ತೂಕ ಇಳಿಕೆಗೆ ಆಹಾರದ ಗುಣಮಟ್ಟವೂ ಮುಖ್ಯ. ಅಧ್ಯಯನದ ಪ್ರಕಾರ, ಕಡಿಮೆ ಸಂಸ್ಕರಿತ ನೈಸರ್ಗಿಕ ಆಹಾರ ಸೇವಿಸಿದವರು ಅತಿ ಸಂಸ್ಕರಿತ ಆಹಾರ ಸೇವಿಸಿದವರಿಗಿಂತ ಹೆಚ್ಚು ತೂಕ ಇಳಿಸಿಕೊಂಡರು.

Ultra Processed Foods Slow Weight Loss: ತೂಕ ಇಳಿಸಿಕೊಳ್ಳಬೇಕೆಂದರೆ ಆಹಾರದ ಕಡೆ ವಿಶೇಷ ಗಮನ ಕೊಡಬೇಕು. ಅದರಲ್ಲೂ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ತೆಗೆದುಕೊಳ್ಳುವಂತೆ ಹೆಚ್ಚು ಶಿಫಾರಸ್ಸು ಮಾಡಲಾಗುತ್ತದೆ. ಹೆಚ್ಚಿನ ಜಂಕ್ ಫುಡ್‌ ಸೇವನೆ ತೂಕ ಹೆಚ್ಚಿಸಲಿದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಇವುಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಈಗ ಹೊಸ ಅಧ್ಯಯನವು ಕಡಿಮೆ ಕ್ಯಾಲೋರಿ ಹೊಂದಿದ್ದರೂ ಅಲ್ಟ್ರಾ ಪ್ರೊಸೆಸ್ಡ್ ಫುಡ್ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಬಹಿರಂಗಪಡಿಸಿದೆ. ನಿಜಕ್ಕೂ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಅತಿ ಸಂಸ್ಕರಿಸಿದ ಆಹಾರ (ಅಲ್ಟ್ರಾ ಪ್ರೊಸೆಸ್ಡ್ ಫುಡ್‌)ದಿಂದ ದೂರವಿರಬೇಕು. ನೀವು ಈ ಆಹಾರದಿಂದ ದೂರವಿದ್ದರೆ ದೇಹದ ಕೊಬ್ಬು ವೇಗವಾಗಿ ಕರಗಿ, ತೂಕ ನಷ್ಟವಾಗಲಿದೆ.

ಹೊಸ ಅಧ್ಯಯನದ ಪ್ರಕಾರ, ಅತಿ ಸಂಸ್ಕರಿಸಿದ ಆಹಾರ ತೂಕ ಹೆಚ್ಚಳ ಮತ್ತು ಹೆಚ್ಚೆಚ್ಚು ಆಹಾರ ಸೇವಿಸುವಂತೆ ಮಾಡುತ್ತದೆ. ಅದೇ ಕಡಿಮೆ ಸಂಸ್ಕರಿಸಿದ ಮತ್ತು ನೈಸರ್ಗಿಕ ಆಹಾರ ಸೇವಿಸುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಅತಿ ಸಂಸ್ಕರಿಸಿದ ಆಹಾರದ ಕ್ಯಾಲೊರಿಗಳು ಆರೋಗ್ಯಕರ ಆಹಾರಕ್ಕೆ ಸಮನಾಗಿದ್ದರೂ ಸಹ ಆಹಾರದ ಗುಣಮಟ್ಟವು ನಿಮ್ಮ ಆರೋಗ್ಯ ಮತ್ತು ತೂಕದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅಂದಹಾಗೆ ಅತಿ ಸಂಸ್ಕರಿಸಿದ ಆಹಾರವೆಂದರೆ ಜಂಕ್ ಫುಡ್ ಮಾತ್ರವಲ್ಲ, ಪ್ಯಾಕ್ ಮಾಡಿದ ತಿಂಡಿ, ಧಾನ್ಯಗಳು, ಫಾಸ್ಟ್ ಫುಡ್, ಮೈಕ್ರೋವೇವ್ ಫುಡ್, ಸಾಸ್‌ಗಳು, ಸೋಡಾಗಳನ್ನು ಸಹ ಒಳಗೊಂಡಿರುತ್ತವೆ. ಒಟ್ಟಾರೆ ಹಲವು ರೀತಿಯ ರಾಸಾಯನಿಕ, ಸಂರಕ್ಷಕ, ಬಣ್ಣ, ಸುವಾಸನೆ ಮತ್ತು ಸಕ್ಕರೆ ಅಥವಾ ಕೊಬ್ಬಿರುವ ಆಹಾರಗಳನ್ನು ಸಹ ಅತಿ ಸಂಸ್ಕರಿಸಿದ ಆಹಾರವೆಂದು ಪರಿಗಣಿಸಲಾಗುತ್ತದೆ. ಈ ಆಹಾರಗಳು ಅವುಗಳ ನೈಸರ್ಗಿಕ ರೂಪಕ್ಕಿಂತ ಬಹಳ ಭಿನ್ನವಾಗಿರುತ್ತವೆ. ಒಂದು ವೇಳೆ ನಾವು ಅವುಗಳನ್ನು ತಿನ್ನುವುದರಿಂದ ಕಡುಬಯಕೆಗಳು ಮತ್ತು ಹಸಿವು ಹೆಚ್ಚಾಗುತ್ತದೆ.

ಲಂಡನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಧ್ಯಯನದಲ್ಲಿ ಎರಡು ಗುಂಪುಗಳನ್ನು ರಚಿಸಿದರು. ಒಂದು ಗುಂಪಿಗೆ ಅತಿ ಸಂಸ್ಕರಿಸಿದ ಆಹಾರ ನೀಡಲಾಯ್ತು ಮತ್ತು ಇನ್ನೊಂದು ಗುಂಪಿಗೆ ಕಡಿಮೆ ಸಂಸ್ಕರಿಸಿದ ಮತ್ತು ನೈಸರ್ಗಿಕ ಆಹಾರವನ್ನು ನೀಡಲಾಯ್ತು. ಈ ಅಧ್ಯಯನದ ಫಲಿತಾಂಶದ ಪ್ರಕಾರ, ನೈಸರ್ಗಿಕ ಮತ್ತು ಕಡಿಮೆ ಸಂಸ್ಕರಿಸಿದ ಆಹಾರ ಸೇವಿಸಿದವರು ಹೆಚ್ಚಿನ ತೂಕವನ್ನು ಕಳೆದುಕೊಂಡರು ಮತ್ತು ಅವರ ಹಂಬಲಗಳು ಸಹ ಕಡಿಮೆಯಾದವು ಎಂದು ತೋರಿಸಿದೆ.

ಈ ಅಧ್ಯಯನದಲ್ಲಿ ಆಸಕ್ತಿದಾಯಕ ವಿಷಯವೆಂದರೆ ಎರಡೂ ಗುಂಪುಗಳಿಗೆ ಬಹುತೇಕ ಒಂದೇ ಪ್ರಮಾಣದ ಕ್ಯಾಲೋರಿ, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬನ್ನು ನೀಡಲಾಯಿತು. ಆದರೆ ಕಡಿಮೆ ಸಂಸ್ಕರಿಸಿದ ಆಹಾರವನ್ನು ಸೇವಿಸಿದವರು ಮಾತ್ರ ತೂಕವನ್ನು ಕಳೆದುಕೊಂಡರು. ಅಂದರೆ ದೇಹದಲ್ಲಿ ಸಂಗ್ರಹವಾದ ಹಾನಿಕಾರಕ ಕೊಬ್ಬನ್ನು ವೇಗವಾಗಿ ಕಳೆದುಕೊಂಡರು. ಇದರೊಂದಿಗೆ ಅವರ ಟ್ರೈಗ್ಲಿಸರೈಡ್ ಮಟ್ಟ ಸಹ ಕಡಿಮೆಯಾಯ್ತು. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಒಟ್ಟಾರೆಯಾಗಿ ಕಡಿಮೆ ಸಂಸ್ಕರಿಸಿದ ಆಹಾರ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನಗಳಿವೆ.

ಆದ್ದರಿಂದ ಅತಿ ಸಂಸ್ಕರಿಸಿದ ಆಹಾರ ಸೇವಿಸುವ ಬದಲು ಆರೋಗ್ಯಕರ, ನೈಸರ್ಗಿಕ ಪರ್ಯಾಯಗಳೊಂದಿಗೆ ಬದಲಾಯಿಸುವುದರಿಂದ ನಿಮ್ಮ ತೂಕ ನಷ್ಟವು ಯಶಸ್ವಿಯಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸಹ ಸುಧಾರಿಸಬಹುದು. ಉದಾಹರಣೆಗೆ ಸಕ್ಕರೆಯುಕ್ತ ಗ್ರಾನೋಲಾ ಬಾರ್ಸ್ ಬದಲಿಗೆ ನಟ್ಸ್ ಅಥವಾ ತಾಜಾ ಹಣ್ಣು ಸೇವಿಸುವುದು. ನೂಡಲ್ಸ್ ಬದಲಿಗೆ ಕಂದು ಅಕ್ಕಿ ಅಥವಾ ಕ್ವಿನೋವಾವನ್ನು ಆರಿಸುವುದು. ಪ್ಯಾಕೇಜ್ ಮಾಡಿದ ಆಹಾರಗಳ ಬದಲಿಗೆ ಮನೆಯಲ್ಲಿ ತಾಜಾ ಊಟವನ್ನು ಸೇವಿಸುವುದು ವೇಗವಾಗಿ ತೂಕ ನಷ್ಟಕ್ಕೆ ಕಾರಣವಾಗಬಹುದು.

ತೂಕ ನಷ್ಟಕ್ಕೆ ಕೇವಲ ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕು ಎಂಬ ಹಳೆಯ ನಂಬಿಕೆಯನ್ನು ಈ ಅಧ್ಯಯನವು ನಿರಾಕರಿಸಿದೆ. ವಾಸ್ತವವಾಗಿ, ನೀವು ಆಯ್ಕೆ ಮಾಡುವ ಆಹಾರದ ಗುಣಮಟ್ಟವು ನಿಮ್ಮ ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇನ್ಮೇಲೆ ನೀವು ಹಸಿವಿನಿಂದ ಬಳಲುವ ಅಥವಾ ಪ್ರತಿ ಕ್ಯಾಲೊರಿಯನ್ನು ಎಣಿಸುವ ಅಗತ್ಯವಿಲ್ಲ. ಬದಲಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಆಯ್ಕೆಗಳನ್ನು ಮಾಡುವತ್ತ ಗಮನಹರಿಸಬೇಕು ಎಂದು ಇದು ಸಾಬೀತುಪಡಿಸುತ್ತದೆ.