ಸಿಂಗಾಪುರದಲ್ಲಿ ಸಾವಿಗೀಡಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸೋದರ ಸಂಬಂಧಿ, ಸಹ ಗಾಯಕರು, ಬ್ಯಾಂಡ್‌ಮೇಟ್‌ಗಳು, ಕಾರ್ಯಕ್ರಮ ಸಂಘಟಕರ ಬಂಧನದ ನಂತರ ಈಗ ಜುಬೀನ್ ಗಾರ್ಗ್ ಅವರ ಭದ್ರತಾ ಸಿಬ್ಬಂದಿಯ ಬಂಧನವಾಗಿದೆ.

ಜುಬೀನ್‌ ಗಾರ್ಗ್ ಸಾವಿಗೆ ದಿನಕ್ಕೊಂದು ಟ್ವಿಸ್ಟ್‌:

ಸಿಂಗಾಪುರದಲ್ಲಿ ಸಾವಿಗೀಡಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸೋದರ ಸಂಬಂಧಿ, ಸಹ ಗಾಯಕರು, ಬ್ಯಾಂಡ್‌ಮೇಟ್‌ಗಳು, ಕಾರ್ಯಕ್ರಮ ಸಂಘಟಕರ ಬಂಧನದ ನಂತರ ಈಗ ಜುಬೀನ್ ಗಾರ್ಗ್ ಅವರ ಭದ್ರತಾ ಸಿಬ್ಬಂದಿಯನ್ನು ಸಹ ಅಸ್ಸಾಂನ ವಿಶೇಷ ತನಿಖಾ ತಂಡ ಬಂಧಿಸಿದೆ. ಜುಬೀನ್ ಗಾರ್ಗ್‌ ಸಾವಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ತನಿಖಾ ತಂಡ ನಿನ್ನೆಯಷ್ಟೆ ಜುಬೀನ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್‌ನನ್ನು ಬಂಧಿಸಿದ್ದರು. ಸಂದೀಪನ್ ಅವರು ಅಸ್ಸಾಂ ಪೊಲೀಸ್ ಸರ್ವಿಸ್‌ನಲ್ಲಿ ಉದ್ಯೋಗದಲ್ಲಿದ್ದು, ಕಮ್ರಾಪ್‌ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುಬೀನ್ ಗಾರ್ಗ್‌ ವೈಯಕ್ತಿಕ ಭದ್ರತಾ ಸಿಬ್ಬಂದಿಯ ಬಂಧನ

ಇವರ ಬಂಧನದ ನಂತರ ಈಗ ಜುಬೀನ್ ಅವರ ಸೋದರ ಸಂಬಂಧಿಯ ಬಂಧನದ ನಂತರ ಈಗ ಅವರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಕುಡ ಬಂಧಿಸಿದ್ದಾರೆ. ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತನಿಖಾ ತಂಡ ಈ ಇಬ್ಬರನ್ನು ಬಂಧಿಸಿದ್ದು, ಬಂಧಿತ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ನಂದೇಶ್ವರ್ ಬೋರಾ ಹಾಗೂ ಪರೇಶ್ ಬೈಶಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಸುದೀರ್ಘ ಕಾಲದಿಂದ ಜುಬೀನ್‌ ಗಾರ್ಗ್‌ ಅವರಿಗೆ ವೈಯಕ್ತಿಕ ಭದ್ರತೆಯನ್ನು ನೀಡುತ್ತಿದ್ದರು.

ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆ

ಈ ಪ್ರಕರಣದಲ್ಲಿಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಜುಬೀನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ್‌ ಶರ್ಮಾ, ಸಿಂಗಾಪುರದಲ್ಲಿ ಈಶಾನ್ಯ ಭಾರತ ಉತ್ಸವ ಆಯೋಜಿಸಿದ್ದ ಸಂಘಟಕ ಶ್ಯಾಮಕಾನು ಮಹಂತಾ ಅವರನ್ನು ಎರಡು ವಾರಗಳ ಹಿಂದೆಯೇ ದೆಹಲಿಯಲ್ಲಿ ತನಿಖಾ ತಂಡ ಬಂಧಿಸಿದೆ. ಇವರ ಬಂಧನದ ನಂತರ ಜುಬೀನ್‌ ಗಾರ್ಗ್ ಅವರ ಬ್ಯಾಂಡ್‌ ಮೇಟ್ ಗಾಯಕ ಶೇಕರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕ ಅಮೃತ್‌ಪ್ರವಾ ಮಹಂತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಈಗ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಕೂಡ ಬಂಧಿಸಿದ್ದು, ಹೀಗಾಗಿ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.

