ಬೇಯಿಸಿದ ಮೊಟ್ಟೆ ಮತ್ತು ಅಮ್ಲೆಟ್: ಈ ಎರಡರಲ್ಲಿ ಯಾವುದು ಬೆಸ್ಟ್?
ಬೇಯಿಸಿದ ಮೊಟ್ಟೆ ಮತ್ತು ಆಮ್ಲೆಟ್ ಎರಡೂ ಜನಪ್ರಿಯ ಆಹಾರಗಳಾಗಿದ್ದು, ಪೌಷ್ಟಿಕಾಂಶದಲ್ಲಿ ವ್ಯತ್ಯಾಸಗಳಿವೆ. ಈ ಲೇಖನವು ಕೊಬ್ಬು, ಕ್ಯಾಲೋರಿಗಳು, ಪ್ರೋಟೀನ್, ಜೀವಸತ್ವಗಳು, ಖನಿಜಗಳು, ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲಿನ ಪರಿಣಾಮಗಳಂತಹ ಅಂಶಗಳ ಆಧಾರದ ಮೇಲೆ ಎರಡನ್ನೂ ಹೋಲಿಸುತ್ತದೆ.
ಬೇಯಿಸಿದ ಮೊಟ್ಟೆ ಮತ್ತು ಆಮ್ಲೆಟ್ ಅಂದ್ರೆ ಎಲ್ಲರೂ ಇಷ್ಟಪಡುತ್ತಾರೆ. ಆರೋಗ್ಯಕ್ಕೆ ಮೊಟ್ಟೆ ಒಳ್ಳೆಯ ಆಹಾರ. ಚಳಿಗಾಲದಲ್ಲಿ ಮೊಟ್ಟೆ ಮಾರಾಟ ಹೆಚ್ಚಾಗಿರುತ್ತದೆ. ಚಳಿ ಹೆಚ್ಚಿರೋದರಿಂದ ಮೊಟ್ಟೆ ಸೇವನೆಯಲ್ಲಿ ಹೆಚ್ಚಳವಾಗಿರುತ್ತದೆ.
ಬೇಯಿಸಿದ ಮೊಟ್ಟೆ ಮತ್ತು ಆಮ್ಲೆಟ್ ಎಲ್ಲರ ಮನೆಯಲ್ಲಿಯೂ ಮಾಡಿರುತ್ತಾರೆ. ಆದ್ರೆ ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಗೊತ್ತಾ? ಯಾವುದು ತಿಂದ್ರೆ ಆರೋಗ್ಯಕ್ಕೆ ಹೆಚ್ಚು ಲಾಭ ಗೊತ್ತಾ? ಈ ಎರಡರಲ್ಲಿನ ವ್ಯತ್ಯಾಸ ಏನು ಎಂಬುದರ ಮಾಹಿತಿ ಇಲ್ಲಿದೆ. ಮೊಟ್ಟೆ ಪ್ರಿಯರು ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ.
1.ಕೊಬ್ಬು ಮತ್ತು ಕ್ಯಾಲೋರಿ
ಬೇಯಿಸಿದ ಮೊಟ್ಟೆ: ಬೇಯಿಸಿದ ಮೊಟ್ಟೆ ಕಡಿಮೆ ಕೊಬ್ಬು ಹೊಂದಿರುತ್ತದೆ. ವಿಶೇಷವಾಗಿ ಬಿಳಿ ಭಾಗ ಕಡಿಮೆ ಕೊಬ್ಬು ಹೊಂದಿರುತ್ತದೆ. ಕಡಿಮೆ ಕೊಬ್ಬಿನ ಜೊತೆಗೆ ಕ್ಯಾಲೋರಿಯೂ ಕಡಿಮೆ ಇರುತ್ತದೆ. ತೂಕ ಇಳಿಸಿಕೊಳ್ಳುವ ಜನರು ಮೊಟ್ಟೆಯ ಬಿಳಿ ಭಾಗವನ್ನು ಸೇವಿಸುತ್ತಾರೆ.
ಆಮ್ಲೆಟ್: ಆಮ್ಲೆಟ್ ಮಾಡಲು ಎಣ್ಣೆ ಸೇರ್ಪಡೆ ಮಾಡೋದರಿಂದ ಇದರಲ್ಲಿನ ಕೊಬ್ಬಿನಾಂಶ ಮತ್ತು ಕ್ಯಾಲೋರಿ ಹೆಚ್ಚಾಗುತ್ತದೆ. ಅತಿಯಾದ ಎಣ್ಣೆ ಬಳಕೆಯಿಂದ ಆಮ್ಲೆಟ್‌ನಲ್ಲಿನ ಕೊಬ್ಬಿನಾಂಶ ಹೆಚ್ಚಾಗುತ್ತದೆ.
