ಗಣೇಶ ಚತುರ್ಥಿಗೆ ಇನ್ನೊಂದೇ ದಿನ ಬಾಕಿ ಇದೆ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತಯಾರಿ ನಡೆದಿದೆ. ನೀವೂ ಗಣೇಶ ಮೂರ್ತಿ ಖರೀದಿ ಪ್ಲಾನ್ ನಲ್ಲಿದ್ರೆ ಇಂಥ ತಪ್ಪು ಮಾಡ್ಬೇಡಿ. 

ಚೌತಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಂದು ಗಣಪತಿ ಬಂದ್ರೆ ಹಿಂದಿನ ದಿನ ತಾಯಿ ಗೌರಿ ಬರ್ತಾಳೆ. ಈ ಬಾರಿ ಗೌರಿ ಹಬ್ಬವನ್ನು ಆಗಸ್ಟ್ 26 ರಂದು ಆಚರಣೆ ಮಾಡಲಾಗ್ತಿದೆ. ಜನರು ಗೌರಿ ಜೊತೆ ಗಣೇಶ ಮೂರ್ತಿ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ನಿಮ್ಮ ಮನೆಯಲ್ಲೂ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚೌತಿ (Ganesha Chauthi)ಯಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಪೂಜೆ ಮಾಡ್ತೀರಿ ಎಂದಾದ್ರೆ ಕೆಲವೊಂದು ವಿಷ್ಯ ನೆನಪಿಟ್ಟುಕೊಳ್ಳಿ. ಗಣಪತಿ ಮೂರ್ತಿ ಖರೀದಿ ಮಾಡುವ ಟೈಂನಲ್ಲಿ ಎಚ್ಚರವಹಿಸಿ.

ಗಣಪತಿ ಮೂರ್ತಿ (Ganesha idol) ಖರೀದಿ ವೇಳೆ ಇದು ನೆನಪಿರಲಿ :

• ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಮಾತ್ರ ಮನೆಗೆ ತಂದು ಸ್ಥಾಪನೆ ಮಾಡಿ. ಹಿಂದೂ ಧರ್ಮದಲ್ಲಿ ಇದು ಬಹಳ ಶುಭವೆಂದು ನಂಬಲಾಗಿದೆ.

• ವಾಸ್ತು (Vastu) ನಿಯಮಗಳ ಪ್ರಕಾರ ನೀವು ಅತಿ ದೊಡ್ಡ ಅಥವಾ ಅತೀ ಚಿಕ್ಕ ಗಣಪತಿ ಮೂರ್ತಿಯನ್ನು ಮನೆಗೆ ತರಬಾರದು. ಸಾರ್ವಜನಿಕ ಗಣಪತಿ ಹಾಗೂ ಮನೆಯಲ್ಲಿ ಸ್ಥಾಪಿಸುವ ಗಣಪತಿಗೆ ವ್ಯತ್ಯಾಸವಿದೆ. ಅತಿ ದೊಡ್ಡ ಗಣಪತಿಯನ್ನು ಸಾರ್ವಜನಿಕ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಮನೆಯಲ್ಲಿ ಮಧ್ಯಮ ಗಾತ್ರದ ಗಣಪತಿ ಮೂರ್ತಿಯನ್ನು ನೀವು ಸ್ಥಾಪನೆ ಮಾಡ್ಬೇಕು.

• ಗಣಪತಿ ಸೊಂಡಿಲಿನ ಬಗ್ಗೆಯೂ ನೀವು ಗಮನ ಹರಿಸಬೇಕು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಡ ಭಾಗಕ್ಕೆ ಸೊಂಡಿಲಿರುವ ಗಣಪತಿ ಮೂರ್ತಿಯೇ ಸಿಗುತ್ತದೆ. ಆದ್ರೂ ಖರೀದಿ ಮಾಡುವಾಗ ಇದ್ರ ಬಗ್ಗೆ ಗಮನ ಹರಿಸಿ. ಎಡ ಭಾಗಕ್ಕೆ ಸೊಂಡಿಲಿರುವ ಗಣಪತಿ ಶಾಂತ ಸ್ವಭಾವ ಹೊಂದಿರುತ್ತಾನೆ. ಅವನ ಪೂಜೆ ಸರಳ ಎಂದು ನಂಬಲಾಗಿದೆ. ಅದೇ ಮನೆಯಲ್ಲಿ ಬಲಸೊಂಡಿಲ ಗಣಪನನ್ನು ಪೂಜಿಸೋದು ಕಷ್ಟ. ಕಠಿಣ ನಿಯಮಗಳನ್ನು ಇಲ್ಲಿ ಪಾಲನೆ ಮಾಡ್ಬೇಕಾಗುತ್ತದೆ.

