28 Golden Retrievers and One Devoted Owner ಬೆಂಗಳೂರಿನ ಆರ್‌ಟಿ ನಗರದಲ್ಲಿ ಮಹಿಳೆಯೊಬ್ಬರು 28 ಗೋಲ್ಡನ್ ರಿಟ್ರೈವರ್ ಶ್ವಾನಗಳೊಂದಿಗೆ ಯಾವುದೇ ಬೆಲ್ಟ್ ಇಲ್ಲದೆ ಆರಾಮವಾಗಿ ವಾಕ್ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

28 ಗೋಲ್ಡನ್ ರಿಟ್ರೈವರ್ ಶ್ವಾನಗಳ ಜೊತೆ ಮಹಿಳೆಯ ವಾಕ್…

ನೀವು ಬೆಂಗಳೂರಿನ ರಸ್ತೆಗಳಲ್ಲಿ ಮುಂಜಾನೆ ಅಥವಾ ಮುಸ್ಸಂಜೆ ಸಮಯದಲ್ಲಿ ನಡೆದುಕೊಂಡು ಹೋಗ್ತಿದ್ರೆ ಶ್ವಾನಗಳನ್ನು ಹಿಡಿದು ಸಾಗುವ ಅನೇಕರನ್ನು ನೀವು ನೋಡಬಹುದು. ಕೆಲವರು ಒಂದು ಇನ್ನೂ ಕೆಲವರು ಎರಡು ಮತ್ತು ಕೆಲವರು ಹೆಚ್ಚೆಂದರೆ 3 ಶ್ವಾನಗಳನ್ನು ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿರುತ್ತಾರೆ. ಆದರೆ ಇಲ್ಲೊಂದು ಕಡೆ 20ಕ್‌ಕೂ ಹೆಚ್ಚು ಶ್ವಾನಗಳೊಂದಿಗೆ ಮಹಿಳೆಯೊಬ್ಬರುವ ವಾಕ್ ಬರ್ತಾರೆ. ವಯಸ್ಸಾದ ಮಹಿಳೆಯೊಬ್ಬರು ನಾಯಿಗಳಿಗೆ ಯಾವುದೇ ಬೆಲ್ಟ್ ಹಾಕದೇ ರಸ್ತೆಯಲ್ಲಿ ಅವುಗಳನ್ನು ವಾಕ್ ಕರೆದುಕೊಂಡು ಬರುವ ವೀಡಿಯೋ ಈ ಹಿಂದೆಯೂ ಅನೇಕ ಭಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸುಂದರ ದೃಶ್ಯವನ್ನು ನೋಡಿದ ಬಹುತೇಕರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಹೀಗಾಗಿ ಈ 28 ಶ್ವಾನಗಳ ಜೊತೆ ಓಡಾಡ್ತಿರುವ ಮಹಿಳೆಯ ವೀಡಿಯೋ ಆಗಾಗ ವೈರಲ್ ಆಗ್ತಿರುತ್ತದೆ.

ಬೆಂಗಳೂರಿನ ಆರ್‌ಟಿ ನಗರದ ಮಹಿಳೆಯ ವೀಡಿಯೋ ಭಾರಿ ವೈರಲ್

ಅದೇ ರೀತಿ ಈ ಬಾರಿಯೂ ವೀಡಿಯೋ ವೈರಲ್ ಆಗಿದೆ. 28 ಗೋಲ್ಡನ್ ರಿಟ್ರೈವರ್ ಶ್ವಾನಗಳ ಜೊತೆ ಮಹಿಳೆ ವಾಕ್ ಮಾಡ್ತಿದ್ದು, xploreraa ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ ಶರತ್ ಹಾಗೂ ಸ್ನೇಹ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 28 ನಾಯಿಗಳು, ಒಂದು ದೊಡ್ಡ ಹೃದಯ ಬೆಂಗಳೂರಿನ ಆರ್‌ಟಿ ನಗರದ ನಾಯಿ ಪ್ರಿಯ ಆಂಟಿಯನ್ನು ಭೇಟಿ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಈ ವೀಡಿಯೋಗೆ ಹಿನ್ನೆಲೆ ಧ್ವನಿ ನೀಡಿರುವ ಅವರು ಬೆಂಗಳೂರಿನ ಆರ್‌ಟಿ ನಗರದಲ್ಲಿ ಒಬ್ಬರು ಮಹಿಳೆ 28 ಗೋಲ್ಡನ್ ರಿಟ್ರೈವರ್‌ಗಳೊಂದಿಗೆ ನಡೆದುಕೊಂಡು ಹೋಗುವುದನ್ನು ನಾವು ನೋಡಿದೆವು ಎಲ್ಲ ಶ್ವಾನಗಳು ಹೊಂದಿಕೊಳ್ಳುತ್ತವೆ. ಎಲ್ಲವೂ ಸಂತೋಷವಾಗಿರುತ್ತವೆ. ಹಾಗೆಯೇ ಅವುಗಳ ಮಾಲಕಿಯಾದ ಅವರು ಕೂಡ ತುಂಬಾ ಶಾಂತಿಯುತವಾಗಿ ಕಾಣುತ್ತಿದ್ದರು, ತನ್ನ ಶ್ವಾನ ಕುಟುಂಬದೊಂದಿಗೆ ನಗುತ್ತಿದ್ದಳು. ಇಂದಿನ ಜೀವನದಲ್ಲಿ, ನಿಷ್ಠಾವಂತ ಸ್ನೇಹಿತರು ಅಪರೂಪ, ಆದರೆ ಕೆಲವೊಮ್ಮೆ ಪ್ರೀತಿ ಮತ್ತು ನಿಷ್ಠೆ ನಾಲ್ಕು ಕಾಲುಗಳ ಮೇಲೆ ಬರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಮಹಿಳೆಯ ಬಗ್ಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ..

