ಭಾರತದ 5 ಅತ್ಯಂತ ನಿಗೂಢ-ಪವಾಡ ದೇವಾಲಯಗಳು, ಇವುಗಳ ಮುಂದೆ ವಿಜ್ಞಾನವೂ ಫೇಲ್!
ಭಾರತವನ್ನು ದೇವಾಲಯಗಳ ದೇಶ ಎಂದೇ ಕರೆಯಲಾಗುತ್ತದೆ. ಇಲ್ಲಿ ಅನೇಕ ಪ್ರಸಿದ್ಧ ಮತ್ತು ಪವಾಡದ ದೇವಾಲಯಗಳಿವೆ. ಈ ದೇವಾಲಯಗಳು ಅನೇಕ ರಹಸ್ಯಗಳನ್ನು ಹೊಂದಿವೆ, ಅದು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿ ಉಳಿದಿದೆ. ಈ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬರುತ್ತದೆ.
ಇವು ಭಾರತದ 5 ನಿಗೂಢ ದೇವಾಲಯಗಳು
ನಮ್ಮ ದೇಶದಲ್ಲಿ ಅನೇಕ ನಿಗೂಢ ಮತ್ತು ಪವಾಡದ ದೇವಾಲಯಗಳಿವೆ.ಕೆಲವು ದೇವಾಲಯಗಳ ನಿಗೂಢಗಳು ಜನರಿಗೆ ಪವಾಡ ಎಂದೇ ಅನಿಸುತ್ತದೆ. ವಿಜ್ಞಾನ ಕೂಡ ಇಂದಿಗೂ ಈ ದೇವಾಲಯಗಳ ರಹಸ್ಯವನ್ನು ಬಿಡಿಸಲು ಸಾಧ್ಯವಾಗಿಲ್ಲ. ಈ ದೇವಾಲಯಗಳಿಗೆ ಪ್ರತಿದಿನ ಭಕ್ತರ ದಂಡೇ ಹರಿದು ಬರುತ್ತದೆ, ಅವರು ಈ ರಹಸ್ಯಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.ಆ ಐದು ದೇವಸ್ಥಾನಗಳ ವಿವರ ಇಲ್ಲಿದೆ.
ಇದು ಶನಿದೇವನ ಅತ್ಯಂತ ಪ್ರಸಿದ್ಧ ದೇವಾಲಯ
ನಮ್ಮ ದೇಶದಲ್ಲಿ ಭಗವಾನ್ ಶನಿದೇವನ ಅನೇಕ ದೇವಾಲಯಗಳಿವೆ, ಇವೆಲ್ಲದರಲ್ಲೂ ಅತ್ಯಂತ ಪ್ರಸಿದ್ಧವಾದದ್ದು ಶನಿ ಶಿಂಗಣಾಪುರ ದೇವಾಲಯ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಶನಿದೇವನ ಯಾವುದೇ ಮೂರ್ತಿ ಇಲ್ಲ, ಬದಲಿಗೆ 5 ಅಡಿ ಎತ್ತರ ಮತ್ತು ಸುಮಾರು 2 ಅಡಿ ಅಗಲವಿರುವ ಕಲ್ಲಿನ ಶಿಲೆ ಇದೆ. ಇದನ್ನೇ ಶನಿದೇವ ಎಂದು ಪೂಜಿಸಲಾಗುತ್ತದೆ.
ಇದರ ಮೇಲೆ ಯಾವುದೇ ಗೋಪುರ ಕೂಡ ಇಲ್ಲ: ಈ ದೇವಾಲಯಕ್ಕೆ ಸಂಬಂಧಿಸಿದ ಮತ್ತೊಂದು ವಿಶೇಷವೆಂದರೆ ಇಲ್ಲಿ ಶನಿದೇವನ ಪ್ರತಿಮೆಯ ಮೇಲೆ ಯಾವುದೇ ಛಾವಣಿ ಇಲ್ಲ. ಈ ಪ್ರತಿಮೆಯು ತೆರೆದ ಆಕಾಶದ ಕೆಳಗೆ ಒಂದು ವೇದಿಕೆಯ ಮೇಲೆ ಇದೆ. ಶನಿ ಪ್ರತಿಮೆಯ ಮೇಲೆ ಛಾವಣಿ ಹಾಕಲು ಪ್ರಯತ್ನಿಸಿದಾಗಲೆಲ್ಲಾ ಅದು ವಿಫಲವಾಗಿದೆ ಎಂದು ಹೇಳಲಾಗುತ್ತದೆ. ಅಂದಿನಿಂದ ಭಕ್ತರು ಈ ರೂಪದಲ್ಲಿ ಶನಿದೇವನನ್ನು ಪೂಜಿಸುತ್ತಿದ್ದಾರೆ.
