Chaitanyananda Saraswati:ಶೃಂಗೇರಿಯ ಶಾರದಾ ಪೀಠಕ್ಕೆ ಸೇರಿದ ದೆಹಲಿಯ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಸ್ವಾಮೀಜಿ ಚೈತನ್ಯಾನಂದ ಸರಸ್ವತಿ ವಿರುದ್ಧ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಘಟನೆಯ ಬಳಿಕ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.
ದೆಹಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಮುಖ್ಯಸ್ಥ ಹಾಗೂ ಸ್ವಾಮೀಜಿಯೂ ಆಗಿರುವ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥಸಾರಥಿ ವಿರುದ್ಧ ಕಾಲೇಜಿನ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೈಂಗಿ*ಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೆಹಲಿ ವಸಂತ್ ಕುಂಜ್ ಪ್ರದೇಶದಲ್ಲಿರುವ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ವ್ಯವಸ್ಥಾಪಕರೂ ಆಗಿರುವ ಚೈತನ್ಯಾನಂದ ಸರಸ್ವತಿ ವಿರುದ್ಧ ದೆಹಲಿ ಪೊಲೀಸರು ಸುಮಾರು 15 ವಿದ್ಯಾರ್ಥಿನಿಯರಿಗೆ ಲೈಂಗಿ*ಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತರು ಹೇಳಿಕೆ ನೀಡಿದ ನಂತರ ಈ ಪ್ರಕರಣ ದಾಖಲಿಸಲಾಗಿದೆ. ಪಾರ್ಥಸಾರಥಿ ಎಂದೂ ಕರೆಯಲ್ಪಡುವ ಸರಸ್ವತಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇವರು ಬಳಸುತ್ತಿದ್ದ ಐಷಾರಾಮಿ ಕಾರು ನಕಲಿ ಯುಎನ್ ನೋಂದಣಿಯನ್ನು ಹೊಂದಿತ್ತು ಎಂದು ಪೊಲೀಸರು ಪತ್ತೆ ಮಾಡಿದ್ದು, ಪೊಲೀಸರು ಅದನ್ನು ಜಪ್ತಿ ಮಾಡಿದ್ದಾರೆ.
ಸ್ವಾಮೀಜಿಯಿಂದಲೇ ವಿದ್ಯಾರ್ಥಿಗಳಿಗೆ ಲೈಂ*ಗಿಕ ಕಿರುಕುಳ
ಈ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ ಶ್ರೀ ಶೃಂಗೇರಿ ಮಠ ಮತ್ತು ಅದರ ಆಸ್ತಿಗಳ ಆಡಳಿತಾಧಿಕಾರಿ ಪಿಎ ಮುರಳಿ ಅವರು ಆಗಸ್ಟ್ 4ರಂದೇ ಮೊದಲು ದೂರು ದಾಖಲಿಸಿದ್ದರು. ಈ ಸ್ವಾಮೀಜಿಯ ಲೈಂಗಿ*ಕ ದೌರ್ಜನ್ಯಕ್ಕೆ ತುತ್ತಾದ ವಿದ್ಯಾರ್ಥಿಗಳು, ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದ ಅಡಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ (ಪಿಜಿಡಿಎಂ) ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಸ್ತುತ 32 ವಿದ್ಯಾರ್ಥಿನಿಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅವರಲ್ಲಿ 17 ಮಂದಿ ವಿದ್ಯಾರ್ಥಿನಿಯರು, ಆರೋಪಿಯೂ ತಮ್ಮ ವಿರುದ್ಧ ನಿಂದನೀಯ ಭಾಷೆ, ಅಶ್ಲೀಲ ವಾಟ್ಸಾಪ್ ಮತ್ತು ಎಸ್‌ಎಂಎಸ್ ಸಂದೇಶಗಳನ್ನು ಕಳುಹಿಸಿದ ಮತ್ತು ಒತ್ತಾಯದ ದೈಹಿಕ ಸಂಪರ್ಕ ಮಾಡಿದ ಆರೋಪಗಳನ್ನು ಹೊರಿಸಿದ್ದಾರೆ. ಆತನ ಆಸೆ ಈಡೇರಿಸುವಂತೆ ಈಡೇರಿಸುವಂತೆ ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ಒತ್ತಡ ಹೇರಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕಾಲೇಜಿನ ಮೇಲೆ ದಾಳಿ, ಹಾರ್ಡ್ ಡಿಸ್ಕ್, ಎನ್‌ವಿಆರ್ ವಶಕ್ಕೆ:
ವಿದ್ಯಾರ್ಥಿನಿಯರ ಹೇಳಿಕೆ ಹಾಗೂ ಹೆಚ್ಚಿನ ವಿಚಾರಣೆಯ ಆಧಾರದ ಮೇಲೆ, ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಸೆಕ್ಷನ್ 75(2), 79, ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಶಿಕ್ಷಣ ಸಂಸ್ಥೆ ಮತ್ತು ಆರೋಪಿಗೆ ಸಂಬಂಧಿಸಿದ ಇತರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸಂಸ್ಥೆಯಿಂದ ಹಾರ್ಡ್ ಡಿಸ್ಕ್‌ಗಳು ಮತ್ತು ಎನ್‌ವಿಆರ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ.
