ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಮುಸುಕುಧಾರಿ ದರೋಡೆಕೋರರು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿದೆ.

ಬೆಂಗಳೂರು (ಆ.14): ಕೈಯಲ್ಲಿ ಗನ್ ಹಿಡಿದ ಮುಸುಕುಧಾರಿಗಳು ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ಸಿನಿಮೀಯ ರೀತಿಯಲ್ಲಿ ರಾಬರಿ ಮಾಡಿದ ಬೆಚ್ಚಿಬಿಳಿಸುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್‌ನ ಭೈರವೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ರಾಮ್ ಜ್ಯುವೆಲ್ಲರಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ನಡೆದ ಭೀಕರ ಚಿನ್ನಾಭರಣ ದರೋಡೆ ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದೆ. ಅಂಗಡಿ ಮುಚ್ಚುವ ವೇಳೆಗೆ ಕೈಯಲ್ಲಿ ಗನ್ ಹಿಡಿದು ಎಂಟ್ರಿಕೊಟ್ಟ ಮೂವರು ಮುಸುಕುಧಾರಿಗಳು, ಚಿನ್ನದ ವ್ಯಾಪಾರಿ ಕನ್ನಯ್ಯಲಾಲ್ ಮತ್ತು ಸಿಬ್ಬಂದಿಯನ್ನು ಬೆದರಿಸಿ, ಟೇಬಲ್‌ ಮೇಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜ್ಯೂವೆಲ್ಲರಿ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.

ರಾತ್ರಿ ಸುಮಾರು 9:30ರ ಸುಮಾರಿಗೆ ಅಂಗಡಿ ಮುಚ್ಚುವ ಸಂದರ್ಭದಲ್ಲಿ ಮೂವರು ದರೋಡೆಕೋರರು ಒಳಗೆ ನುಗ್ಗಿದ್ದಾರೆ. ಈ ವೇಳೆ ಕನ್ನಯ್ಯಲಾಲ್ ಕೂಗಾಡಿದರೂ, ದರೋಡೆಕೋರರು ಸಿಬ್ಬಂದಿಯನ್ನು ತಳ್ಳಿ, ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾರೆ. ಕೂಗಾಟ ಕೇಳಿ ಪಕ್ಕದ ಅಂಗಡಿಯವರು ಧಾವಿಸಿದರಾದರೂ, ದರೋಡೆಕೋರರು ಆ ವೇಳೆಗೆ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದಾರೆ.

ಈ ಘಟನೆಯಿಂದ ಸ್ಥಳೀಯ ವ್ಯಾಪಾರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭವಾಗಿದೆ. ಕಳೆದ ವರ್ಷ ಬ್ಯಾಡರಹಳ್ಳಿ ಮತ್ತು ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇದೇ ರೀತಿಯ ಗುಂಡು ಹಾರಿಸಿ ಜ್ಯುವೆಲ್ಲರಿ ಶಾಪ್ ದರೋಡೆ ನಡೆದಿತ್ತು. ಈ ಘಟನೆಗಳು ಪೊಲೀಸ್ ಇಲಾಖೆಯ ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ತನಿಖೆ ಚುರುಕುಗೊಂಡಿದ್ದು, ದರೋಡೆಕೋರರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.