• ಗಣಪತಿ ಭಂಗಿಯನ್ನೂ ನೀವು ನೋಡ್ಬೇಕು. ವಿವಿಧ ಭಂಗಿಯಲ್ಲಿ ಗಣೇಶನ ಮೂರ್ತಿ ನಿಮಗೆ ಲಭ್ಯವಿದೆ. ನೃತ್ಯ ಮಾಡ್ತಿರುವ, ನಿಂತಿರುವ, ವಿಶ್ರಾಂತಿ ಪಡೆಯುತ್ತಿರುವ ಮೂರ್ತಿಗಳನ್ನು ನೀವು ಕಾಣ್ಬಹುದು. ಆದ್ರೆ ಮನೆಗೆ ಯಾವಾಗ್ಲೂ ಕುಳಿತಿರುವ ಭಂಗಿ ಮೂರ್ತಿಯನ್ನೇ ತನ್ನಿ. ಇದು ನಿಮಗೆ ಶುಭ ಫಲ ನೀಡುತ್ತದೆ. ಸಂತೋಷ, ನೆಮ್ಮದಿ, ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದೇ ನೀವು ಪೆಂಡಾಲಕ್ಕೆ ಗಣೇಶ ಮೂರ್ತಿ ಖರೀದಿ ಮಾಡ್ತಿದ್ದರೆ, ನಿಂತ, ನೃತ್ಯ ಮಾಡ್ತಿರುವ ಮೂರ್ತಿ ತರಬಹುದು.

• ಗಣೇಶ ಮೋದಕ ಪ್ರಿಯ. ಹಾಗೆಯೇ ಅವನ ವಾಹನ ಇಲಿ. ಇದನ್ನು ಗಣೇಶನ ಅಪಾರ ಭಕ್ತ ಎಂದೇ ನಂಬಲಾಗಿದೆ. ನೀವು ಮನೆಗೆ ತರುವ ಗಣೇಶ ಮೂರ್ತಿ ಬಳಿ ಮೋದಕ ಹಾಗೂ ಇಲಿ ಮೂರ್ತಿ ಇರುವಂತೆ ನೋಡ್ಕೊಳ್ಳಿ.

• ವಾಸ್ತು ಶಾಸ್ತ್ರದ ಪ್ರಕಾರ, ಮನೆಗೆ ಬಿಳಿ ಬಣ್ಣದ ಗಣಪತಿ ಮೂರ್ತಿ ತರುವುದು ಅತ್ಯಂತ ಶುಭಕರ. ಇದು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಕಾಪಾಡುತ್ತದೆ. ಸಿಂಧೂರ ಬಣ್ಣದ ಮೂರ್ತಿಯನ್ನೂ ನೀವು ತರಬಹುದು. ಇದು ನಿಮ್ಮ ಬೆಳವಣಿಗೆಗೆ ಸಹಕಾರಿ.

• ನೀವು ಗಣಪತಿ ಮೂರ್ತಿಯನ್ನು ಮನೆಗೆ ತರುವ ವೇಳೆ ಮುಹೂರ್ತವನ್ನು ಗಮನಿಸಿ. ಒಳ್ಳೆಯ ಮುಹೂರ್ತದಲ್ಲಿ ಗಣಪತಿ ಮನೆಗೆ ಬರುವಂತೆ ನೋಡಿಕೊಳ್ಳಿ.

• ಗಣಪತಿ ಪ್ರತಿಷ್ಠಾಪನೆ, ಪೂಜೆ ಮಾತ್ರ ಮುಖ್ಯವಲ್ಲ, ಗಣಪತಿ ಮೂರ್ತಿ ಮನೆಗೆ ಬರುವುದು ಕೂಡ ಮುಖ್ಯ. ನೀವು ಶುದ್ಧವಾಗಿ, ಒಳ್ಳೆಯ ಸಮಯದಲ್ಲಿ ಗಣಪತಿಯನ್ನು ಮನೆಗೆ ತರಬೇಕು. ಗಣಪತಿಯನ್ನು ಮೆರವಣಿಗೆ ಮೂಲಕ ಇಲ್ಲವೆ ಜಾಗಟೆ ಬಾರಿಸ್ತಾ ತರಬೇಕು.