- Home
- Entertainment
- Sandalwood
- ಕೆಜಿಎಫ್ ‘ಚಾಚಾ’ ಹರೀಶ್ ರಾಯ್‌ಗೆ ಕ್ಯಾನ್ಸರ್: ಚಿಕಿತ್ಸೆ ವೆಚ್ಚ ಭರಿಸುವುದಾಗಿ ಘೋಷಿಸಿದ ಧ್ರುವ ಸರ್ಜಾ
ಕೆಜಿಎಫ್ ‘ಚಾಚಾ’ ಹರೀಶ್ ರಾಯ್‌ಗೆ ಕ್ಯಾನ್ಸರ್: ಚಿಕಿತ್ಸೆ ವೆಚ್ಚ ಭರಿಸುವುದಾಗಿ ಘೋಷಿಸಿದ ಧ್ರುವ ಸರ್ಜಾ
ನನಗೆ ಚಿರು ಸರ್ಜಾ ಅವರಷ್ಟು ಧ್ರುವ ಸರ್ಜಾ ಕ್ಲೋಸ್ ಇರಲಿಲ್ಲ. ಆದರೂ ಅವರ ಕಾಳಜಿ ಕಂಡು ಮನಸ್ಸು ತುಂಬಿಬಂತು ಎಂದಿದ್ದಾರೆ ನಟ ಹರೀಶ್ ರಾಯ್.

‘ಕೆಜಿಎಫ್’ ಸಿನಿಮಾದ ʻಚಾಚಾ’ ಆಗಿ ಫೇಮಸ್ ಆಗಿರುವ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಯಾಚಿಸಿದ್ದರು.
ಇದಕ್ಕೆ ಸ್ಪಂದಿಸಿರುವ ನಟ ಧ್ರುವ ಸರ್ಜಾ ಆಸ್ಪತ್ರೆಯ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಜೊತೆಗೆ, ‘ನಿಮ್ಮ ಜೊತೆ ನಾವೆಲ್ಲ ಇದ್ದೇವೆ, ಕಣ್ಣೀರು ಹಾಕದಿರಿ’ ಎಂದು ಧೈರ್ಯ ತುಂಬಿದ್ದಾರೆ.
ಈ ಬಗ್ಗೆ ಹರೀಶ್ ರಾಯ್, ಧ್ರುವ ಸರ್ಜಾ ಮೊದಲಿಗೆ ನನಗೆ ಅವರ ಪರಿಚಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಹೇಳಿದರು. ಆದರೆ ಈಗಾಗಲೇ ಇನ್ನೊಂದೆಡೆ ನನ್ನ ಕ್ಯಾನ್ಸರ್ ಚಿಕಿತ್ಸೆ ಆರಂಭವಾಗಿದೆ. ಅದರ ಒಂದು ಇಂಜೆಕ್ಷನ್‌ಗೇ 3.5 ಲಕ್ಷ ರು.ಗೂ ಅಧಿಕ ಬೆಲೆ ಇದೆ ಎಂದೆ.
ಹಾಗಿದ್ದರೆ ಅದೇ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಿ, ಆ ವೆಚ್ಚಗಳನ್ನೆಲ್ಲ ನಾನೇ ಭರಿಸುತ್ತೇನೆ, ಕಣ್ಣೀರು ಹಾಕಬೇಡಿ ಎಂದರು. ಹಾಗೆ ನೋಡಿದರೆ ನನಗೆ ಚಿರು ಸರ್ಜಾ ಅವರಷ್ಟು ಧ್ರುವ ಸರ್ಜಾ ಕ್ಲೋಸ್ ಇರಲಿಲ್ಲ. ಆದರೂ ಅವರ ಕಾಳಜಿ ಕಂಡು ಮನಸ್ಸು ತುಂಬಿಬಂತು ಎಂದಿದ್ದಾರೆ.
ಇನ್ನು ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರಾಯ್ ಈಗ ಗುರುತೇ ಸಿಗಲಾರದಷ್ಟು ಬದಲಾಗಿದ್ದಾರೆ. ಕ್ಯಾನ್ಸರ್ ಹೊಟ್ಟೆಗೆ ಪಸರಿಸಿದ್ದು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರ ದೇಹದ ತೂಕ ಕಡಿಮೆಯಾಗಿದ್ದು, ಹೊಟ್ಟೆಯಲ್ಲಿ ನೀರು ತುಂಬಿ ಊದಿಕೊಂಡಿದೆ.