ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದನ್ನು ಯದುವೀರ್ ಒಡೆಯರ್ ಸ್ವಾಗತಿಸಿದ್ದಾರೆ.
ಕೊಡಗು: ಈ ಬಾರಿಯ ದಸರಾ ಉದ್ಘಾಟಕರನ್ನಾಗಿ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಆಯ್ಕೆಯನ್ನು ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಸ್ವಾಗತಿಸಿದ್ದಾರೆ. ಯದುವೀರ್ ಒಡೆಯರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಸದರೂ ಆಗಿದ್ದಾರೆ. ಕಳೆದೆರಡು ದಿನಗಳಿಂದ ಬಿಜೆಪಿ ನಾಯಕರು ಬಾನು ಮುಷ್ತಾಕ್ ಆಯ್ಕೆಯನ್ನು ತೀವ್ರವಾಗಿ ವಿರೋಧಿಸಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಯದುವೀರ್ ಒಡೆಯರ್ ಹೇಳಿಕೆ ಬಿಜೆಪಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಬಾನು ಮುಷ್ತಾಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಖ್ಯಾತ ಬರಹಗಾರ್ತಿ. ಹಾಗೆಯೇ ಸಾಮಾಜಿಕ ಹೋರಾಟದಲ್ಲಿಯೂ ಬಾನು ಮುಷ್ತಾಕ್ ಗುರುತಿಸಿಕೊಂಡಿದ್ದಾರೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ಮುಸ್ಲಿಂ ಮಹಿಳೆಯರಿಗೆ ಸಮಾನವಾದ ಹಕ್ಕು ಕೊಡಿಸಬೇಕು ಎಂದು ಬಾನು ಮುಷ್ತಾಕ್ ಹೋರಾಟ ನಡೆಸುತ್ತಿದ್ದಾರೆ. ಇದರ ಜೊತೆ ಮಸೀದಿಗೆ ತೆರಳಲು ಸಹ ಅವಕಾಶ ನೀಡಬೇಕು ಎಂದು ಹೋರಾಟ ನಡೆಸಿದ್ದಾರೆ. ಈ ಹಿಂದೆ ಬಾನು ಮುಷ್ತಾಕ್ ಸಾಮಾಜಿಕ ಬಹಿಷ್ಕಾರಕ್ಕೂ ಒಳಗಾಗಿದ್ದರು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಾನು ಮುಷ್ತಾಕ್ ನೀಡಿದ ಕೊಡುಗೆ ಅಪಾರವಾಗಿದ್ದು, ನಾವು ಅದನ್ನು ಗೌರವಿಸುತ್ತವೆ. ಹಾಗಾಗಿ ರಾಜ್ಯ ಸರ್ಕಾರದ ಆಯ್ಕೆ ನಿರ್ಧಾರವನ್ನು ಸ್ವಾಗತ ಮಾಡೋದಾಗಿ ಯದುವೀರ್ ಒಡೆಯರ್ ಹೇಳಿದ್ದಾರೆ.
ಬಾನು ಮುಷ್ತಾಕ್ ಆಯ್ಕೆಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ಮತ್ತು ಹಿಂದೂ ಸಂಘಟನೆಯ ನಾಯಕರು ತೀವ್ರವಾಗಿ ವಿರೋಧಿಸಿದ್ದರು. ಇದು ಜಾತ್ಯಾತೀತೆಯ ಕಾರ್ಯಕ್ರಮ ಅಲ್ಲ. ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿದೆ. ಹಾಗಾಗಿ ಬಾನು ಮುಷ್ತಾಕ್ ಆಯ್ಕೆ ಸೂಕ್ತವಲ್ಲ ಎಂದು ಪ್ರತಾಪ್ ಸಿಂಹ ವಾದಿಸಿದ್ದರು. ಇನ್ನು ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಸ್ಲಾಂ ಮೂರ್ತಿ ಪೂಜೆಯನ್ನು ಧಿಕ್ಕರಿಸಿ ಒಂದು ದೇವರು ಹಾಗೂ ಒಂದು ಗ್ರಂಥವನ್ನೇ ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಅವರು ಇನ್ನೂ ಇದ್ದಾರೆಯೇ, ಅಥವಾ ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಅವರು ನಂಬುತ್ತಾರೆಯೇ ಎಂಬುದರ ಬಗ್ಗೆ ಶ್ರೀಮತಿ ಭಾನು ಮುಶ್ತಾಕ್ ಅವರು ಸ್ಪಷ್ಟನೆ ನೀಡುವುದು ಅಗತ್ಯ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
