ಸಿರಿಯಾದಲ್ಲಿ 3000 ವರ್ಷಗಳಷ್ಟು ಹಳೆಯ ಗೋಡೆಯ ಮೇಲೆ ಹಿಂದೂ ಪುರಾತನ ಗ್ರಂಥಗಳಾದ ಋಗ್ವೇದದ ಮಂತ್ರಗಳು ಪತ್ತೆಯಾಗಿವೆ.
ಭಾರತದ ಸನಾತನ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಸನಾತನ ಸಂಸ್ಕೃತಿಯ ಕುರುಹುಗಳನ್ನು ಕಾಣಬಹುದು. ಇಂಡೋನೇಷ್ಯಾ, ಶ್ರೀಲಂಕಾ, ಜಪಾನ್, ಸಿಂಗಾಪುರ ಮುಂತಾದ ದೇಶಗಳಲ್ಲಿ ಸಾಕಷ್ಟು ಶತಮಾನಗಳಷ್ಟು ಹಳೆಯ ದೇವಾಲಯಗಳು ಹಾಗೂ ಕೆಲವೆಡೆ ಅವುಗಳಿದ್ದ ಕುರುಹುಗಳನ್ನು ಕಾಣಬಹುದು. ಏಷ್ಯಾದ ಹಲವು ದೇಶಗಳ ಕೆಲ ಭಾಗದಲ್ಲಿ ಭಾರತೀಯ ಸಂಸ್ಕೃತಿಗೆ ಹೋಲಿಕೆಯಾಗುವ ನಾಗರಿಕತೆ ಇದೆ. ಆದರೆ ಈಗ ಅಮೆರಿಕಾದ ವಿಜ್ಞಾನಿಗಳು ಮಧ್ಯ ಪ್ರಾಚ್ಯ ದೇಶಗಳಲ್ಲಿ ಒಂದಾಗಿರುವ ಯುದ್ಧಪೀಡಿತ ಸಿರಿಯಾದಲ್ಲೂ ಹಿಂದು ಗ್ರಂಥಗಳು ಹಾಗೂ ಋಗ್ವೇದದ ಕೆಲ ಮಂತ್ರಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ಸಿರಿಯಾದಲ್ಲಿ ಮೂರು ಸಾವಿರ ವರ್ಷಗಳಿಗೂ ಹಳೆಯ ಗೋಡೆಯೊಂದರ ಮೇಲೆ ಹಿಂದೂ ಪುರಾತನ ಗ್ರಂಥಗಳ ಮಂತ್ರಗಳು ಇವೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ.
ಬಂದರು ನಗರವಾದ ಉಗಾರಿಟ್‌ನ ಅವಶೇಷಗಳಲ್ಲಿಋಗ್ವೇದದ ಕುರುಹು ಪತ್ತೆ:
ಇಲ್ಲಿ ಸಿಕ್ಕ ಈ ಪ್ರಾಚೀನ ಕುರುಹುಗಳನ್ನು ಇತ್ತೀಚೆಗೆ ವಿಶ್ಲೇಷಿಸಿದಾಗ ಈ ಪ್ರಾಚೀನ ಸ್ತೋತ್ರವು ಸಾವಿರಾರು ಮೈಲುಗಳು ಮತ್ತು ಶತಮಾನಗಳ ಇತಿಹಾಸದಿಂದ ಬೇರ್ಪಟ್ಟ ಸಂಸ್ಕೃತಿಗಳ ನಡುವಿನ ಬಲವಾದ ಸಂಗೀತ ಸಂಬಂಧಗಳನ್ನು ಬಹಿರಂಗಪಡಿಸಿದೆ. ಈ ಆವಿಷ್ಕಾರವು ಮೆಡಿಟರೇನಿಯನ್‌ನಿಂದ ಭಾರತದವರೆಗೆ ವ್ಯಾಪಿಸಿರುವ ಕಂಚಿನ ಯುಗದ ನಾಗರಿಕತೆಗಳನ್ನು(Bronze Age civilizations)ಸಂಪರ್ಕಿಸುತ್ತದೆ ಎಂದು ಸಾಬೀತುಪಡಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ನಿಕ್ಕಲ್ ಸ್ತೋತ್ರ( Nikkal Hymn)ಎಂದು ಕರೆಯಲ್ಪಡುವ ಈ ಸ್ತೋತ್ರವನ್ನು ಪೂರ್ವ ಮೆಡಿಟರೇನಿಯನ್ ಕರಾವಳಿಯ ಬಂದರು ನಗರವಾದ ಉಗಾರಿಟ್‌ನ ಅವಶೇಷಗಳಲ್ಲಿ ಕಂಡುಹಿಡಿಯಲಾಯಿತು. ಇದು 3,000 ವರ್ಷಗಳಷ್ಟು ಹಳೆಯದಾದ ಅತ್ಯಂತ ಹಳೆಯ ಸಂಗೀತ ಸಂಯೋಜನೆಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂತಾ ಬಾರ್ಬರಾದ ಡಾನ್ ಸಿ. ಬಾಸಿಯು ಅವರು ನಡೆಸಿದ ಹೊಸ ಅಧ್ಯಯನದ ಪ್ರಕಾರ, ಅದರ ಲಯಬದ್ಧ ಮಾದರಿಗಳು ಭಾರತದ ಅತ್ಯಂತ ಪವಿತ್ರ ಪ್ರಾಚೀನ ಗ್ರಂಥಗಳಲ್ಲಿ ಒಂದಾದ, ಇಂದಿಗೂ ಪಠಿಸಲ್ಪಡುವ ಋಗ್ವೇದದ ಸ್ತೋತ್ರಗಳಿಗೆ ನಿಕಟವಾಗಿ ಹೊಂದಿಕೆಯಾಗುತ್ತವೆ ಎಂಬುದನ್ನು ತೋರಿಸುತ್ತದೆ.
