Bengaluru road rage murder: ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದ ಸಣ್ಣ ಅಪಘಾತವೊಂದು ಬೈಕ್ ಸವಾರನ ಭೀಕರ  ಹತ್ಯೆಗೆ ಕಾರಣವಾಗಿದೆ. ಕಾರಿನಲ್ಲಿದ್ದ ದಂಪತಿ ಜಿದ್ದಿಗೆ ಬಿದ್ದು ಬೈಕ್ ಸವಾರರನ್ನು ಬೆನ್ನಟ್ಟಿ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ.

ಅಪಘಾತದ ನಂತರ ಬೈಕ್ ಸವಾರರ ಕಾರಿನಲ್ಲಿ ಚೇಸ್ ಮಾಡಿ ಕೊಲೆ

ಬೆಂಗಳೂರು: ಸಣ್ಣ ಅಪಘಾತವೊಂದಕ್ಕೆ ಸಂಬಂಧಿಸಿದಂತೆ ಬೈಕರ್‌ಗಳ ಚೇಸ್‌ ಮಾಡಿ ಡಿಕ್ಕಿ ಹೊಡೆದು ಅದನ್ನು ಅಪಘಾತ ಎಂದು ಬಿಂಬಿಸಿದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ದರ್ಶನ್ ಈ ದುರಂತದಲ್ಲಿ ಬಲಿಯಾದ ಬೈಕ್ ಸವಾರ. ಕಾರಿನಲ್ಲಿದ್ದ ಮನೋಜ್ ಕುಮಾರ್ ಹಾಗೂ ಆತನ ಪತ್ನಿ ಆರತಿ ಶರ್ಮಾ ಅವರು ಸಣ್ಣದೊಂದು ಅಪಘಾತಕ್ಕೆ ಸಂಬಂಧಿಸಿದಂತೆ ಬೈಕ್ ಸವಾರರ ಮೇಲೆ ಜಿದ್ದಿಗೆ ಬಿದ್ದು, ಅವರನ್ನು ಬೆನ್ನಟ್ಟಿಕೊಂಡು ಹೋಗಿ ಕಾರಿನಿಂದ ಬೈಕ್ ಹಿಂಬದಿಗೆ ಗುದ್ದಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ದರ್ಶನ್ ಸ್ಥಳದಲ್ಲೇ ಮೃತಪಟ್ಟರೆ, ಹಿಂಬದಿ ಸವಾರ ವರುಣ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಟೋಬರ್ 25ರಂದು ರಾತ್ರಿ ಈ ಘಟನೆ ನಡೆದಿದೆ.

ಘಟನೆಯ ಬಳಿಕ ಆರೋಪಿಗಳಾದ ಕಾರು ಚಾಲಕ ಮನೋಜ್ ಕುಮಾರ್ ಹಾಗೂ ಆತನ ಪತ್ನಿ ಆರತಿ ಶರ್ಮಾ ಅವರು ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಸ್ವಲ್ಪ ಹೊತ್ತಿನ ನಂತರ ಇವರು ಅಪಘಾತ ಸ್ಥಳಕ್ಕೆ ಮಾಸ್ಕ್ ಧರಿಸಿಕೊಂಡು ಬಂದು ಸ್ಥಳದಲ್ಲಿ ತುಂಡಾಗಿ ಬಿದ್ದಂತಹ ಕಾರಿನ ಕೆಲ ಭಾಗಗಳನ್ನು ಹೆಕ್ಕಿಕೊಂಡು ಹೋಗಿದ್ದಾರೆ. ಇದು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.