ಇಡೀ ಗ್ರಾಮದ ಯಾವ ಮನೆಗೂ ಬೀಗವಿಲ್ಲ: ಶನಿದೇವನ ಈ ದೇವಾಲಯವು ಮಹಾರಾಷ್ಟ್ರದ ಅಹಮದ್‌ನಗರದ ಶಿಂಗಣಾಪುರ ಗ್ರಾಮದಲ್ಲಿದೆ. ಶನಿದೇವ ಸ್ವತಃ ಈ ಗ್ರಾಮವನ್ನು ಕಾಪಾಡುತ್ತಾನೆ ಎಂದು ಹೇಳಲಾಗುತ್ತದೆ. ಈ ಗ್ರಾಮದ ಮನೆಗಳಲ್ಲಿ ಜನರು ಮನೆಗೆ ಬೀಗ ಹಾಕುವುದಿಲ್ಲ ಮತ್ತು ಹಣ ಮುಂತಾದ ಬೆಲೆಬಾಳುವ ವಸ್ತುಗಳನ್ನು ತಿಜೋರಿಯಲ್ಲಿ ಇಡುವುದಿಲ್ಲ. ಇಲ್ಲಿ ಯಾರು ಕಳ್ಳತನ ಮಾಡಿದರೂ ಶನಿದೇವ ಸ್ವತಃ ಶಿಕ್ಷೆ ನೀಡುತ್ತಾನೆ ಎಂಬ ನಂಬಿಕೆ ಇದೆ.
ನಿಗೂಢವಾಗಿದೆ ಅಸ್ಸಾಂನ ಈ ದೇವಿ ದೇವಾಲಯ
ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಾಲಯ. ಈ ದೇವಾಲಯವು ದೇವಿಯ ಶಕ್ತಿಪೀಠಗಳಲ್ಲಿ ಒಂದಾಗಿದೆ. ದೇವಿ ಸತಿಯ ಯೋನಿ ಇಲ್ಲಿಯೇ ಬಿದ್ದಿತು ಎಂಬ ಪ್ರತೀತಿ ಇದೆ. ಈ ದೇವಾಲಯವು ತಾಂತ್ರಿಕ ಪ್ರಾಮುಖ್ಯತೆಯನ್ನು ಸಹ ಹೊಂದಿದೆ. ವಿಶೇಷ ಸಂದರ್ಭಗಳಲ್ಲಿ, ಸಾವಿರಾರು ತಾಂತ್ರಿಕರು ಇಲ್ಲಿ ಸೇರುತ್ತಾರೆ. ಇದನ್ನು ಸಿದ್ಧ ಸ್ಥಳವೆಂದು ಪರಿಗಣಿಸಲಾಗಿದೆ.
ಪ್ರತಿದಿನ ಬಲಿ: ಕಾಮಾಖ್ಯ ದೇವಾಲಯದಲ್ಲಿ ಪ್ರತಿದಿನ ಸಾವಿರಾರು ಪ್ರಾಣಿ ಪಕ್ಷಿಗಳನ್ನು ಬಲಿ ನೀಡಲಾಗುತ್ತದೆ. ಒಂದು ಕಾಲದಲ್ಲಿ ಇಲ್ಲಿ ನರಬಲಿ ಅಂದರೆ ಮನುಷ್ಯರನ್ನು ಬಲಿ ನೀಡಲಾಗುತ್ತಿತ್ತು ಎಂದೂ ಹೇಳಲಾಗುತ್ತದೆ, ಈ ಪದ್ಧತಿಯನ್ನು ನಂತರ ನಿಲ್ಲಿಸಲಾಯಿತು. ಪ್ರಸ್ತುತ, ಇಲ್ಲಿ ಕುರಿ, ಮೇಕೆ, ಮೀನು, ಪಾರಿವಾಳಗಳನ್ನು ಬಲಿ ನೀಡುವ ಪದ್ಧತಿ ಇದೆ.
ವರ್ಷದಲ್ಲಿ 3 ದಿನ ಈ ದೇವಾಲಯ ಮುಚ್ಚಿರುತ್ತದೆ: ಕಾಮಾಖ್ಯ ದೇವಾಲಯವು ವರ್ಷಪೂರ್ತಿ ಭಕ್ತರಿಗೆ ತೆರೆದಿರುತ್ತದೆ, ಆದರೆ ಆಷಾಢ ಮಾಸದಲ್ಲಿ 3 ದಿನಗಳ ಕಾಲ ಈ ದೇವಾಲಯವನ್ನು ಮುಚ್ಚಲಾಗುತ್ತದೆ. ಈ 3 ದಿನಗಳಲ್ಲಿ ದೇವಿ ಮಾತೆ ಮುಟ್ಟಾಗುತ್ತಾರೆ ಎಂಬ ಪ್ರತೀತಿ ಇದೆ. ಈ 3 ದಿನಗಳಲ್ಲಿ ಪೂಜಾರಿಗಳು ಸಹ ದೇವಾಲಯ ಪ್ರವೇಶಿಸುವುದಿಲ್ಲ. ಈ 3 ದಿನಗಳಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ, ಇದನ್ನು ಅಂಬುವಾಚಿ ಜಾತ್ರೆ ಎಂದು ಕರೆಯಲಾಗುತ್ತದೆ.
