Amazon Layoff:ಆನ್‌ಲೈನ್ ದೈತ್ಯ ಅಮೆಜಾನ್, ತನ್ನ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳನ್ನು ರಾತ್ರೋರಾತ್ರಿ ವಜಾಗೊಳಿಸಿದೆ. ಎಐ ಪರಿಕರಗಳ ಮೇಲೆ ಹೆಚ್ಚಿದ ಗಮನ ಮತ್ತು ಸಂಸ್ಥೆಯ ಪುನರ್ರಚನೆಯ ಭಾಗವಾಗಿ ಈ ಉದ್ಯೋಗ ಕಡಿತ ಮಾಡಲಾಗಿದೆ.

ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಉದ್ಯೋಗಿಗಳ ಮನೆಗೆ ಕಳುಹಿಸಿದ ಅಮೇಜಾನ್

ಆನ್‌ಲೈನ್ ಮಾರುಕಟ್ಟೆ ದೈತ್ಯ ಅಮೇಜಾನ್ ತನ್ನ ಸಾವಿರಾರು ಉದ್ಯೋಗಿಗಳನ್ನು ರಾತ್ರಿ ಬೆಳಗಾಗುವುದರೊಳಗೆ ಉದ್ಯೋಗದಿಂದ ವಜಾ ಮಾಡಿ ಮನೆಗೆ ಕಳುಹಿಸಿದೆ. ಸಾವಿರಾರು ಉದ್ಯೋಗಿಗಳು ಮಂಗಳವಾರ ಮುಂಜಾನೆ ಎಳುತ್ತಲೇ ತಮ್ಮ ಮೊಬೈಲ್ ನೋಡಿದವರಿಗೆ ಆಘಾತ ಕಾದಿತ್ತು. ನಿಮ್ಮನ್ನು ನಿಮ್ಮ ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸಂದೇಶ ಅವರ ಮೊಬೈಲ್ ಫೋನ್‌ಗಳಿಗೆ ಬಂದಿತ್ತು. ಉದ್ಯೋಗಿಗಳು ಮುಂಜಾನೆ ಕಚೇರಿಗೆ ಬರುವುದಕ್ಕೂ ಮೊದಲೇ ಸಂಸ್ಥೆ ಅವರನ್ನು ವಜಾ ಮಾಡಿದ ಬಗ್ಗೆ ಅವರ ಫೋನ್‌ಗಳಿಗೆ ಸಂದೇಶ ಕಳುಹಿಸಿದೆ.

ಬ್ಯುಸಿನೆಸ್ ಇನ್‌ಸೈಡರ್‌ಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲ ಉದ್ಯೋಗಿಗಳು ಮಾಹಿತಿ ನೀಡಿದ್ದು, ಕೆಲವರಿಗೆ ಕೂಡಲೇ ಇಮೇಲ್ ಪರೀಕ್ಷಿಸುವಂತೆ ಸಂದೇಶ ಕಳುಹಿಸಿದರೆ ಮತ್ತೆ ಕೆಲವರಿಗೆ ಹೆಲ್ಪ್ ಡೆಸ್ಕ್‌ನ್ನು ಸಂಪರ್ಕಿಸಿ ತಮ್ಮ ಉದ್ಯೋಗದ ಸ್ಥಿತಿಯನ್ನು ಅರಿಯುವಂತೆ ಸಂದೇಶ ಕಳುಹಿಸಲಾಗಿತ್ತು. ಕೆಲಸದ ದಕ್ಷತೆಯ ಪ್ರಯತ್ನ ಹಾಗೂ ಎಐ ಪರಿಕರಗಳ ಮೇಲೆ ಹೆಚ್ಚಿದ ಗಮನಕ್ಕೆ ಸಂಬಂಧಿಸಿದ ಸಂಸ್ಥೆಯ ಪ್ರಮುಖ ಪುನರ್ರಚನೆಯ ಭಾಗವಾಗಿ ಸುಮಾರು 14,000 ಕಾರ್ಪೊರೇಟ್ ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಅಮೆಜಾನ್ ಘೋಷಣೆ ಮಾಡಿದ ನಂತರ ಉದ್ಯೋಗಿಗಳಿಗೆ ಈ ಉದ್ಯೋಗ ಕಡಿತದ ಸಂದೇಶ ಬಂದಿದೆ.

