'ನಿಮ್ಮಂತವರಿಗೆ ಗೂಗಲ್‌ನಲ್ಲಿ ಎಂದಿಗೂ ಕೆಲಸ ಸಿಗಲ್ಲ' ಎಂದ ಸಂದರ್ಶಕನಿಗೆ ತಕ್ಕ ಉತ್ತರ ಕೊಟ್ಟ ಯುವತಿ
ಕೆಲವು ದಿನಗಳ ಹಿಂದೆ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಗೂಗಲ್‌ನಲ್ಲಿ ಕೆಲಸ ಪಡೆದಿರುವುದಾಗಿಯೂ, ಅದಕ್ಕೂ ಮೊದಲು ಸ್ಟಾರ್ಟ್‌ಅಪ್ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವವನ್ನೂ ಶೇರ್ ಮಾಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ, ಟೆಕ್ ದೈತ್ಯ ಗೂಗಲ್‌ನಲ್ಲಿ ಕೆಲಸ ಪಡೆದ ಯುವತಿಯ ಯಶಸ್ಸಿನ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಕಥೆ ಕೇವಲ ಉದ್ಯೋಗ ಸಂದರ್ಶನ ಅಥವಾ ಅವಮಾನಿಸಿದ್ದರ ಬಗ್ಗೆ ಅಲ್ಲ, ಬದಲಿಗೆ ಧೈರ್ಯ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಉದಾಹರಣೆಯಾಗಿದೆ. ಯುವತಿಯ ಹೆಸರು ಅರ್ಪಿತಾ ದಾಸ್. ಕೆಲವು ದಿನಗಳ ಹಿಂದೆ ಇವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಗೂಗಲ್‌ನಲ್ಲಿ ಕೆಲಸ ಪಡೆದಿರುವುದಾಗಿಯೂ, ಅದಕ್ಕೂ ಮೊದಲು ಸ್ಟಾರ್ಟ್‌ಅಪ್ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ.
ಅರ್ಪಿತಾ ತಮ್ಮ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಒಂದು ಸ್ಟಾರ್ಟ್‌ಅಪ್ ಕಂಪನಿಯ ಸಂದರ್ಶನದಲ್ಲಿ ತುಂಬಾ ಕಷ್ಟಕರವಾದ ಪ್ರಶ್ನೆಗಳನ್ನು ಕೇಳಲಾಯಿತು ಎಂದು ಬರೆದಿದ್ದಾರೆ. ಸಿಸ್ಟಮ್ ಡಿಸೈನ್ ರೌಂಡ್ ಸಮಯದಲ್ಲಿ ಇನ್‌ಫ್ರಾಸ್ಟ್ರಕ್ಚರ್ ವಿನ್ಯಾಸಗೊಳಿಸಲು, ಸಿಪಿಯು ವೆಚ್ಚವನ್ನು ಅಂದಾಜು ಮಾಡಲು, ಮೂಲತಃ ಡೇಟಾ ಸೆಂಟರ್‌ನ ಫಿಸಿಕಲ್ ಕನ್ಸ್ಟ್ರಕ್ಷನ್ ಹೊರತುಪಡಿಸಿ ಉಳಿದ ಎಲ್ಲವನ್ನೂ ಕೇಳಿದರು ಎಂದು ಅರ್ಪಿತಾ ತಮಾಷೆಯಾಗಿ ಬರೆದಿದ್ದಾರೆ.
ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದಾಗ, ಸಂದರ್ಶಕರು ನಗುತ್ತಾ, 'ನಿಮ್ಮಂತಹ ಜನರು ಗೂಗಲ್ ಅಥವಾ ಮೆಟಾದಂತಹ ದೊಡ್ಡ ಕಂಪನಿಗಳಿಗೆ ಎಂದಿಗೂ ಪ್ರವೇಶಿಸಲು ಸಾಧ್ಯವಾಗದ ಕಾರಣ ಇದು' ಎಂದು ಹೇಳಿದಾಗ ಸಹನೆ ಮಿತಿ ಮೀರಿತು ಎಂದು ತಿಳಿಸಿದ್ದಾರೆ.
ಅರ್ಪಿತಾ ದಾಸ್ ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ..
Was grilled by a mid-level startup interviewer in a system design round - he made me design infra, estimate CPU costs, basically everything except physically build the data center.
When I stumbled, he smirked and said, “This is why people like you won’t make it to big companies… https://t.co/fDKU3blwJS— Arpita Das (@Arpitaaa01) July 27, 2025
ಇದು ಯಾರಿಗಾದರೂ ನಿರುತ್ಸಾಹವನ್ನುಂಟು ಮಾಡುತ್ತಿತ್ತು. ಆದರೆ ಆಕೆ ಬಿಟ್ಟುಕೊಡಲಿಲ್ಲ. ಅರ್ಪಿತಾ ಸ್ಟಾರ್ಟ್ಅಪ್ ಕಂಪನಿ ಮತ್ತು ಸಂದರ್ಶಕರ ಹೆಸರನ್ನು ಬಹಿರಂಗಪಡಿಸಲಿಲ್ಲ. ಆದರೆ ಅಂತಿಮವಾಗಿ ಗೂಗಲ್‌ನಲ್ಲಿ ಕೆಲಸ ಸಿಕ್ಕಿದೆ ಎಂದು ಕನ್‌ಫರ್ಮ್ ಆಗಿ ಹೇಳಿದರು.
ಇದರೊಂದಿಗೆ, ಅವರು ಗೂಗಲ್ ಕಂಪನಿಯಲ್ಲಿ ತಮ್ಮ ಆನ್‌ಬೋರ್ಡಿಂಗ್, ಆ ಕಂಪನಿಯಲ್ಲಿ ಸಿಕ್ಕ ವೆಲ್‌ಕಂ ಐಟಮ್ಸ್, ಅದ್ಭುತವಾದ ಗೂಗಲ್ ಪಿಕ್ಸೆಲ್ ಫೋನ್ ಮತ್ತು ಇತರ ಹಲವು ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದರು.
ಅರ್ಪಿತಾ ಅವರ ಪೋಸ್ಟ್ ವೈರಲ್ ಆದ ತಕ್ಷಣ, ಜನರು ಅವರ ಧೈರ್ಯ ಮತ್ತು ಯಶಸ್ಸನ್ನು ಶ್ಲಾಘಿಸಿದರು. ಒರ್ವ ಬಳಕೆದಾರರು, 'ಕೆಲವೊಮ್ಮೆ ಸಂದರ್ಶಕರಿಗೆ ಮೂಲಭೂತ ಕೌಶಲ್ಯಗಳು ತಿಳಿದಿರುವುದಿಲ್ಲ' ಎಂದು ಬರೆದಿದ್ದಾರೆ. ಮತ್ತೆ ಕೆಲವು ಬಳಕೆದಾರರು, 'ಸಂದರ್ಶಕ ಈಗ ಎಲ್ಲಿ ಕೆಲಸ ಮಾಡುತ್ತಿದ್ದಾರೆ?' ಎಂದು ಪ್ರಶ್ನಿಸಿದರೆ, ಅನೇಕರು 'ಸ್ವಲ್ಪ ಸಮಯದ ನಂತರ ಭವಿಷ್ಯದಲ್ಲಿ ಆ ಸಂದರ್ಶಕರನ್ನು ಸಂದರ್ಶಿಸಲು ನಿಮಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಜಗತ್ತು ಹೀಗೆಯೇ ಕೆಲಸ ಮಾಡುತ್ತದೆ' ಎಂದು ಬರೆದಿದ್ದಾರೆ.