ಟರ್ಕಿ ಜೊತೆ ಬಾಂಗ್ಲಾದೇಶ ಒಪ್ಪಂದ ಮಾಡಿಕೊಂಡ್ರೆ ಭಾರತಕ್ಕೆ ಏಕೆ ತಲೆನೋವು?
India Bangladesh strategic relations ಶೇಖ್ ಹಸೀನಾ ಸರ್ಕಾರದ ಪತನದ ನಂತರ, ಬಾಂಗ್ಲಾದೇಶವು ಭಾರತದ ವಿರೋಧಿ ರಾಷ್ಟ್ರವಾದ ಟರ್ಕಿಯೊಂದಿಗೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ, ಇದು ಭಾರತಕ್ಕೆ ವ್ಯೂಹಾತ್ಮಕವಾಗಿ ಹೊಸ ಸವಾಲನ್ನು ಒಡ್ಡಿದೆ.

ಭಾರತದ ಶತ್ರು ದೇಶ ಟರ್ಕಿ
ನವದೆಹಲಿ: ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಭಾರತದೊಂದಿಗಿನ ಸಂಬಂಧ ಹಾಳು ಮಾಡಿಕೊಂಡಿರುವ ಬಾಂಗ್ಲಾದೇಶ ಇದೀಗ ಭಾರತದ ಶತ್ರು ದೇಶ ಟರ್ಕಿ ಜತೆ ಮಹತ್ವದ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ.
ವಾಯುರಕ್ಷಣಾ ವ್ಯವಸ್ಥೆ
ಈ ಒಪ್ಪಂದದ ಅಡಿಯಲ್ಲಿ ಟರ್ಕಿ, ಬಾಂಗ್ಲಾದೇಶಕ್ಕೆ ಸೈಪರ್ ಹೆಸರಿನ ದೂರವ್ಯಾಪಿ ವಾಯುರಕ್ಷಣಾ ವ್ಯವಸ್ಥೆ (ಏರ್‌ಡಿಫೆನ್ಸ್ ಸಿಸ್ಟಮ್) ಮತ್ತು ಯುದ್ಧ ಡ್ರೋನ್‌ಗಳನ್ನು ಒದಗಿಸಲಿದೆ. ಜತೆಗೆ ಟರ್ಕಿಯೊಂದಿಗೆ ಸೇರಿ ಡ್ರೋನ್‌ಗಳನ್ನೂ ಉತ್ಪಾದಿಸಲಿದೆ.
ಟರ್ಕಿಗೆ ಇದು ಶಕ್ತಿಪ್ರದರ್ಶನ
ಒಪ್ಪಂದದ ಬಗ್ಗೆ ಮಾತನಾಡಿರುವ ಢಾಕಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಒಬೈದುಲ್ಲಾ, ‘ಇದು ಕೇವಲ ಶಸ್ತ್ರಾಸ್ತ್ರ ಒಪ್ಪಂದವಲ್ಲ. ಬಾಂಗ್ಲಾದ ದೃಷ್ಟಿಯಲ್ಲಿ ಇದು ಸಾರ್ವಭೌಮತೆಯ ಪ್ರತೀಕವಾಗಿದ್ದು, ಜಾಗತಿಕ ದೈತ್ಯರಾಗುವ ಅವಕಾಶವಾಗಿದೆ. ಅತ್ತ ಟರ್ಕಿಗೆ ಇದು ಶಕ್ತಿಪ್ರದರ್ಶನಕ್ಕೆ ಸಿಕ್ಕ ಅವಕಾಶವಾಗಿದೆ. ಆದರೆ ಪಕ್ಕದ ಭಾರತಕ್ಕೆ ಇದು ತಲೆನೋವಾಗಲಿದೆ’ ಎಂದು ವಿಶ್ಲೇಷಿಸಿದ್ದಾರೆ.
ಭಾರತಕ್ಕೆ ಆತಂಕ?
