Hyperactive child behavior: ಕೆಬಿಸಿ ಜ್ಯೂನಿಯರ್‌ನಲ್ಲಿ ಬಾಲಕನೊಬ್ಬ ಅಮಿತಾಭ್ ಬಚ್ಚನ್ ಅವರೊಂದಿಗೆ ತೋರಿದ ವರ್ತನೆಗೆ ಅನೇಕರು ಇದನ್ನು ಪೋಷಕರ ಸಂಸ್ಕಾರದ ಕೊರತೆ ಎಂದು ದೂಷಿಸಿದರೆ, ಇದು ADHD ಸಮಸ್ಯೆ ಅಂತಿದ್ದಾರೆ ಒಬ್ಬರು, ಹಾಗಿದ್ದರೆ ಏನಿದು ಎಡಿಹೆಚ್‌ಡಿ ಸಮಸ್ಯೆ
ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಶೋ ಈಗ ಸಾಕಷ್ಟು ಸುದ್ದಿಯಲ್ಲಿದೆ. ಇದಕ್ಕೆ ಕಾರಣವಾಗಿದ್ದು, ಕೆಬಿಸಿ ಜ್ಯೂನಿಯರ್‌ನಲ್ಲಿ ಭಾಗವಹಿಸಿದ್ದ ಓರ್ವ ಬಾಲಕ. ತನ್ನ ಹೈಪರ್ ಆಕ್ಟಿವಿಟೀಸ್ ಜೊತೆಗೆ ತನ್ನ ವಿಪರೀತ ಎನಿಸುವ ಆತ್ಮವಿಶ್ವಾಸದಿಂದ ಈ ಬಾಲಕ ಅಮಿತಾಭ್ ಬಚ್ಚನ್ ಅವರಿಗೆ ಅವಮಾನ ಮಾಡುವಂತೆ ಮಾತನಾಡಿದ್ದ. ಆತನನ್ನು ಅಮಿತಾಭ್ ಬಚ್ಚನ್ ಅವರು ತಮಗೆ ವಯಸ್ಸಾಗಿದ್ದರೂ(ವಯಸ್ಸಾದ ಮೇಲೆ ಬಹುತೇಕರಿಗೆ ತಾಳ್ಮೆ ಇರುವುದಿಲ್ಲ) ಬಹಳ ತಾಳ್ಮೆಯಿಂದಲೇ ಹ್ಯಾಂಡಲ್ ಮಾಡಿದ್ದರು. ಆದರೆ ಬಾಲಕನನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟ್ರೋಲ್ ಮಾಡುವುದರ ಜೊತೆಗೆ ಬಾಲಕನ ಪೋಷಕರನ್ನು ಟೀಕೆ ಮಾಡಲಾಗುತ್ತಿದೆ. ಬಾಲಕನಿಗೆ ಸಂಸ್ಕಾರ ಕಲಿಸಿಲ್ಲ, ದೊಡ್ಡವರಿಗೆ ಹೇಗೆ ಗೌರವ ಕೊಡಬೇಕು ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸಿಲ್ಲ ಎಂದು ಅನೇಕರು ಟೀಕಿಸುತ್ತಿದ್ದಾರೆ.
ಆದರೆ ಬಾಲಕನ ಈ ರೀತಿಯ ವರ್ತನೆ ಇದು ನಿಜವಾಗಿಯೂ ಪೋಷಕರ ತಪ್ಪೇ ? ಅಲ್ಲ ಕೆಲವರು ಇದು ಪೋಷಕರ ನೈತಿಕ ಪಾಠದ ಕೊರತೆಯಿಂದ ಸಂಭವಿಸಿದ್ದು ಅಲ್ಲ, ಇದೊಂದು ADHD(Attention Deficit Hyperactivity Disorder)ಅಥವಾ ಚುರುಕುಗೇಡಿತನದ ಸಮಸ್ಯೆಯಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯೋಗೇಶ್ ಮೇಷ್ಟು ಎಂಬುವವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದು, ಅವರ ಪೋಸ್ಟ್‌ನ ಸಾರಾಂಶ ಹೀಗಿದೆ.
