- Home
- Entertainment
- TV Talk
- Bigg Boss Kannada ಮನೆಗೆ ಲವರ್ ಬಾಯ್ ಎಂಟ್ರಿ: ರಾಶಿಕಾಗೆ ಗುಲಾಬಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್!
Bigg Boss Kannada ಮನೆಗೆ ಲವರ್ ಬಾಯ್ ಎಂಟ್ರಿ: ರಾಶಿಕಾಗೆ ಗುಲಾಬಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್!
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ 'ಲವರ್ ಬಾಯ್' ಖ್ಯಾತಿಯ ಸೂರಜ್ ಸಿಂಗ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಟಾಸ್ಕ್‌ನಲ್ಲೇ ರಾಶಿಕಾಗೆ ಗುಲಾಬಿ ನೀಡಿ ಗಮನ ಸೆಳೆದ ಇವರ ಜೊತೆಗೆ, ಮ್ಯೂಟೆಂಟ್ ರಘು ಮತ್ತು ರಿಷಾ ಗೌಡ ಕೂಡ ಮನೆ ಪ್ರವೇಶಿಸಿದ್ದು, ಆಟದ ದಿಕ್ಕು ಬದಲಾಗುವ ನಿರೀಕ್ಷೆಯಿದೆ.

ಬಿಗ್ ಬಾಸ್ ಮನೆಯ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದಿರುವ ಸೂರಜ್ ಸಿಂಗ್‌ಗೆ ಸ್ವತಃ ಕಲರ್ಸ್ ಕನ್ನಡ ವಾಹಿನಿಯವರೇ 'ಲವರ್ ಬಾಯ್' ಎಂದು ಹೆಸರು ಕೊಟ್ಟಿದ್ದಾರೆ. ಸೂರಜ್ ಅವರ ಪ್ರವೇಶವು ರೊಮ್ಯಾಂಟಿಕ್ ಆಗಿ ಆಯೋಜನೆಗೊಂಡಿತ್ತು. ಅವರು ಮನೆಯೊಳಗೆ ಬರುವ ಮುನ್ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಗುಲಾಬಿ ದಳಗಳನ್ನು ಹಾಕಿ, ಅದರ ಮಧ್ಯೆ ರೊಮ್ಯಾಂಟಿಕ್ ಆಗಿ ನಿಂತುಕೊಂಡಿದ್ದರು.
ಈ ದೃಶ್ಯವನ್ನು ನೋಡಿದ ಇತರೆ ಸ್ಪರ್ಧಿಗಳು ಗಾರ್ಡನ್ ಏರಿಯಾದ ಬಾಗಿಲು ತೆರೆದು ಹೊರಗೆ ಬಂದಾಗ, ಸೂರಜ್‌ರನ್ನು ನೋಡಿ ಆಶ್ಚರ್ಯ ಮತ್ತು ಸಂತೋಷದಿಂದ 'ವಾವ್ಹ್' ಎಂದು ಪ್ರತಿಕ್ರಿಯಿಸಿದ್ದಾರೆ.
ಅದರಲ್ಲೂ ಮನೆಯಲ್ಲಿದ್ದ ಎಲ್ಲ ಮಹಿಳಾ ಸ್ಪರ್ಧಿಗಳು ಮತ್ತು ಹುಡುಗಿಯರು ಒಂದು ಕ್ಷಣ ಸೂರಜ್‌ರತ್ತ ನೋಡಿ ಪುಳಕಿತರಾಗಿದ್ದಾರೆ. ಸೂರಜ್ ಅವರ ಆಕರ್ಷಕ ವ್ಯಕ್ತಿತ್ವವನ್ನು ನೋಡಿಯೇ ಬಿಗ್ ಬಾಸ್ ಮನೆಯೊಳಗೆ ಕಳುಹಿಸುವ ಮುನ್ನ 'ಲವರ್ ಬಾಯ್' ಎಂದು ನಾಮಕರಣ ಮಾಡಲಾಗಿದೆ ಎನಿಸುತ್ತದೆ.
ಸೂರಜ್‌ಗೆ ದೊಡ್ಮನೆಯೊಳಗೆ ಹೋಗುತ್ತಿದ್ದಂತೆಯೇ ಮೊದಲ ಟಾಸ್ಕ್ ಒಂದನ್ನು ನೀಡಲಾಯಿತು. 'ಹಾಲಿ ಬಿಗ್ ಬಾಸ್ ಸೀಸನ್ 12ರ ಮಹಿಳಾ ಸ್ಪರ್ಧಿಗಳ ಪೈಕಿ ಅತ್ಯಂತ ಸುಂದರವಾಗಿರುವ ಸ್ತ್ರೀ ಸದಸ್ಯೆ ಯಾರು?' ಎಂದು ಆಯ್ಕೆ ಮಾಡುವಂತೆ ಕೇಳುತ್ತಾರೆ.
ಆಗ ಸೂರಜ್ ಕೈಯಲ್ಲಿ ಒಂದೆರಡು ಗುಲಾಬಿ ಹೂಗಳನ್ನು ಹಿಡಿದು, ನೇರವಾಗಿ ಮೈಸೂರಿನವರೇ ಆದ ರಾಶಿಕಾ ಬಳಿ ಹೋಗಿ ಹೂವನ್ನು ಕೊಡುತ್ತಾರೆ. 'ನಾನು ರಾಶಿಕಾ ಅವರಿಗೆ ಹೂವನ್ನು ಕೊಡುತ್ತೇನೆ. ಯಾಕೆಂದರೆ ಈ ಮನೆಯಲ್ಲಿ ರಾಶಿಕಾ ತುಂಬಾ ಕ್ಯೂಟ್ ಅಂತಾ ಕಾಣಿಸುತ್ತಾರೆ' ಎಂದು ಸೂರಜ್ ಸಿಂಗ್ ಹೇಳಿದ್ದಾರೆ.
ಸೂರಜ್ ಸಿಂಗ್ ಮೈಸೂರಿನ ಹುಡುಗ. ಐಟಿ ಉದ್ಯೋಗಿಯಾಗಿರುವ ಸೂರಜ್, ಫಿಟ್‌ನೆಸ್ ಫ್ರೀಕ್ ಮತ್ತು ಮಾಡೆಲ್ ಕೂಡ ಆಗಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿದ್ದ ಸೂರಜ್, ತಮ್ಮ ತಾಯಿಯ ಕಾಳಜಿಯಿಂದಾಗಿ ವಿದೇಶದಿಂದ ವಾಪಸ್ ಬಂದಿದ್ದಾರೆ.
'ನನ್ನ ಅಕ್ಕನಿಗೆ ಮದುವೆ ಆಯ್ತು, ನನ್ನ ತಾಯಿ ಒಬ್ಬರೇ ಇರುತ್ತಾರೆ. ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿದ್ದಾರೆ. ಈ ಸಮಯದಲ್ಲಿ ನಾನು ಅವರ ಜೊತೆಗೆ ಇರಬೇಕು' ಎಂದು ಹೇಳಿರುವ ಸೂರಜ್, ಸಾಮಾಜಿಕ ಜಾಲತಾಣಗಳಲ್ಲಿಯೂ ಫೇಮಸ್ ಆಗಿದ್ದಾರೆ.
'ಬಿಗ್ ಬಾಸ್ ಕನ್ನಡ ಸೀಸನ್ 12' (Bigg Boss Kannada Season 12) ಮೂರು ವಾರಗಳ ನಂತರ ಮತ್ತಷ್ಟು ಕಾವೇರಿದ್ದು, ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಿಂದ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಇಷ್ಟು ದಿನ ದೊಡ್ಮನೆಯೊಳಗೆ ಅಶ್ವಿನಿ ಗೌಡ ಮತ್ತು ಜಾನ್ವಿ ಸೇರಿದಂತೆ ಹೆಣ್ಣು ಮಕ್ಕಳ ಪಾರುಪತ್ಯ ಮೆರೆದಿದ್ದ ಬೆನ್ನಲ್ಲೇ, ಆ ಆಧಿಪತ್ಯವನ್ನು ಮಟ್ಟಹಾಕಲು ಹೊಸ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.
ಅವರಲ್ಲಿ ಮೈಸೂರಿನ ಹುಡುಗ ಸೂರಜ್ ಸಿಂಗ್ (Sooraj Singh) ಎಲ್ಲರ ಗಮನ ಸೆಳೆದಿದ್ದಾರೆ. ಸೂರಜ್ ಸಿಂಗ್ ಜೊತೆಗೆ ಮ್ಯೂಟೆಂಟ್ ರಘು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ, ಕ್ರೀಡಾಪಟು ರಿಷಾ ಗೌಡ ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ್ದು, ಈ ಹೊಸ ಎಂಟ್ರಿಗಳು ಬಿಗ್ ಬಾಸ್ ಮನೆಯ ಆಟದ ದಿಕ್ಕನ್ನೇ ಬದಲಿಸುವ ನಿರೀಕ್ಷೆ ಇದೆ.