ಗರಿಕೆ ಹುಲ್ಲನ್ನು ಇಷ್ಟಪಡುವ ಗಣೇಶನಿಗೆ ಯಾಕೆ ತುಳಸಿ ದಳ ಅರ್ಪಿಸಬಾರದು… ಇಲ್ಲಿದೆ ಮಾಹಿತಿ…
ಗಣೇಶ ಚತುರ್ಥಿಯಂದು ಗಣೇಶನಿಗೆ ಮೋದಕ, ಗರಿಕೆ ಮತ್ತು ವಿವಿಧ ರೀತಿಯ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ, ಆದರೆ ತುಳಸಿ ಎಲೆಗಳನ್ನು ಅರ್ಪಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಕಥೆಯನ್ನು ತಿಳಿದುಕೊಳ್ಳೋಣ.

ಇನ್ನೇನು ಗಣೇಶ ಹಬ್ಬ ಬರಲಿದೆ. ಹಬ್ಬಕ್ಕೆ ಎಲ್ಲೆಡೆ ಸಂಪೂರ್ಣ ತಯಾರಿ ಕೂಡ ನಡೆಯುತ್ತಿದೆ. ಗಣೇಶನಿಗೆ ಸಾಮಾನ್ಯವಾಗಿ ಆತನಿಗೆ ಪ್ರಿಯವಾದ ಮೋದಕಗಳು, ಗರಿಕೆ ಮತ್ತು ವಿವಿಧ ಖಾದ್ಯಗಳನ್ನು ಅರ್ಪಿಸಲಾಗುತ್ತದೆ. ಇದರಿಂದ ಗಣೇಶ ಪ್ರಸನ್ನನಾಗಿ ಆಶೀರ್ವಧಿಸುತ್ತಾನೆ.
ಆದರೆ ನಿಮಗೆ ಗೊತ್ತಾ? ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸಬಾರದು, ಅರ್ಪಿಸೋದಿಲ್ಲ. ಯಾಕಪ್ಪಾ ಹೀಗೆ ಎಂದು ಯೋಚನೆ ಮಾಡಿದ್ದೀರಆ? ಈ ಒಂದು ಸಂಪ್ರದಾಯದ ಕುರಿತಾಗಿ ಪೌರಾಣಿಕ ಕಥೆ ಏನೆಂದು ತಿಳಿಯೋಣ.
ಧಾರ್ಮಿಕ ಗ್ರಂಥಗಳಲ್ಲಿ ಹೇಳುವಂತೆ ಒಮ್ಮೆ ತುಳಸಿ ದೇವಿಯು ತೀರ್ಥಯಾತ್ರೆಯಲ್ಲಿದ್ದಾಗ, ಗಂಗಾ ನದಿಯ ದಡದಲ್ಲಿ ಗಣೇಶ ಧ್ಯಾನದಲ್ಲಿ ತೊಡಗಿರುವುದನ್ನು ನೋಡಿದಳು. ಗಣೇಶನ ಈ ದೈವಿಕ ರೂಪವನ್ನು ನೋಡಿದ ತುಳಸಿಗೆ ಆತನ ಮೇಲೆ ಆಕರ್ಷಣೆ ಉಂಟಾಯಿತಂತೆ ಮತ್ತು ಅವನನ್ನು ಮದುವೆಯಾಗುವ ಬಯಕೆ ತುಳಸಿ ಮನಸ್ಸಿನಲ್ಲಿ ಹುಟ್ಟಿತು.
ಈ ಬಗ್ಗೆ ತುಳಸಿಯು ಗಣೇಶನ ಬಳಿ ಹೇಳಿದಾಗ, ಗಣೇಶ ಆಕೆಯ ಪ್ರೇಮದ ನಿವೇದನೆಯನ್ನು ನಿರಾಕರಿಸಿ, ತಾನು ಬ್ರಹ್ಮಚಾರಿ ಎಂದು ಹೇಳಿದನು. ಗಣೇಶ ಅವಳ ಪ್ರಸ್ತಾಪವನ್ನು ತಿರಸ್ಕರಿಸಿದಾಗ, ತುಳಸಿ ಕೋಪಗೊಂಡು ಗಣೇಶನಿಗೆ ಎರಡು ಮದುವೆಗಳು ಆಗಲಿ ಎಂದು ಶಪಿಸಿದಳು.
ತುಳಸಿ ಈ ರೀತಿಯಾಗಿ ಶಪಿಸಿರೋದನ್ನು ನೋಡಿ, ಗಣೇಶ ಕೂಡ ಕೋಪಗೊಂಡು ತುಳಸಿಯು ಅಸುರ ಶಂಖಚೂಡನನ್ನು ಮದುವೆಯಾಗುವಂತೆ ಶಪಿಸಿದರು. ಆದರೆ ಬಳಿಕ ತನ್ನ ಮಾತಿಗೆ ಮರುಗಿದರಂತೆ.
ನಂತರ ಗಣೇಶ ತಪ್ಪನ್ನು ಅರಿತು, ತುಳಸಿ ವಿಷ್ಣು ಮತ್ತು ಶ್ರೀಕೃಷ್ಣನಿಗೆ ತುಂಬಾ ಪ್ರಿಯಳು ಅನ್ನೋದನ್ನು ಅರಿತು , ನನ್ನ ಪೂಜೆಯಲ್ಲಿ ಎಂದಿಗೂ ತುಳಸಿಯನ್ನು ಬಳಕೆ ಮಾಡಬಾರದು ಎಂದು ಶಪಿಸಿದರಂತೆ. ಅಂದಿನಿಂದ ಇಂದಿನವರೆಗೆ, ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಎಂದಿಗೂ ಅರ್ಪಿಸುವುದಿಲ್ಲ ಎನ್ನಲಾಗುತ್ತೆ.