ಸೇವೆಯಿಂದ ವಜಾಗೊಂಡವರಿಗೆ 90 ದಿನಗಳ ಪೂರ್ಣ ವೇತನ

ಆಮೇಜಾನ್ ನಿರ್ಧಾರದಿಂದ ಕೆಲಸ ಕಳೆದುಕೊಂಡವರಲ್ಲಿ ಬಹುತೇಕರು ಅಮೆರಿಕನ್ ಉದ್ಯೋಗಿಗಳಾಗಿದ್ದು, ರಿಟೈಲ್ ಮ್ಯಾನೇಜರ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಕಂಪನಿಯ ಹೆಚ್‌ ಆರ್ ಮುಖ್ಯಸ್ಥ ಬೆಥ್ ಗ್ಯಾಲೆಟ್ಟಿ ಮೆಮೋ ಕಳುಹಿಸಿದ್ದು, ಈ ಮೆಮೋವನ್ನು ತನ್ನ ಉದ್ಯೋಗಿಗಳಿಗೆ ಸ್ಲಾಕ್ (Slack) ಮೂಲಕ ಕಳುಹಿಸಲಾಗಿತ್ತು. ಹೀಗೆ ಸೇವೆಯಿಂದ ವಜಾಗೊಂಡ ಉದ್ಯೋಗಿಗಳಿಗೆ ಪ್ಯಾಕೇಜ್ ಜೊತೆಗೆ 90 ದಿನಗಳ ಕಾಲ ಪೂರ್ಣ ಪ್ರಮಾಣದ ವೇತನ ಹಾಗೂ ಕಂಪನಿಯ ಉದ್ಯೋಗಿಗೆ ನೀಡುವ ಸವಲತ್ತುಗಳನ್ನು ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಮಂಗಳವಾರ ಪ್ರಕಟಿಸಿದ ಪ್ರತ್ಯೇಕ ಬ್ಲಾಗ್ ಪೋಸ್ಟ್‌ನಲ್ಲಿ, ಬೆಥ್ ಗ್ಯಾಲೆಟ್ಟಿ ಅವರು ಕೃತಕ ಬುದ್ಧಿಮತ್ತೆಯಲ್ಲಿನ ತ್ವರಿತ ಪ್ರಗತಿಯಿಂದಾಗಿ ಈ ಉದ್ಯೋಗ ಕಡಿತ ಉಂಟಾಗಿದೆ. ಕಂಪನಿಯ ಬಲವಾದ ಕಾರ್ಯಕ್ಷಮತೆಯ ಹೊರತಾಗಿಯೂ ಅಮೆಜಾನ್ ಈ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಜಗತ್ತು ವೇಗವಾಗಿ ಬದಲಾಗುತ್ತಿದೆ. ಈ ಪೀಳಿಗೆಯ ಎಐಯೂ, ಇಂಟರ್ನೆಟ್ ನಂತರ ನಾವು ನೋಡಿದ ಅತ್ಯಂತ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನವಾಗಿದೆ ಮತ್ತು ಇದು ಕಂಪನಿಗಳು ಹಿಂದೆಂದಿಗಿಂತಲೂ ವೇಗವಾಗಿ ಹೊಸತನವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಗ್ಯಾಲೆಟ್ಟಿ ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ, ಅಮೆಜಾನ್ ನಿರ್ವಹಣಾ ಹಂತಗಳನ್ನು ಕಡಿಮೆ ಮಾಡುವುದು, ಅಧಿಕಾರಿ ವರ್ಗವನ್ನು ಕಡಿಮೆ ಮಾಡುವುದು, ಖರ್ಚನ್ನು ಬಿಗಿಗೊಳಿಸುವುದು, ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ಪರಿಹಾರ ರಚನೆಗಳನ್ನು ಪರಿಷ್ಕರಿಸುವುದು ಮತ್ತು ಹೆಚ್ಚಿನ ಕಾರ್ಪೊರೇಟ್ ಉದ್ಯೋಗಿಗಳು ವಾರದಲ್ಲಿ ಐದು ದಿನಗಳು ಕಚೇರಿಗೆ ಮರಳುವುದನ್ನು ಕಡ್ಡಾಯಗೊಳಿಸುವ ಮೂಲಕ ಕೆಲಸದ ಸ್ಥಳದಲ್ಲಿ ಮತ್ತಷ್ಟು ಶಿಸ್ತನ್ನು ಅನುಸರಿಸಿತ್ತು.

ಈ ವರ್ಷದ ಆರಂಭದಲ್ಲಿ, ಅಮೆಜಾನ್ ತನ್ನ ದೊಡ್ಡ ಚಿಲ್ಲರೆ ವಿಭಾಗದಲ್ಲಿ ನೇಮಕಾತಿಗಳನ್ನು ಸ್ಥಗಿತಗೊಳಿಸಿತು. ಜುಲೈನಲ್ಲಿ, ಅದರ ಕ್ಲೌಡ್ ಕಂಪ್ಯೂಟಿಂಗ್ ವಿಭಾಗವಾದ ಅಮೆಜಾನ್ ವೆಬ್ ಸರ್ವೀಸಸ್ ಕೂಡ ಹಲವು ಸುತ್ತಿನ ಉದ್ಯೋಗ ವಜಾವನ್ನು ಮಾಡಿತ್ತು. ತಂತ್ರಜ್ಞಾನ ವಲಯದಾದ್ಯಂತ, ಪ್ರಮುಖ ಕಂಪನಿಗಳು ನಿರಂತರ ಬಲವಾದ ಆರ್ಥಿಕ ಕಾರ್ಯಕ್ಷಮತೆಯ ಹೊರತಾಗಿಯೂ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಮೈಕ್ರೋಸಾಫ್ಟ್ 2025 ರಲ್ಲಿ ಸುಮಾರು 15,000 ಹುದ್ದೆಗಳನ್ನು ಕಡಿತಗೊಳಿಸುವ ಯೋಜನೆಯನ್ನು ಬಹಿರಂಗಪಡಿಸಿದೆ. ಮೆಟಾ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ, ಎಐ ಸಂಬಂಧಿತ ವಜಾಗಳನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಉದ್ಯೋಗಕ್ಕಾಗಿ ಲಂಚ ಎಫ್‌ಐಆರ್ ದಾಖಲಿಸಲು ತಮಿಳುನಾಡು ಪೊಲೀಸರಿಗೆ ಇಡಿ ಸೂಚನೆ

ಇದನ್ನೂ ಓದಿ: ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ ಏರ್ ಇಂಡಿಯಾಗೆ ಆಗಿರುವ ನಷ್ಟ ಎಷ್ಟು ಕೋಟಿ?