ವೀಡಿಯೋ ನೋಡಿದ ಅನೇಕರು ಕೂಡ ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವು ಕಾಮೆಂಟ್ ಮಾಡಿದ್ದಾರೆ. ಕೆಲವರು ತಾವು ಈ ಶ್ವಾನದ ಕುಟುಂಬವನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. 7 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ಇವರನ್ನು ವೈಯಕ್ತಿಕವಾಗಿ ತಿಳಿದಿರುವವರು ಕೂಡ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದು, ಆ ಮಹಿಳೆಯ ಬಗ್ಗೆ ಹಲವು ವಿಚಾರ ತಿಳಿಸಿದ್ದಾರೆ. ಆಕೆ ತಮ್ಮ ಇನ್ನೊವಾ ಕಾರನ್ನೇ ಶ್ವಾನಗಳಿಗಾಗಿ ಕಸ್ಟಮೈಸ್ಜ್‌ ಮಾಡಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಈ ಶ್ವಾನಗಳನ್ನು ನೋಡಿಕೊಂಡೆ ಬೆಳೆದೆ. ವರ್ಷದಿಂದ ವರ್ಷಕ್ಕೆ ಶ್ವಾನಗಳ ಸಂಖ್ಯೆ ಹೆಚ್ಚಾಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರ ಮನೆ ನಮ್ಮ ಶಾಲೆಯ ಹತ್ತಿರ ಇತ್ತು. 2005ರಲ್ಲಿ 7ರಿಂದ 8 ಶ್ವಾನಗಳಿದ್ದವು.ಇವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಕೂಡ ಈ ಮಹಿಳೆಯಷ್ಟು ರಿಚ್ ಆಗ್ಬೇಕು ಎಂದು ವೀಡಿಯೋ ನೋಡಿದ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈಕೆ ಯಾರ ಜೊತೆಗೂ ಮಾತನಾಡುವುದೇ ಇಲ್ಲ, ನೀವು ಮಾತನಾಡಿದರು ಆಕೆ ಮಾತನಾಡುವುದಿಲ್ಲ, ಆರಂಭದಲ್ಲಿ ಇವರ ಬಳಿ ಮೂರು ಶ್ವಾನಗಳಿದ್ದವು ಈಗ 28 ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಆರ್‌ಟಿ ನಗರದಲ್ಲಿ ವಾಸ ಮಾಡ್ತಿದ್ದಾಗ ಇವರನ್ನು ನೋಡಿದ್ದೆ. ಈ ಶ್ವಾನಗಳಿಗೂ ಚೆನ್ನಾಗಿ ತರಬೇತಿ ನೀಡಲಾಗಿದೆ. ಈ ಶ್ವಾನಗಳು ಕೆಟ್ಟದಾಗಿ ವರ್ತಿಸದೇ ಶಾಂತವಾಗಿರುತ್ತವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹಾವನ್ನು ಕೊರಳಿಗೆ ಸುತ್ತಿಕೊಂಡು ಸ್ಟಂಟ್ ಮಾಡಲು ಹೋಗಿ ಜೀವ ಬಿಟ್ಟ ಯುವಕ

ಇದನ್ನೂ ಓದಿ: ರೈಲ್ವೆಯ ಪ್ರತಿಷ್ಠಿತ ಎಸಿ ಕೋಚಲ್ಲಿ ಬೆಡ್‌ಶೀಟ್ ಕದ್ದು ಬ್ಯಾಗ್‌ಗೆ ತುಂಬಿಸಿ ಸಿಕ್ಕಿಬಿದ್ದ ಕುಟುಂಬ : ವೀಡಿಯೋ

View post on Instagram