ಕಳೆದ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಡೆದ ಈಶಾನ್ಯ ಭಾರತ ಉತ್ಸವದ ಸಂದರ್ಭದಲ್ಲಿ ನಡೆದ ವಿಹಾರ ನೌಕೆ ಪಾರ್ಟಿ ವೇಳೆ ಜುಬೀನ್ ಗಾರ್ಗ್ ನೀರಿಗೆ ಬಿದ್ದು ನಂತರ ಸಾವನ್ನಪ್ಪಿದ್ದರು. ಈ ವೇಳೆ ಜುಬೀನ್ ಜೊತೆ ಸಹಗಾಯಕರಾದ ಗೋಸ್ವಾಮಿ ಮತ್ತು ಮಹಾಂತ ಇಬ್ಬರೂ ಇದ್ದರು. ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳಲ್ಲಿ 52 ವರ್ಷದ ಗಾರ್ಗ್ ಅವರು ಈಜಲು ಹೋದಾಗ ಅವರ ದೇಹ ನೀರಿನಲ್ಲಿ ಕೆಳಮುಖ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿತು. ಈ ವೇಳೆ ಗೋಸ್ವಾಮಿ ಅವರು ಕೂಡ ಜುಬೀನ್‌ ಗಾರ್ಗ್‌ ಅವರಿಗೆ ಬಹಳ ಹತ್ತಿರದಲ್ಲೇ ಈಜುತ್ತಿರುವುದನ್ನು ವೀಡಿಯೊಗಳಲ್ಲಿ ನೋಡಲಾಗಿದೆ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ಹೇಳಿವೆ. ಇತ್ತ ಮಹಂತಾ ಇಡೀ ಘಟನೆಯನ್ನು ತಮ್ಮ ಸೆಲ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಹೀಗಾಗಿ ಆರು ದಿನಗಳ ಕಾಲ ಸತತ ವಿಚಾರಣೆ ನಡೆಸಿದ ಪೊಲೀಸರು ನಂತರ ಈ ಇಬ್ಬರನ್ನು ಬಂಧಿಸಿದ್ದಾರೆ.

ಸಿಂಗಾಪುರದಲ್ಲಿ ಸ್ವಿಮ್ಮಿಂಗ್ ವೇಳೆ ಜುಬೀನ್ ಗಾರ್ಗ್‌ ಜೀವರಕ್ಷಕ ಜಾಕೆಟ್‌ನ್ನು ಧರಿಸಿರಲಿಲ್ಲ, ಭಾರತ ಸಿಂಗಾಪುರ ರಾಜತಾಂತ್ರಿಕ ಸಂಬಂಧಗಳ 60 ನೇ ವರ್ಷದ ಆಚರಣೆ ಮತ್ತು ಭಾರತ ಆಸಿಯಾನ್ ಪ್ರವಾಸೋದ್ಯಮ ವರ್ಷ ಹಾಗೂ ಈಶಾನ್ಯ ಭಾರತ ಉತ್ಸವವನ್ನು ಆಚರಿಸಲು ಅವರು ಸಿಂಗಾಪುರಕ್ಕೆ ತೆರಳಿದ್ದರು. ಆದರೆ ಜುಬೀನ್ ಅವರ ಸಾವು ಸಂಭವಿಸಿದ್ದರಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: ಸಾವಿನಿಂದ ಜಸ್ಟ್ ಮಿಸ್: ಕಾರಿನ ಡ್ಯಾಶ್‌ಕ್ಯಾಮ್ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಹೊಟ್ಟೆಯಿಂದ ಹೇಗೆ ಹೊರಗೆ ಬಂದೆ ಎಂದು ಕೇಳಿದ ಮಗು: ಅಮ್ಮನ ಉತ್ತರ ಕೇಳಿದ ಮಗು ಹೇಳಿದ್ದೇನು?