ಇದೊಂದು ಚುರುಕುಗೇಡಿತನ ಅಂದರೆ ವಿಭಿನ್ನ ಶಕ್ತಿ ಏನಿದರ ಲಕ್ಷಣಗಳು ಎಂದರೆ ಮೊದಲನೇಯದಾಗಿ ಒಂದು ಕೆಲಸಕ್ಕೆ ಹೆಚ್ಚು ಸಮಯ ಏಕಾಗ್ರತೆ ನೀಡುವುದು ಕಷ್ಟವಾಗುವುದು, ಪಾಠ, ಕಥೆ ಅಥವಾ ಮಾತು ಇವುಗಳ ಮಧ್ಯದಲ್ಲೇ ಮನಸ್ಸು ಬೇರೆಡೆ ಹೋಗುವುದು. ಒಂದೇ ಜಾಗದಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳುವುದು ಕಷ್ಟವಾಗುವುದು. ನಿರಂತರ ಚಟುವಟಿಕೆ, ಯಾವುದರ ಬಗ್ಗೆಯೂ ಯೋಚಿಸದೆ ತಕ್ಷಣ ಪ್ರತಿಕ್ರಿಯಿಸುವುದು ಚಿಕ್ಕ ತಪ್ಪುಗಳಿಗೆ ತೀವ್ರ ಬೇಸರ ವ್ಯಕ್ತಪಡಿಸುವುದು ಕೋಪ ಅಥವಾ ನಿರಾಸೆ ಸ್ಫೋಟಗೊಳ್ಳುವುದು. ವಸ್ತುಗಳು, ಪುಸ್ತಕಗಳು, ವಿಷಯಗಳು, ಕೆಲಸಗಳನ್ನು ಮರೆತು ಹೋಗುವುದು ಎಂದು ಅವರು ವಿವರಿಸಿದ್ದಾರೆ.
ಇದಕ್ಕೆ ಕಾರಣ ಏನು?
ಮುಖ್ಯವಾಗಿ ಇದು ದೇಹದ ನರವ್ಯವಸ್ಥೆಯ ವಿಷಯವಾಗಿದೆ. ಮೆದುಳಿನ ಡೊಪಮಿನ್ ಮತ್ತು ನೋರೆಪಿನೆಫ್ರಿನ್ ಎಂಬ ರಾಸಾಯನಿಕಗಳ ಅಸಮತೋಲನದಿಂದ ಗಮನ ಮತ್ತು ನಿಯಂತ್ರಣದ ವ್ಯವಸ್ಥೆ ಬದಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ವಂಶಪಾರಂಪರ್ಯವಾಗಿ ಬರುತ್ತದೆ ಕೆಲವು ಸಂದರ್ಭಗಳಲ್ಲಿ ಗರ್ಭಾವಸ್ಥೆಯ ಪೋಷಣೆಯಲ್ಲಿ ಅಸಮತೋಲನ, ಅಥವಾ ಮೊಬೈಲ್, ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆಯಿಂದ ಕೂಡ ಉಂಟಾಗಬಹುದು.
ಈ ಎಡಿಹೆಚ್‌ಡಿ ಸಮಸ್ಯೆಗೇನು ಪರಿಹಾರ?