16 ಸಂತ್ರಸ್ತರ ಹೇಳಿಕೆ ದಾಖಲು
ಘಟನೆಗೆ ಸಂಬಂಧಿಸಿದಂತೆ ಜೆಎಂಎಫ್‌ಸಿ ಪಟಿಯಾಲ ಹೌಸ್ ಕೋರ್ಟ್ ಮುಂದೆ ಸೆಕ್ಷನ್ 183 ಬಿಎನ್‌ಎಸ್‌ಎಸ್ ಅಡಿಯಲ್ಲಿ 16 ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ, ಅಧಿಕಾರಿಗಳು ಸಂಸ್ಥೆಯ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದ್ದ ಆರೋಪಿಗೆ ಸೇರಿದ ದುಬಾರಿ ಬೆಲೆಯ ವೋಲ್ವೋ ಕಾರನ್ನು ಪತ್ತೆ ಮಾಡಿದ್ದಾರೆ. ಆ ಕಾರಿನಲ್ಲಿ ವಿಶ್ವಸಂಸ್ಥೆಯ ರಾಜತಾಂತ್ರಿಕರು ಬಳಸುವಂತಹ ನಂಬರ್ ಪ್ಲೇಟ್ 39 UN 1ಇತ್ತು, ಅದು ನಕಲಿ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಶೃಂಗೇರಿಯ ಶ್ರೀ ಶಾರದಾ ಪೀಠದಿಂದ ಹೇಳಿಕೆ ಬಿಡುಗಡೆ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಶೃಂಗೇರಿಯ ಶ್ರೀ ಶಾರದಾ ಪೀಠವು ಆರೋಪಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಅಧಿಕೃತವಾಗಿ ಕಡಿದುಕೊಂಡಿದೆ, ಆರೋಪಿಯ ಕ್ರಮಗಳು ಕಾನೂನುಬಾಹಿರ, ಅನುಚಿತ ಮತ್ತು ಪೀಠದ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಶಾರದಾ ಪೀಠ ಹೇಳಿದೆ. ಘಟನೆ ಸಂಬಂಧ ಪೀಠವು ಸಂಬಂಧಿತ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದೆ ಮತ್ತು ಶಾರದಾ ಪೀಠದ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಅನ್ನು ಡಾ. ಕೃಷ್ಣ ವೆಂಕಟೇಶ್ ಅಧ್ಯಕ್ಷತೆಯ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದಂತೆ ತಡೆಯಲು ಒತ್ತು ನೀಡಲಾಗಿದೆ. ಆದರೆ ಘಟನೆಯ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯ ಬಗ್ಗೆ ಮಾಹಿತಿ ಇರುವವರು ಮುಂದೆ ಬರುವಂತೆ ಪೀಠ ಮನವಿ ಮಾಡಿದೆ.
ಇದನ್ನೂ ಓದಿ: ಮರ್ಸಿಡಿಸ್ ಬೇಂಜ್ ಕಾರ್ ಇದೆ ಕಾಮನ್‌ಸೆನ್ಸ್ ಇಲ್ಲ: ರಸ್ತೆಗೆ ಕಸ ಎಸೆದ ಮಹಿಳೆ ಪ್ರಶ್ನಿಸಿದ್ದಕ್ಕೆ ಉದ್ಧಟತನದ ವರ್ತನೆ
ಇದನ್ನೂ ಓದಿ: ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ
