- Home
- Entertainment
- TV Talk
- ಗೋಕರ್ಣದಲ್ಲಿ ನಡೆದಿದ್ದು ಅಸಹ್ಯ ಅನಿಸಿತು, ಫುಡ್ Vlogs ಮಾಡುತ್ತಲೇ ಸಣ್ಣಗಾದ 'ಲಕ್ಷ್ಮೀ ಬಾರಮ್ಮ' ನಟಿ Krithi Bettadh
ಗೋಕರ್ಣದಲ್ಲಿ ನಡೆದಿದ್ದು ಅಸಹ್ಯ ಅನಿಸಿತು, ಫುಡ್ Vlogs ಮಾಡುತ್ತಲೇ ಸಣ್ಣಗಾದ 'ಲಕ್ಷ್ಮೀ ಬಾರಮ್ಮ' ನಟಿ Krithi Bettadh
ಫುಡ್ ವ್ಲಾಗರ್ ಆಗಿರೋ ಕನ್ನಡದ ನಟಿ ಕೃತಿ ಬೆಟ್ಟದ್ ಅವರು ಫುಡ್ ವ್ಲಾಗ್ ಮಾಡುತ್ತಲೇ 26kg ಸಣ್ಣ ಆಗಿದ್ದಾರೆ. ʼಮಂಗಳಗೌರಿ ಮದುವೆʼ, ‘ಲಕ್ಷ್ಮೀ ಬಾರಮ್ಮ’ ನಟಿ ಕೃತಿ ಎಲ್ಲವನ್ನು ತಿಂದು ಸಣ್ಣ ಆಗಿದ್ದು ಹೇಗೆ?

ಕೃತಿ ಬೆಟ್ಟದ್ ಸಂದರ್ಶನದಲ್ಲಿ ಹೇಳಿದ್ದೇನು?
‘ಮಂಗಳಗೌರಿ ಮದುವೆ’, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದ ಕೃತಿ ಬೆಟ್ಟದ್ ಅವರು 26kg ತೂಕ ಇಳಿಸಿಕೊಂಡಿದ್ದಾರೆ. ಈ ಜರ್ನಿಯ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ.
ಸಣ್ಣ ಆಗಬೇಕು ಅಂತ ಅನಿಸಿದ್ದು ಯಾವಾಗ?
ಅನಾರೋಗ್ಯ ಶುರುವಾಯ್ತು, ವೈದ್ಯರ ಬಳಿ ಹೋದಾಗ ನನಗೆ ಶುಗರ್ ಇರೋದು ಗೊತ್ತಾಗಿತ್ತು. ಇದು ನನ್ನ ಜೀವನದಲ್ಲಾದ ದೊಡ್ಡ ಆಘಾತ. ನೀವು ಡಯೆಟ್ ಮಾಡಿದರೆ ಮಾತ್ರ ಎಲ್ಲವೂ ಸರಿ ಹೋಗುವುದು, ಇಲ್ಲವಾದಲ್ಲಿ ನೀವು ಮೆಡಿಸಿನ್ ತಗೋಬೇಕು ಎಂದು ಹೇಳಿದರು. ಶುಗರ್ ಮುಂತಾದ ಕಾಯಿಲೆಗೆ, ಒಮ್ಮೆ ಮೆಡಿಸಿನ್ ತಗೊಂಡರೆ ಜೀವನಪರ್ಯಂತ ಮೆಡಿಸಿನ್ ತಗೋಬೇಕಾಗಿ ಬರುವುದು ಎಂದು ನನ್ನ ಸ್ನೇಹಿತರೆಲ್ಲರೂ ಕೂಡ ಸಲಹೆ ನೀಡಿದರು. ಮೂರು ತಿಂಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದರು. ಜಿಮ್ ಹೇಗೆ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ಆಮೇಲೆ ನಾನು ಜಿಮ್‌ನಲ್ಲಿ ಏನಿರುತ್ತದೆ ಅಂತ ತಿಳಿದುಕೊಂಡು ಜಾಯಿನ್ ಆದೆ, ಪರ್ಸನಲ್ ಟ್ರೇನರ್ ಸಲಹೆಯಿಂದ 85kg ಯಿಂದ ಈಗ 60kg ಗೆ ಬಂದಿದ್ದೇನೆ.
ಫುಡ್ ವ್ಲಾಗರ್ ಆಗಿ ಸಣ್ಣ ಆದೆ
ದಪ್ಪ ಇದ್ದೇವೆ ಎಂದಕೂಡಲೇ ಎಲ್ಲರೂ ಸಣ್ಣ ಆಗು ಅಂತ ಸಲಹೆ ಕೊಡುತ್ತಾರೆ. ಆದರೆ ಇದು ಸಹಜ. ಫಿಟ್ ಆಗಿದ್ದರೆ ಜೀವನ ಚೇಂಜ್ ಆಗುವುದು ಎಂದು ಗೆಳತಿ ಅರ್ಚನಾ ಸಲಹೆ ನೀಡಿದಳು. ನಾನು ಫುಡ್ ವ್ಲಾಗರ್, ಫುಡ್ ಅಂದರೆ ತುಂಬ ಇಷ್ಟ. ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಸಿಕ್ಕ ಸಿಕ್ಕ ಆಹಾರ ತಿನ್ನುತ್ತಿದ್ದ ನಾನು ಡಯೆಟ್ ಮಾಡೋದು ಸುಲಭ ಇರಲಿಲ್ಲ. ಕಳೆದ ಒಂದೂವರೆ ವರ್ಷಗಳ ಕಾಲ ಸ್ವಲ್ಪವೂ ಚೀಟ್ ಮಾಡದೆ ನಾನು ಡಯೆಟ್ ಮಾಡಿದೆ, ಜಿಮ್‌ನಲ್ಲಿ ವರ್ಕೌಟ್ ಮಾಡಿದೆ. ಎಲ್ಲವನ್ನು ತಿಂದು ನಾವು ಸಣ್ಣ ಆಗಬಹುದು ಅಂತ ಅನಿಸಿದೆ. ಯಾವ ಟೈಮ್‌ನಲ್ಲಿ ಎಷ್ಟು ತಿನ್ನಬೇಕು ಎನ್ನೋದು ಗೊತ್ತಿದ್ದರೆ ಸಣ್ಣ ಆಗಬಹುದು.
ಸಣ್ಣ ಆಗುವಾಗ ಎಲ್ಲವನ್ನು ತಿನ್ನೋದು ಬಿಡಬೇಕಾ?
ನನ್ನ ದೇಹಕ್ಕೆ ಏನು ಬೇಕು? ಎಷ್ಟು ಆಹಾರ ಬೇಕು? ಎಂಬುದು ಅರ್ಥ ಆಗಿದೆ. ಫುಡ್ ವ್ಲಾಗ್ ಮಾಡಿಕೊಳ್ಳುತ್ತ, ನಾನು ಏನು ಫುಡ್ ತಿನ್ನುತ್ತೇನೆ ಎನ್ನೋದರ ಮೇಲೆ ಟ್ರೇನರ್ ಕೂಡ ಡಯೆಟ್ ಚಾರ್ಟ್ ಕೂಡ ನೀಡಲು ಆರಂಭಿಸಿದರು. ಏನು ಮಾಡಿದರೆ ತೂಕ ಕಡಿಮೆ ಆಗುತ್ತದೆ? ಹೇಗೆ ಬಾಡಿ ಟೋನ್ ಆಗುತ್ತದೆ ಎಂಬುದೆಲ್ಲ ತಿಳಿದುಕೊಂಡೆ. ಪ್ರೋಟೀನ್ ತಗೊಂಡರೆ ಹೃದಯಕ್ಕೆ ಸಮಸ್ಯೆ ಬರುವುದಾ ಎಂಬ ಅನುಮಾನ ಕೂಡ ಇತ್ತು. ಆದರೆ ಆಮೇಲೆ ಪ್ರೋಟೀನ್ ಮಹತ್ವ ತಿಳಿದುಕೊಂಡೆ.
ಯಾವ ಘಟನೆ ಸಣ್ಣ ಆಗಲು ಟ್ರಿಗರ್ ಮಾಡಿತು?
ಒಮ್ಮೆ ಫ್ರೆಂಡ್ಸ್ ಜೊತೆ ಗೋಕರ್ಣಕ್ಕೆ ಹೋಗಿದ್ದೆ. ಅಲ್ಲಿ ಏರಿ ಹತ್ತಬೇಕಿತ್ತು. ನನ್ನ ಜೊತೆಗಿದ್ದವರು 8 ನಿಮಿಷದಲ್ಲಿ ಏರಿ ಹತ್ತಿದರೆ, ನಾನು 40 ನಿಮಿಷ ತಗೊಂಡೆ. ಆಗ ಯಾರೂ ನನಗೆ ಏನೂ ಹೇಳಲಿಲ್ಲ. ಆದರೆ ನನ್ನಿಂದ ಬೇರೆಯವರಿಗೆ ಸಮಸ್ಯೆ ಆಯ್ತು ಅಂತ ನನ್ನ ಮೇಲೆ ನನಗೆ ಅಸಹ್ಯ ಆಯ್ತು. ಆಗ ಫಿಟ್ ಆಗಬೇಕು ಅಂತ ಅನಿಸಿತು.
ಇಂದು ಜೀವನ ಹೇಗಿದೆ?
ಭಾವನಾತ್ಮಕವಾಗಿ, ದೈಹಿಕವಾಗಿ ನಾನು ಸ್ಟ್ರಾಂಗ್ ಆಗಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ. ಆರೋಗ್ಯವೇ ಎಲ್ಲ. ಆಹಾರ ಸರಿಯಾಗಿ ಸೇವನೆ ಮಾಡಿದರೆ, 20% ವ್ಯಾಯಾಮ ಮಾಡಿದರೆ ಸಾಕಾಗುತ್ತದೆ.
ದಪ್ಪ ಇದ್ದಾಗ ಏನೆಲ್ಲ ಕಷ್ಟ ಅನುಭವಿಸಿದ್ರಿ?
ಎಲ್ಲರೂ ಹೀಯಾಳಿಸುತ್ತಿದ್ದರು, ನಾನು ಚೆನ್ನಾಗಿ ನಟಿಸಿದ್ರೂ ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸೆಟ್‌ನಲ್ಲಿ ಸೀನ್ ತೆಗೆಯುವಾಗ ತಿನ್ನೋಕೆ ಕೊಡುತ್ತಿದ್ದರು, ಸೀನ್ ಮುಗಿದು ಊಟದ ಟೈಮ್‌ನಲ್ಲಿ ತಿನ್ನೋಕೆ ಹೋದರೆ, ಅಲ್ಲೂ ತಿಂತಾರೆ, ಇಲ್ಲೂ ತಿಂತಾರೆ ಎಂದು ಹೇಳುತ್ತಿದ್ದರು. ಎಷ್ಟೋ ಒಳ್ಳೆಯ ಪಾತ್ರಗಳು ನನ್ನ ಕೈತಪ್ಪಿ ಹೋಗಿವೆ. ನನಗೆ ಒಂದು ಪಾತ್ರದಲ್ಲಿ ನಾನು ನಟಿಸಬಹುದಿತ್ತು, ಆದರೆ ಆ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡಿಕೊಂಡರು, ಅವರಿಗೆ ನಟಿಸೋಕೆ ಬರದಿದ್ರೂ ಭೇಷ್ ಎಂದಿದ್ದಿದೆ.
ಈಗ ಜೀವನ ಹೇಗಿದೆ?
ಕಳೆದ ಹತ್ತು ತಿಂಗಳು ನಾನು ಎಲ್ಲಿಯೂ ಸಕ್ಕರೆ, ಬೆಲ್ಲ ತಿಂದಿಲ್ಲ. ನಾನು ಫಿಟ್ ಆಗಬೇಕು ಅಂತ ತಾಯಿ, ಸ್ನೇಹಿತರು, ಜಿಮ್ ಟ್ರೇನರ್ಸ್ ಎಲ್ಲರೂ ಬೆಂಬಲ ಕೊಡುತ್ತಿದ್ದರು. ಇವರ ಸಲುವಾಗಿ ನಾನು ಚೀಟ್ ಮೀಲ್ ಮಾಡಲಿಲ್ಲ. ಡಯೆಟ್ ಮಾಡುವಾಗ ಸಿಟ್ಟು ಬರೋದು ಸಹಜ. ಆದರೆ ತಾಳ್ಮೆ ತಗೊಳ್ಳಬೇಕು. ಮೊದಲು ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದ ನಾನು, ಈಗ ತುಂಬ ಮುತುವರ್ಜಿ ವಹಿಸಿ ಬಟ್ಟೆ ಆಯ್ಕೆ ಮಾಡಿಕೊಳ್ತೀನಿ. ಕನ್ನಡಿ ಮುಂದೆ ನಿಂತಾಗ ಆ ಬಟ್ಟೆ ಹೇಗೆ ಕಾಣುವುದು ಎಂದು ಯೋಚನೆ ಮಾಡ್ತೀನಿ. ಈ ಮನಸ್ಥಿತಿ ಒಳ್ಳೆಯದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ. ನನೆಗ ಈಗ ಶುಗರ್ ಇಲ್ಲ, ಮಾನಸಿಕವಾಗಿ, ದೈಹಿಕವಾಗಿ ನಾನು ಆರೋಗ್ಯವಾಗಿದ್ದೀನಿ, ಖುಷಿಯಾಗಿದ್ದೀನಿ.
ನಿರೀಕ್ಷೆ ಏನು?
ಈಗ ಸಣ್ಣ ಆಗಿದ್ದೀನಿ, ನಟನೆ ಕೌಶಲ ಕೂಡ ಇದೆ. ಈಗ ನಾನು ಕೂಡ ಎಲ್ಲ ರೀತಿಯ ಪಾತ್ರಗಳನ್ನು ಮಾಡಬಲ್ಲೆ ಎಂದು ಸಾಬೀತುಪಡಿಸುವ ಸಮಯ ಬಂದಿದೆ. ಈಗ ಸಿನಿಮಾ, ಸೀರಿಯಲ್ ಅವಕಾಶಗಳು ಬರುತ್ತಿದೆ.