ಇಂತಹ ಹೈಪರ್ ಆಕ್ಟಿವಿಟೀಸ್ ಇರುವ ಮಕ್ಕಳನ್ನು ತಿದ್ದುವುದಕ್ಕೆ ಪ್ರೀತಿ, ತಾಳ್ಮೆ ಮತ್ತು ಪಾಠದ ಸಂಯೋಗ ಆಗಬೇಕು. ಕೋಪವಿಲ್ಲದ ಆದರೆ ಶಿಸ್ತಿನಿಂದ ಕೂಡಿದ ವಿವೇಕಪೂರ್ಣವಾದ ಮಾರ್ಗದರ್ಶನ, ಒಂದು ಬಾರಿ ಒಂದೇ ಕೆಲಸ ಮಾಡಬೇಕು ಎಂದು ಸಣ್ಣ ಹಂತದ ಕಾರ್ಯಯೋಜನೆಯ ಪ್ರಯೋಗ, ಆಟದ ಮೂಲಕ ಕಲಿಸುವುದು, ತಪ್ಪನ್ನೇ ಎತ್ತಿ ಹೇಳುವುದಕ್ಕಿಂತ ಪ್ರಯತ್ನ ಪಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದು. ಸಮತೋಲಿತವಾದ ಆಹಾರ, ನಿದ್ರೆ ಹಾಗೂ ಪ್ರಕೃತಿ ಜೊತೆ ಒಡನಾಟ, ಕೊನೆಯದಾಗಿ
ಮನೋವೈದ್ಯರ ಅಥವಾ ಕೌನ್ಸೆಲರ್ ಅವರ ಸಹಾಯದ ಮೂಲಕ ವರ್ತನಾ ಚಿಕಿತ್ಸೆ ಎಂದು ಮಾಹಿತಿ ನೀಡಿರುವ ಅವರು ಈ ಚುರುಕುಗೇಡಿತನವು ರೋಗವಲ್ಲ. ಅದು ಮೆದುಳಿನ ವಿಭಿನ್ನ ಶೈಲಿ ಎಂದು ಅವರು ಹೇಳಿದ್ದಾರೆ.
ಅವರ ಪೋಸ್ಟ್ ಇಲ್ಲಿದೆ ನೋಡಿ..
ಹಾಗಿದ್ದರೆ ಕೆಬಿಸಿ ಜ್ಯೂನಿಯರ್ ಶೋದಲ್ಲಿ ನಡೆದಿದ್ದು ಏನು?
ವೀಡಿಯೋದಲ್ಲಿ ಕಾಣುವಂತೆ ಬಾಲಕ ಈ ಕೆಬಿಸಿ ಶೋದ ಚೇರ್‌ನಲ್ಲಿ ಕುಳಿತ ಕೂಡಲೇ ನನಗೆ ಈ ಶೋದ ನಿಯಮಗಳನ್ನೆಲ್ಲಾ ಹೇಳುವುದಕ್ಕೆ ಹೋಗಬೇಡಿ ನನಗೆ ಎಲ್ಲವೂ ಗೊತ್ತಿದೆ ಎಂದು ಆರಭದಲ್ಲೇ ಉದ್ಧಟತನದಿಂದ ಆದೇಶ ಮಾಡುವಂತೆ ಮಾತನಾಡುತ್ತಾನೆ. ಈ ಶೋದಲ್ಲಿ ಅಮಿತಾಭ್ ಅವರು ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಅವರಿಗೆ ಶೋದ ನಿಯಮಗಳು ಮೊದಲೇ ಗೊತ್ತಿದ್ದರೂ ತಾವು ಒಂದು ಸಲ ಆ ನಿಯಮವನ್ನು ಸ್ಪರ್ಧಿಗಳಿಗೆ ಹೇಳುತ್ತಾರೆ. ಆದರೆ ಈ ಬಾಲಕ ಆರಂಭದಲ್ಲೇ ಅಮಿತಾಭ್ ಮಾತಿಗೆ ಬ್ರೇಕ್ ಹಾಕಿದ್ದಾನೆ. ಬಾಲಕನ ಈ ಮಾತಿಗೆ ಅಮಿತಾಭ್ ಅವರು ತಾಳ್ಮೆ ಕಳೆದುಕೊಳ್ಳದೇ ಸರಿ ಎಂದು ಹೇಳಿದ್ದಾರೆ. ನಂತರ ಮೊದಲನೇ ಪ್ರಶ್ನೆ ಕೇಳಿದ್ದಾರೆ. ಇವುಗಳಲ್ಲಿ ಯಾವುದನ್ನು ಬೆಳಗ್ಗೆ ತಿನ್ನಲಾಗುತ್ತದೆ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ ಕೈ ಮುಂದೆ ಮಾಡಿ ಯಾವುದೇ ಆಯ್ಕೆಗಳನ್ನು ಹೇಳುವುದು ಬೇಡ, ಬ್ರೇಕ್‌ಫಾಸ್ಟ್ ಎಂದು ಹೇಳುತ್ತಾನೆ. ನಂತರ 4 ಆಪ್ಷನ್‌ಗಳನ್ನು ಅಲ್ಲಿ ನೀಡಲಾಗಿದ್ದು, ಬಾಲಕ ಬಿ ಬ್ರೇಕ್‌ಫಾಸ್ಟ್ ಲಾಕ್ ಮಾಡಿ ಎಂದು ಲಾಕ್ ಮಾಡಿಸುತ್ತಾನೆ. ಹಾಗೆಯೇ ಚೆಸ್‌ನಲ್ಲಿ ಎಷ್ಟು ರಾಜ ಇರುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಬಾಲಕ ಇದೊಂದು ಕೇಳುವಂತಹ ಪ್ರಶ್ನೆಯೇ ಕೇವಲ 2 ರಾಜರು ಇರುತ್ತಾರೆ ಎಂದು ಉತ್ತರಿಸುತ್ತಾನೆ. ಜೊತೆಗೆ ಅಮಿತಾಬ್ ಅವರಿಗೆ ಆಯ್ಕೆಯನ್ನು ಹೇಳುವುದಕ್ಕೂ ಆತ ಬಿಡುವುದಿಲ್ಲ, ಈ ವೇಳೆ ಅಮಿತಾಭ್ ಅವರು ವೀಕ್ಷಕರಿಗಾಗಿ ಆಯ್ಕೆ ಹೇಳಬೇಕು ಎಂದು ಹೇಳುತ್ತಾರೆ. ಈ ವೇಳೆ ಅಮಿತಾಭ್ ಅವರು ಈ ಹುಡುಗ ಪ್ರಶ್ನೆ ಕೇಳುವುದಕ್ಕೂ ಮೊದಲು ಉತ್ತರಿಸುತ್ತಾನೆ ಎಂದು ಹೇಳಿದರೆ ಆತ ಅವರ ಮಾತನ್ನು ಅರ್ಧದಲ್ಲಿ ತಡೆದು ಸಾರ್ ಮುಂದಿನ ಪ್ರಶ್ನೆ ಕೇಳಿ ಎಂದು ಕಿರಿಕ್ ಮಾಡ್ತಾನೆ.
ನಂತರ 5ನೇ ಪ್ರಶ್ನೆಯನ್ನು ಅಮಿತಾಭ್ ಅವರು ಕೇಳಿದ್ದು, ಈ ವೇಳೆ ಉತ್ತರಿಸಲಾಗದೇ ಹುಡುಗ ಲಾಕ್ ಆಗಿದ್ದಾನೆ. ಅಂದಹಾಗೆ ಅಮಿತಾಭ್ ಅವರು ಅಂತಹ ಕಠಿಣ ಪ್ರಶ್ನೆಯನ್ನೇನೂ ಕೇಳಿರಲಿಲ್ಲ, ಆದರೆ ಬಾಲಕನಿಗೆ ರಾಮಾಯಾಣ ಮಹಾಭಾರತಗಳ ಬಗ್ಗೆ ಯಾವುದೇ ಜ್ಞಾನವಿಲ್ಲ ಅಷ್ಟೇ. ಅಮಿತಾಭ್ ಅವರು ಕೇಳಿದ್ದ ಪ್ರಶ್ನೆ ಇದಾಗಿತ್ತು. ವಾಲ್ಮೀಕಿ ರಾಮಾಯಣದಲ್ಲಿನ ಮೊದಲ ಕಾಂಡ ಯಾವುದು ಎಂದು ಕೇಳುತ್ತಾರೆ. ಆದರೆ ಈ ವೇಳೆ ಆತನಿಗೆ ಆಯ್ಕೆ ನೀಡರಲಿಲ್ಲ, ಆತನೇ ಆಯ್ಕೆ ನೀಡುವಂತೆ ಕೇಳಿದಾಗ ಬಾಲಕ ಇಷ್ಟು ಸಮಯ ಮಾಡಿದ ಕಿರಿಕಿರಿ ನೋಡಿದ ಅಲ್ಲಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡಿದ್ದಾರೆ. ನಂತರ ಅಮಿತಾಬ್ ಅವರು ಆಯ್ಕೆಗಳನ್ನು ನೀಡಲು ಬಾಲಕನನ್ನು ಸ್ವಲ್ಪ ಹೊತ್ತು ಕಾಯಿಸಿದಾಗ ಆ ಬಾಲಕ ತಾಳ್ಮೆ ಕಳೆದುಕೊಂಡು ಮೊದಲು ಆಪ್ಷನ್ ನೀಡಿ ಎಂದು ಬೊಬ್ಬೆ ಹೊಡೆಯುತ್ತಾನೆ. ನಂತರ ಅಮಿತಾಭ್ ಆಯ್ಕೆಗಳನ್ನು ನೀಡಿದ್ದು, ಆಯ್ಕೆಗಳು ಹೀಗಿದ್ದವು. ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಹಾಗೂ ಕಿಷ್ಕಿಂಧ ಕಾಂಡ. ಆಪ್ಷನ್ ಬರುತ್ತಿದ್ದಂತೆ ಈ ಬಾಲಕ ಆಯೋಧ್ಯಾ ಕಾಂಡ ಎಂದು ಹೇಳಿ ಅದನ್ನು ಲಾಕ್ ಮಾಡುವಂತೆ ಹೇಳಿದ್ದಾನೆ. ಮಧ್ಯೆ ಮಾತನಾಡಲು ಯತ್ನಿಸಿದ ಅಮಿತಾಭ್ ಅವರಿಗೆ ಆತ ಒಳ್ಳೆಯ ರೀತಿಯಲ್ಲಿ ಮೊದಲು ಅದನ್ನು ಲಾಕ್ ಮಾಡಿ ಎಂದು ಹೇಳುವ ಮೂಲಕ ದುರ್ವರ್ತನೆ ತೋರಿದ್ದಾನೆ. ಆದರೆ ಆತನ ಉತ್ತರ ತಪ್ಪಾಗಿದ್ದು, ನಂತರ ಅಮಿತಾಬ್ ಅವರು ಉತ್ತರ ತಪ್ಪು ಎಂದು ಹೇಳುತ್ತಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ವಿನಯವಂತಿಕೆ ಇಲ್ಲದೇ ಮಗುವನ್ನು ಬೆಳೆಸಿದ ರೀತಿಗೆ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಕ್ಕಳನ್ನು ತಿದ್ದದೇ ಅವರ ವರ್ತನೆಯನ್ನು ಕ್ಯೂಟ್ ಮುದ್ದು ಎಂದೆಲ್ಲಾ ಕರೆಯುವ ಪೋಷಕರಿಗೆ ಇದೊಂದು ಪಾಠ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ವೀಡಿಯೋವನ್ನು ಅನೇಕರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಷಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾರಿವಾಳದ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಅಗ್ನಿಶಾಮಕ ಸಿಬ್ಬಂದಿ
ಇದನ್ನೂ ಓದಿ: ಗ್ರಾಜುಯೇಷನ್‌ಡೇ ಇಷ್ಟೊಂದು ದುಬಾರಿ ನಾ: ಡಿಸ್ಟಿಂಕ್ಷನ್ ಗಳಿಸಿದರೂ ವೆಚ್ಚ ಭರಿಸಲಾಗದೇ ಅತಿಥಿಯಂತೆ ಭಾಗಿಯಾದ ಯುವತಿ
