ಕ್ಯಾನ್ಸರ್‌ ಜಾಗತಿಕ ಮಟ್ಟದಲ್ಲಿ ಪಿಡುಗಾಗಿ ಕಾಡುತ್ತಿರುವ ಹೊತ್ತಿನಲ್ಲಿ, ತಲೆ ಹಾಗು ಕುತ್ತಿಗೆಯ ಕ್ಯಾನ್ಸರ್‌ಅನ್ನು ಅದರ ಲಕ್ಷಣಗಳು ಕಾಣಿಸಿಕೊಳ್ಳುವ 10 ವರ್ಷ ಮೊದಲೇ ಪತ್ತೆ ಮಾಡಬಲ್ಲ ಮಾದರಿಯ ರಕ್ತ ಪರೀಕ್ಷಾ ವಿಧಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ವಾಷಿಂಗ್ಟನ್: ಕ್ಯಾನ್ಸರ್‌ ಜಾಗತಿಕ ಮಟ್ಟದಲ್ಲಿ ಪಿಡುಗಾಗಿ ಕಾಡುತ್ತಿರುವ ಹೊತ್ತಿನಲ್ಲಿ, ತಲೆ ಹಾಗು ಕುತ್ತಿಗೆಯ ಕ್ಯಾನ್ಸರ್‌ಅನ್ನು ಅದರ ಲಕ್ಷಣಗಳು ಕಾಣಿಸಿಕೊಳ್ಳುವ 10 ವರ್ಷ ಮೊದಲೇ ಪತ್ತೆ ಮಾಡಬಲ್ಲ ಮಾದರಿಯ ರಕ್ತ ಪರೀಕ್ಷಾ ವಿಧಾನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಹಾರ್ವರ್ಡ್-ಸಂಯೋಜಿತ ಮಾಸ್ ಜನರಲ್ ಬ್ರಿಗ್ಯಾಮ್‌ನ ಸಂಶೋಧಕರು ‘ಎಚ್‌ಪಿವಿ-ಡೀಪ್‌ಸೀಕ್‌’ ಹೆಸರಿನ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ ಇರುವುದು ತಿಳಿದು ಚಿಕಿತ್ಸೆ ಆರಂಭಿಸುವುದರಿಂದ ಅದು ಫಲಿಸುವ ಮತ್ತು ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ಈ ಸಂಶೋಧನೆ ಮಹತ್ವ ಪಡೆದುಕೊಂಡಿದೆ. ಈ ಪರೀಕ್ಷೆಗೆ ಒಳಪಟ್ಟಿದ್ದವರಲ್ಲಿ 28 ಜನರಲ್ಲಿ ಈಗ ಕ್ಯಾನ್ಸರ್‌ ಪತ್ತೆಯಾಗಿದೆ. ಇವರಲ್ಲಿ 22 ಜನರಿಗೆ ಕ್ಯಾನ್ಸರ್‌ ಇರುವುದನ್ನು ಡೀಪ್‌ಸೀಕ್‌ನಿಂದ ಮೊದಲೇ ಕಂಡುಹಿಡಿಯಲಾಗಿತ್ತು.

ಪತ್ತೆ ಹೇಗೆ?:

ತಲೆ ಮತ್ತು ಕುತ್ತಿಗೆಯಲ್ಲಿ ಕಾಣಿಸಿಕೊಳ್ಳುವ ಹಾಗೂ ಗಂಟಲು, ನಾಲಿಗೆಯ ಬುಡ ಮತ್ತು ಸುತ್ತಮುತ್ತಲಿನ ಇತರ ಪ್ರದೇಶಗಳಿಗೆ ಸಮಸ್ಯೆ ಮಾಡುವ ಹ್ಯೂಮನ್‌ ಪ್ಯಾಲಿಯೋಮಾ ವೈರಸ್‌ ಪತ್ತೆ ಸ್ಕ್ರೀನಿಂಗ್‌ನಿಂದ ಸಾಧ್ಯವಿಲ್ಲ. ಆದ್ದರಿಂದ ಹೊಸ ವಿಧಾನವಾದ ಡೀಪ್‌ಸೀಕ್‌ನಲ್ಲಿ ಡಿಎನ್‌ಎ, ಆರ್‌ಎನ್‌ಎ, ಪ್ರೋಟೀನ್‌ಗಳನ್ನು ದ್ರವರೂಪದಲ್ಲಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಜಿನೋಂ ಸೀಕ್ವೆನ್ಸಿಂಗ್‌ ಕೂಡ ನಡೆಸಲಾಗುವುದು. ಇದರಿಂದ, ರಕ್ತದೊಂದಿಗೆ ಹರಿಯುತ್ತಿರುವ ಸೂಕ್ಷ್ಮ ಟ್ಯೂಮರ್‌ಗಳನ್ನು ಪತ್ತೆ ಮಾಡಬಹುದು.