ಆರೋಪಿಗಳಾದ ಮನೋಜ್‌ ಕುಮಾರ್ ಆರತಿ ಶರ್ಮಾ ಬಂಧನ

ಕಾರು ಡಿಕ್ಕಿ ಹೊಡೆಯಲ್ಪಟ್ಟು ಹತ್ಯೆಗೀಡಾದ ದರ್ಶನ್ ಹಾಗೂ ವರುಣ್ ಬೈಕ್‌ನಲ್ಲಿ ಸಂಚರಿಸುತ್ತಿದ್ದರೆ, ಆರೋಪಿಗಳಾದ ಮನೋಜ್ ಕುಮಾರ್ ಹಾಗೂ ಆರತಿ ಶರ್ಮಾ ಕಾರಿನಲ್ಲಿ ಪಯಣಿಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ ನಂತರ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಆರೋಪಿಗಳಾದ ಮನೋಜ್ ಕುಮಾರ್ ಹಾಗೂ ಆರತಿ ಶರ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಗಳು ಮೊದಲು ನಡೆದ ಸಣ್ಣದೊಂಡು ಅಪಘಾತವೇ ಹೀಗೆ ಬೈಕ್ ಸವಾರನ ಚೇಸ್ ಮಾಡಿ ಹತ್ಯೆ ಮಾಡುವುದಕ್ಕೆ ಕಾರಣವಾಗಿದೆ. ಪೊಲೀಸರ ಪ್ರಕಾರ, ರಾತ್ರಿ 9 ಗಂಟೆ ಸುಮಾರಿಗೆ ನಟರಾಜ ಲೇಔಟ್ ಬಳಿ ದರ್ಶನ್ ಅವರ ಸ್ಕೂಟರ್, ಮನೋಜ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಕಾರಿನ ಹಿಂಬದಿಯ ಗಾಜಿಗೆ ಹಾನಿಯಾಗಿತ್ತು. ಈ ವೇಳೆ ದರ್ಶನ್ ಕ್ಷಮೆಯಾಚಿಸಿ ಮುಂದೆ ಸಾಗಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿಗಳು ಬೈಕರ್‌ಗಳನ್ನು ಸುಮಾರು 2 ಕಿಲೋ ಮೀಟರ್ ದೂರದವರೆಗೆ ಚೇಸ್ ಮಾಡಿಕೊಂಡು ಹೋಗಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ವರುಣ್ ಹಾಗೂ ದರ್ಶನ್ ಇಬ್ಬರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ಸಿಸಿಟಿವಿಯಲ್ಲಿ ಕೊಲೆ ದೃಶ್ಯ ಸೆರೆ

ಈ ಪ್ರಕರಣದ ಬಗ್ಗೆ ದರ್ಶನ್ ಸೋದರಿ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಹಿಟ್ & ರನ್ ಪ್ರಕರಣ ದಾಖಲಿಸಿದರು. ಆದರೆ ಸಿಸಿಟಿವಿ ದೃಶ್ಯ ಆಧರಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಘಟನೆಯ ಹಿಂದಿನ ಸ್ಫೋಟಕ ಸಂಚು ಬಯಲಾಗಿತ್ತು. ಮನೋಜ್ ಕುಮಾರ್ ಮತ್ತು ಶರ್ಮಾ ಅವರ ಈ ಕೊಲೆ ಸಂಚಿನಿಂದ ಮೊದಲ ಬಾರಿ ಈ ಬೈಕರ್‌ಗಳು ಪಾರಾಗಿದ್ದರು. ಆದರೆ ಕಾರಿನಲ್ಲಿದ್ದ ದಂಪತಿ ಮತ್ತೆ ಯು ಟರ್ನ್ ತೆಗೆದುಕೊಂಡು ಬಂದು ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ನಂತರ ಅಲ್ಲಿಂದ ಓಡಿ ಹೋಗಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದು ಮಾಸ್ಕ್ ಧರಿಸಿಕೊಂಡು ಕಾರಿನ ಮುರಿದ ಕೆಲ ಭಾಗಗಳನ್ನು ಅಲ್ಲಿಂದ ಹೆಕ್ಕಿಕೊಂಡು ಹೋಗಿದ್ದಾರೆ. ಹೀಗಾಗಿ ಆರಂಭದಲ್ಲಿ ಅಪಘಾತ ಎಂದು ದಾಖಲಾಗಿದ್ದ ಪ್ರಕರಣವನ್ನು ನಂತರ ಕೋಪದಿಂದ ನಡೆಸಲ್ಪಟ್ಟ ಕೊಲೆ ಎಂದು ಬದಲಾಯಿಸಲಾಗಿದೆ.

ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ದರ್ಶನ್

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಮನೋಜ್‌ ಕುಮಾರ್ ಮತ್ತು ಶರ್ಮಾ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆಯಲ್ಲಿ ಮೃತನಾದ ದರ್ಶನ್ 24ರ ಹರೆಯದ ಯುವಕನಾಗಿದ್ದು, ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Scroll to load tweet…