ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರಿನ ರಾಜರಾಜೇಶ್ವರಿನಗರದ ಯೋಗ ತರಬೇತುದಾರ ನಿರಂಜನ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೋಗ ಸ್ಪರ್ಧೆ ಹಾಗೂ ಉದ್ಯೋಗದ ಆಮಿಷವೊಡ್ಡಿ ಥೈಲ್ಯಾಂಡ್ ಹಾಗೂ ಬೆಂಗಳೂರಿನಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು (ಸೆ.18): ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವೆಸಗಿದ ಆರೋಪ ಕೇಳಿಬಂದಿದ್ದು, ರಾಜರಾಜೇಶ್ವರಿನಗರದ ಯೋಗ ತರಬೇತುದಾರನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಿರಂಜನ ಮೂರ್ತಿ ಬಂಧಿತ ಆರೋಪಿ. ಕರ್ನಾಟಕ ಯೋಗಾಸನ ಕ್ರೀಡಾ ಸಂಘದ (ಕೆವೈಎಸ್‌ಎ) ಕಾರ್ಯದರ್ಶಿಯಾಗಿದ್ದು, ಸನ್‌ಶೈನ್ ಇನ್‌ಸ್ಟಿಟ್ಯೂಟ್‌ನಲ್ಲಿ ಯೋಗ ಕೇಂದ್ರವನ್ನು ನಡೆಸುತ್ತಿದ್ದರು.

ರಾಜರಾಜೇಶ್ವರಿನಗರ ಯೋಗತರಬೇತುದಾರನಿಂದ ಲೈಂಗಿಕ ಕಿರುಕುಳ:

ದೂರುದಾರರು ಪೊಲೀಸರಿಗೆ ತಿಳಿಸಿರುವ ಪ್ರಕಾರ, ಬಾಲಕಿಗೆ 2019ರಿಂದ ಆರೋಪಿಯ ಜೊತೆ ಪರಿಚಯವಿತ್ತು. 2021ರಲ್ಲಿ ಆಕೆ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದಳು. 2023ರಲ್ಲಿ 17 ವರ್ಷದ ಬಾಲಕಿಯಾಗಿದ್ದಾಗ, ನಿರಂಜನ ಮೂರ್ತಿಯವರೊಂದಿಗೆ ಥೈಲ್ಯಾಂಡ್‌ಗೆ ಯೋಗ ಕಾರ್ಯಕ್ರಮಕ್ಕಾಗಿ ಪ್ರಯಾಣಿಸಿದ್ದಳು. ಈ ವೇಳೆ ಆತ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಅಪ್ರಾಪ್ತ ಬಾಲಕಿಗೆ ಆಮಿಷೆವೊಡ್ಡಿ ಲೈಂಗಿಕ ದೌರ್ಜನ್ಯ:

ಈ ಘಟನೆಯ ನಂತರ ಬಾಲಕಿಯು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನಿಲ್ಲಿಸಿದರು. ಬಳಿಕ 2024ರಲ್ಲಿ ಬಾಲಕಿಯು ಮತ್ತೆ ಸನ್‌ಶೈನ್ ಇನ್‌ಸ್ಟಿಟ್ಯೂಟ್‌ನಲ್ಲಿ ಯೋಗ ತರಬೇತಿಗೆ ಸೇರಿಕೊಂಡಾಗ, ನಿರಂಜನ ಮೂರ್ತಿ ಕಿರುಕುಳವನ್ನು ಮುಂದುವರೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 2025ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಭರವಸೆ ಮತ್ತು ಉದ್ಯೋಗ ಒದಗಿಸುವ ನೆಪದಲ್ಲಿ ಆತ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆಗಸ್ಟ್ 22ರಂದು ರಾಜ್ಯ ಮಟ್ಟದ ಉದ್ಯೋಗದ ಆಮಿಷವೊಡ್ಡಿ ಮತ್ತೊಮ್ಮೆ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿದ್ದ ನಿರಂಜನ ಮೂರ್ತಿಯನ್ನು ನಿರಂತರ ಶೋಧ ಕಾರ್ಯಾಚರಣೆಯಿಂದ ಕೊನೆಗೂ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.