ಈ ಸಂಗೀತದ ಕೊಂಡಿಗಳು ಆಕಸ್ಮಿಕವಲ್ಲ ಎಂದು ಡಾನ್ ಸಿ. ಬಾಸಿಯು ಹೇಳುತ್ತಾರೆ. ಋಗ್ವೇದದ ಐದು ಶ್ಲೋಕಗಳಲ್ಲಿ ಸುಮಾರು ಒಂದು ಶ್ಲೋಕವು ನಿಕ್ಕಲ್‌ಗೆ ಸ್ತೋತ್ರದಲ್ಲಿ ಕಂಡುಬರುವ ಲಯಬದ್ಧ ಘಟಕಗಳಂತೆಯೇ ಅದೇ ಧಾಟಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ ತೋರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪಠ್ಯದ ಒಂದು ಆವೃತ್ತಿಯು ಆ ಜೋಡಣೆಯ ಒಂದು ಭಾಗವನ್ನು ಮಾತ್ರ ತೋರಿಸಿದೆ. ಇದು ಕಾಕತಾಳೀಯವಾಗಿರುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳುತ್ತಾರೆ ಡಾನ್ ಸಿ. ಬಾಸಿಯು ಅವರು.
Preprints.org ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ, ಇಲ್ಲಿ ಸಿಕ್ಕ ಸ್ವರಶ್ಲೋಕಗಳು ಕಂಚಿನ ಯುಗದಲ್ಲಿ ಜಾಗತಿಕ ಸಂಗೀತ ಸಂಸ್ಕೃತಿಗೆ ಘನ ಪುರಾವೆಯನ್ನು ನೀಡುತ್ತವೆ ಎಂದು ವಾದಿಸುತ್ತದೆ. ನಿಕ್ಕಲ್ ಸ್ತೋತ್ರದ ಸುಮಾರಿಗೆ ಅದೇ ಸಮಯದಲ್ಲಿ ಪ್ರಾಚೀನ ಭಾರತದಲ್ಲಿ ರಚಿಸಲಾದ ಋಗ್ವೇದವು, ತಲೆಮಾರುಗಳಿಂದ ಬಾಯಿಯಿಂದ ಬಾಯಿಗೆ ರವಾನಿಸಲಾದ ಸಾವಿರಾರು ಶ್ಲೋಕಗಳನ್ನು ಒಳಗೊಂಡಿದೆ. ಬಾಸಿಯು ಅವರ ತಂಡವು ಕಂಪ್ಯೂಟರ್ ನೆರವಿನ ಲಯ ಮತ್ತು ಮಧುರ ಮ್ಯಾಪಿಂಗ್ ಬಳಸಿ ಎರಡು ಸಂಯೋಜನೆಗಳನ್ನು ಹೋಲಿಸಿತು. ಈ ವೇಳೆ ಅವರು ಕಂಡುಕೊಂಡ ವಿಚಾರ ಅವರಿಗೆ ಅಚ್ಚರಿ ಮೂಡಿಸಿದೆ. ಈ ಎರಡೂ ಕೃತಿಗಳು ಒಂದೇ ರೀತಿಯ ಲಯಗಳನ್ನು ಹಂಚಿಕೊಳ್ಳುವುದಲ್ಲದೆ, ಅವು ಒಂದೇ ರೀತಿಯ ಸುಮಧುರ ಮಾದರಿಗಳನ್ನು ಅನುಸರಿಸುತ್ತವೆ ಎಂಬುದು ಕಂಡು ಬಂದಿದೆ.
ಈ ಹೋಲಿಕೆಯು ಕೇವಲ ಸ್ತ್ರೋತ್ರದ ಲಯದಲ್ಲಿ ಮಾತ್ರವಲ್ಲದೇ ಪ್ರದರ್ಶನ ಶೈಲಿಗೂ ವಿಸ್ತರಿಸುತ್ತದೆ. ಎರಡೂ ಸಂಯೋಜನೆಗಳು ಸ್ತೋತ್ರದ ಅಂತ್ಯದಲ್ಲಿ ಒಂದೇ ರೀತಿಯ ಧಾಟಿಯನ್ನುಅವಲಂಬಿಸಿವೆ. ಇದಲ್ಲದೆ, ಋಗ್ವೇದದಲ್ಲಿ ಅತ್ಯಂತ ಸಾಮಾನ್ಯವಾದ ಧಾಟಿಯೇ ಈ ಹೈಮ್ ನಿಕ್ಕಲ್‌ನಲ್ಲಿ ಕಂಡು ಬಂದಿದೆ ಎಂದು ಬಾಸಿಯು ಹೇಳಿದ್ದಾರೆ.
ಇದನ್ನೂ ಓದಿ: ಈ ಕ್ಷಣ ಮಾತ್ರ ನಮ್ಮದು... ಆಹಾರ ಸೇವಿಸುತ್ತಿದ್ದಾಗಲೇ ನುಗ್ಗಿ ಬಂತು ಕಾರು: ಆಮೇಲೇನಾಯ್ತು ನೋಡಿ
ಇದನ್ನೂ ಓದಿ: ಅಪಘಾತದ ನಂತರ ರಸ್ತೆಯಲ್ಲೇ ಒಂದಕ್ಕೊಂದು ಅಂಟಿಕೊಂಡು ನೆಲಚಕ್ರದಂತೆ ತಿರುಗಿದ ಸ್ಕೂಟಿ ಬೈಕ್
