರುವುದರಿಂದ ಈ ನವಜಾತ ಶಿಶುಗಳನ್ನು ಈ ತೀವ್ರ ನಿಗಾ ಘಟಕದಲ್ಲಿ ಇನ್‌ಕ್ಯೂಬೆಟರ್‌ನಲ್ಲಿ ಮಲಗಿಸಿರುತ್ತಾರೆ. ಆದರೆ ನಿನ್ನೆ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕಾಣಿಸಿಕೊಂಡ ಭೂಕಂಪನದಿಂದ ಅಸ್ಸಾಂನ ಖಾಸಗಿ ಆದಿತ್ಯ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿಯೂ ಮಕ್ಕಳನ್ನು ಇಟ್ಟ ಇನ್‌ಕ್ಯುಬೆಟರ್‌ಗಳು ಅಲುಗಾಡುವುದನ್ನು ಕಾಣಬಹುದಾಗಿದೆ.

ಭೂಕಂಪನದಿಂದಾಗಿ ಕಟ್ಟಡವೇ ಅಲುಗುತ್ತಿರುವುದನ್ನು ಗಮನಿಸಿದ ನರ್ಸ್‌ಗಳು ಕೂಡಲೇ ಕುಳಿತಲ್ಲಿಂದ ಎದ್ದು ಶಿಶುಗಳನ್ನು ಮಲಗಿಸಿದಲ್ಲಿಗೆ ಹೋಗಿ ಆ ಇನ್‌ಕ್ಯುಬೆಟರ್‌ಗಳು ಅಲುಗದಂತೆ ಹಿಡಿದುಕೊಳ್ಳುವುದನ್ನು ಕಾಣಬಹುದಾಗಿದೆ.

ಅಸ್ಸಾಂನಲ್ಲಿ ನಾಲ್ಕು ಭಾರಿ ಕಂಪಿಸಿದ ಭೂಮಿ:

ಅಸ್ಸಾಂನಲ್ಲಿ ನಿನ್ನೆ ಸಂಜೆ 4.41ರ ಸುಮಾರಿಗೆ 5.8 ತೀವ್ರತೆಯ ಭೂಕಂಪನದ ಅನುಭವ ಆಗಿತ್ತು. ಹಾಗೆಯೇ ಇದಾಗಿ 16 ನಿಮಿಷದಲ್ಲಿ 4.58ರ ಸುಮಾರಿಗೆ ಮತ್ತೊಮ್ಮೆ ಭೂಮಿ ಕಂಪಿಸಿದ್ದು, 3.1 ತೀವ್ರತೆ ದಾಖಲಾಗಿದೆ. ಇದಾದ ನಂತರ ಮತ್ತೆ ಸಂಜೆ 5.21ರ ಸುಮಾರಿಗೆ ಮತ್ತೊಮ್ಮೆ ಭೂಮಿ ಕಂಪಿಸಿದ್ದು, 2.9 ತೀವ್ರತೆ ದಾಖಲಾಗಿದೆ. ಹಾಗೆಯೇ ಸಂಜೆ 6.11ರ ಸುಮಾರಿಗೆ ಮತ್ತೊಮ್ಮೆ ಭೂಮಿ ಕಂಪಿಸಿದ್ದು 2.7 ತೀವ್ರತೆ ದಾಖಲಾಗಿತ್ತು. ಒಟ್ಟು ನಾಲ್ಕು ಭಾರಿ ಭೂಮಿ ಕಂಪಿಸಿದ್ದು, 3ನೇ ಭಾರಿ ಕಂಪಿಸಿದ ಭೂಕಂಪನದ ಕೇಂದ್ರ ಬಿಂದುವೂ ಅಸ್ಸಾಂನ ಸೋನಿತ್‌ಪುರದಲ್ಲಿತ್ತು ಹಾಗೆಯೇ ಉಳಿದ ಮೂರು ಭೂಕಂಪನಗಳ ಕೇಂದ್ರ ಬಿಂದು ಸಮೀಪದ ಉಡಲ್‌ಗುರಿ ಜಿಲ್ಲೆಯಲ್ಲಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಸ್ಸಾಂ ಸಿಎಂಗೆ ಕರೆ ಮಾಡಿ ವಿಚಾರಿಸಿದ ಪ್ರಧಾನಿ

ಈ ಭೂಕಂಪ ಸಂಭವಿಸುವುದಕ್ಕೂ ಸ್ವಲ್ಪ ಸಮಯದ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನಲ್ಲಿ ಎರಡು ದಿನಗಳ ಭೇಟಿ ಮುಗಿಸಿ ಸಂಜೆಯ ವೇಳೆ ಕೋಲ್ಕತ್ತಾಗೆ ತಲುಪಿದ್ದರು. ಆದರೂ ಭೂಕಂಪದ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ ಭೂಕಂಪನದ ಬಗ್ಗೆ ವಿವರ ಪಡೆದರು ಅಲ್ಲದೇ ಕೇಂದ್ರದಿಂದ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದ್ದರು. ಭೂಕಂಪ ಸಂಭವಿಸಿದ ಪ್ರದೇಶದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಭೂಕಂಪ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗೂಗಲ್ ಜೆಮಿನಿ ನ್ಯಾನೋ ಬನಾನಾ ಟ್ರೆಂಡ್‌: ರೆಟ್ರೊ ಬಾಲಿವುಡ್ ಲುಕ್‌ನಲ್ಲಿ ಮಿಂಚಲು ಈ ಸೂಪರ್ ಪ್ರಾಂಪ್ಟ್‌ಗಳನ್ನು ಬಳಸಿ

ಇದನ್ನೂ ಓದಿ: ಐಸ್‌ಕ್ರೀಂ ಶಾಪ್‌ಗೆ ನುಗ್ಗಿ ಹೊಟ್ಟೆ ಬಿರಿಯುವಷ್ಟು ಐಸ್‌ಕ್ರೀಂ ತಿಂದು ಅಲ್ಲೇ ನಿದ್ದೆಗೆ ಜಾರಿದ ಕರಡಿ

View post on Instagram