ಬಾಂಗ್ಲಾದ ಸೇನೆಯ ಶಕ್ತಿ ಹೆಚ್ಚಾಗುತ್ತಿರುವುದು ಭಾರತಕ್ಕೆ ಆತಂಕ ಅಲ್ಲವೇ ಅಲ್ಲ. ಬದಲಿಗೆ, ಭಾರತದ ಪರಮವೈರಿಯಾಗಿರುವ ಪಾಕಿಸ್ತಾನದ ಪರವಾಗಿರುವ ಟರ್ಕಿಯಿಂದ ಬಾಂಗ್ಲಾ ಆಯುಧ ತರಿಸಿಕೊಳ್ಳುವುದರಿಂದ ವ್ಯೂಹಾತ್ಮಕ ವಿಷಯದಲ್ಲಿ ಇದು ಅಪಾಯವಾಗಲಿದೆ.
ಮೊಹಮದ್ ಯೂನಸ್ ನೇತೃತ್ವದ ಸರ್ಕಾರ
ಕಾಶ್ಮೀರ ವಿಷಯದಲ್ಲಿ ಸದಾ ಪಾಕ್ ಬೆನ್ನಿಗೆ ನಿಲ್ಲುವ ಟರ್ಕಿ, ಇತ್ತೀಚೆಗೆ ನಡೆದ ಪಹಲ್ಗಾಂ ದಾಳಿ ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಮಾಡಲಾದ ಆಪರೇಷನ್ ಸಿಂದೂರದ ಸಂದರ್ಭದಲ್ಲಿಯೂ ಭಾರತದ ವಿರುದ್ಧ ನಿಲುವು ತಳೆದಿತ್ತು. ಹೀಗಿರುವಾಗ, ಪ್ರಸ್ತುತ ಬಾಂಗ್ಲಾದಲ್ಲಿ ಅಧಿಕಾರದಲ್ಲಿರುವ ಮೊಹಮದ್ ಯೂನಸ್ ನೇತೃತ್ವದ ಸರ್ಕಾರವೂ ಭಾರತದ ವಿರೋಧಿಯಾಗಿ ರೂಪಗೊಳ್ಳುತ್ತಿರುವುದರಿಂದ, ಟರ್ಕಿಯೊಂದಿಗಿನ ಅವರ ಸ್ನೇಹ ಸವಾಲಾಗಲಿರುವುದು ಸಹಜ.
ಇದನ್ನೂ ಓದಿ: ಬ್ರಹ್ಮೋಸ್ ಕಣ್ಣಳತೆಯಲ್ಲಿದೆ ಪಾಕ್: ಆಪರೇಷನ್ ಸಿಂದೂರದ ರಹಸ್ಯವೇನು?
ಬಾಂಗ್ಲಾಗೆ ಲಾಭವೇನು?
ಜಾಗತಿಕವಾಗಿ ಹಲವು ಸಂಘರ್ಷಗಳು ನಡೆಯುತ್ತಿರುವ ಹಾಗೂ ನೆರೆಯ ಮಯನ್ಮಾರ್‌ನಲ್ಲಿ ನಾಗರಿಕ ಯುದ್ಧ ಮುಂದುವರೆದಿರುವ ಹೊತ್ತಿನಲ್ಲಿ ಬಾಂಗ್ಲಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಅವಶ್ಯಕ. ಅದರಲ್ಲೂ ಮಯನ್ಮಾರ್‌ನ ಯುದ್ಧವಿಮಾನಗಳು ಬಾಂಗ್ಲಾದ ಆಗಸದಲ್ಲಿ ಹಾರಾಡುತ್ತಿರುವುದರಿಂದ ವಾಯುರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು ಅತ್ಯವಶ್ಯಕ.
ಇದನ್ನೂ ಓದಿ: ರಾಜಕೀಯದಲ್ಲಿ ಧರ್ಮ ದಂಗಲ್ ನಡೆಸುವ ಹುನ್ನಾರ: ವಿಪ ಸದಸ್ಯ ಬಿ.ಕೆ.ಹರಿಪ್ರಸಾದ್