2.ಪ್ರೊಟಿನ್
ಬೇಯಿಸಿದ ಮೊಟ್ಟೆ: ಮೊಟ್ಟೆ ಪ್ರೋಟಿನ್ ಮೂಲವಾಗಿದ್ದು, ಬಿಳಿ ಭಾಗದಲ್ಲಿ ಈ ಅಂಶ ಹೆಚ್ಚಾಗಿರುತ್ತದೆ. ಪ್ರೋಟಿನ್ ಅಂಶ ಕಡಿಮೆ ಇರೋರಿಗೆ ಮೊಟ್ಟೆ ಬಿಳಿ ಭಾಗ ಸೇವಿಸಲು ಸಲಹೆ ನೀಡಲಾಗುತ್ತದೆ.
ಆಮ್ಲೆಟ್: ಆಮ್ಲೆಟ್ ಹಳದಿ ಮತ್ತು ಬಿಳಿ ಭಾಗವನ್ನು ಹೊಂದಿರುತ್ತದೆ. ಹಾಗಾಗಿ ಆಮ್ಲೆಟ್‌ನಲ್ಲಿ ಪ್ರೋಟಿನ್ ಅತ್ಯಧಿಕವಾಗಿರುತ್ತದೆ.
3.ಜೀವಸತ್ವ ಮತ್ತು ಖನಿಜಗಳು
ಬೇಯಿಸಿದ ಮೊಟ್ಟೆ: ವಿಟಮಿನ್ ಎ, ಬಿ12 ಜೊತೆಗೆ ಬೇಯಿಸಿದ ಮೊಟ್ಟೆಯಲ್ಲಿ ಐರನ್ ಮತ್ತು ಸೆಲೆನಿಯಂನಂತಹ ಖನಿಜ ಅಂಶಗಳನ್ನು ಹೊಂದಿರುತ್ತವೆ. ಈ ಅಂಶಗಳು ದೇಹದಲ್ಲಿ ಪವರ್ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ.
ಆಮ್ಲೆಟ್: ಆಮ್ಲೆಟ್ ಫ್ರೈ ಮಾಡೋದರಿಂದ ಮೊಟ್ಟೆಯಲ್ಲಿನ ಜೀವಸತ್ವ ಮತ್ತು ಖನಿಜಾಂಶಗಳು ಕಡಿಮೆ ಆಗಬಹುದು. ಆಮ್ಲೆಟ್‌ನಲ್ಲಿ ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಸೇರಿದಂತೆ ಇನ್ನಿತರ ತರಕಾರಿ ಮತ್ತು ಮಸಾಲೆ ಸೇರಿಸುವದರಿಂದ ಆರೋಗ್ಯಕ್ಕೆ ಒಳ್ಳೆಯದು.
4.ಜೀರ್ಣಕ್ರಿಯೆ
ಬೇಯಿಸಿದ ಮೊಟ್ಟೆ: ಇದು ಹೆಚ್ಚುವರಿ ಕೊಬ್ಬು ಹೊಂದಿರದ ಕಾರಣ ಬೇಯಿಸಿದ ಮೊಟ್ಟೆ ಜೀರ್ಣಕ್ರಿಯೆಗೆ ಅಡೆತಡೆಯನ್ನುಂಟು ಮಾಡೋದಿಲ್ಲ. ಬೇಯಿಸಿದ ಮೊಟ್ಟೆ ಬೇಗ ಜೀರ್ಣವಾಗುತ್ತದೆ.
ಆಮ್ಲೆಟ್: ಇದನ್ನು ತಯಾರಿಸಲು ಅತಿಯಾದ ಎಣ್ಣೆ ಮತ್ತು ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಲಾಗಿರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ.
5.ಆರೋಗ್ಯದ ಮೇಲೆ ಪರಿಣಾಮ
ಬೇಯಿಸಿದ ಮೊಟ್ಟೆ: ಬೇಯಿಸಿದ ಮೊಟ್ಟೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆಯಾಗಿರುವ ಕಾರಣ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಆಮ್ಲೆಟ್: ಕಡಿಮೆ ಎಣ್ಣೆ ಮತ್ತು ಮಸಾಲೆ ಬಳಸಿಯೂ ಆಮ್ಲೆಟ್ ತಯಾರಿಸಬಹುದು. ಅತಿಯಾದ ಕೊಬ್ಬು ಮತ್ತು ಕ್ಯಾಲೋರಿ ಅಂಶ ಹೆಚ್ಚಾಗಿರುವ ಕಾರಣ ಅತಿಯಾದ ಆಮ್ಲೆಟ್ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.