ಇದು ಇಲಿಗಳ ದೇವಾಲಯ
ರಾಜಸ್ಥಾನದ ಬಿಕಾನೇರಿನಿಂದ 30 ಕಿ.ಮೀ ದೂರದಲ್ಲಿರುವ ಕರ್ಣಿ ಮಾತಾ ದೇವಾಲಯ. ಈ ದೇವಾಲಯವನ್ನು ಇಲಿಗಳ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಒಂದೆರಡಲ್ಲ, ಬದಲಾಗಿ 2೦ ಸಾವಿರಕ್ಕೂ ಹೆಚ್ಚು ಇಲಿಗಳಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಇಲಿಗಳ ದೇವಾಲಯ ಎಂದು ಕರೆಯಲಾಗುತ್ತದೆ. ಜನರು ಇವುಗಳನ್ನು ದೇವಿಯ ಭಕ್ತರೆಂದು ಪರಿಗಣಿಸುತ್ತಾರೆ.
ಇಲಿ ತಿಂದ ಪ್ರಸಾದ ಸೇವನೆ: ಈ ದೇವಾಲಯದಲ್ಲಿ ಜನರು ಯಾವುದೇ ಪ್ರಸಾದವನ್ನು ಅರ್ಪಿಸಿದರೂ ಮೊದಲು ಇಲಿಗಳು ಆ ಪ್ರಸಾದವನ್ನು ತಿನ್ನುತ್ತವೆ ಮತ್ತು ನಂತರ ಭಕ್ತರು ಸಹ ಅದೇ ಪ್ರಸಾದವನ್ನು ಸೇವಿಸುತ್ತಾರೆ. ಜನರು ಈ ಪ್ರಸಾದವನ್ನು ಪವಾಡ ಎಂದು ಪರಿಗಣಿಸುತ್ತಾರೆ. ಏಕೆಂದರೆ, ಇಲ್ಲಿಯವರೆಗೆ ಇಲಿಗಳು ತಿಂದ ಪ್ರಸಾದವನ್ನು ಸೇವಿಸಿ ಯಾರಿಗೂ ಯಾವುದೇ ಕಾಯಿಲೆ ಬಂದಿಲ್ಲ.
ಬಿಳಿ ಇಲಿ ಕಾಣಿಸಿಕೊಳ್ಳುವುದು ಪವಾಡ: ಇಲ್ಲಿ ಸಾವಿರಾರು ಕಪ್ಪು ಇಲಿಗಳಿವೆ, ಆದರೆ ಬಿಳಿ ಇಲಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿವೆ. ಅದು ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತದೆ. ಯಾರಿಗಾದರೂ ಬಿಳಿ ಇಲಿ ಕಾಣಿಸಿಕೊಂಡರೆ ಅವರ ಮೇಲೆ ದೇವಿಯ ಕೃಪೆ ಇದೆ ಮತ್ತು ಅವರ ಜೀವನದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ದೇವಿ ಅಗ್ನಿ ಸ್ನಾನ ಮಾಡುವ ದೇವಸ್ಥಾನ
ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಬಂಬೋರಾ ಎಂಬ ಪ್ರಸಿದ್ಧ ದೇವಾಲಯವಿದೆ, ಇದನ್ನು ಈಡಣ ಮಾತಾ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಯಾವಾಗಲೂ ಹಠಾತ್ತನೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ದೇವಿ ಸ್ವಂತ ಇಚ್ಛೆಯಿಂದ ಅಗ್ನಿ ಸ್ನಾನ ಮಾಡುತ್ತಾಳೆ ಎಂಬ ಪ್ರತೀತಿ ಇದೆ. ಆದ್ದರಿಂದ ದೇವಿಯ ಈ ಪವಾಡದ ಮುಂದೆ ಎಲ್ಲರೂ ತಲೆಬಾಗುತ್ತಾರೆ.
ಬೆಂಕಿ ಹೇಗೆ ಹೊತ್ತಿಕೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ: ಈ ದೇವಾಲಯದಲ್ಲಿ ಹಠಾತ್ತನೆ ಬೆಂಕಿ ಹೇಗೆ ಹೊತ್ತಿಕೊಳ್ಳುತ್ತದೆ ಎಂಬುದನ್ನು ಇಲ್ಲಿಯವರೆಗೆ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಬೆಂಕಿ ಯಾವಾಗ ಹೊತ್ತಿಕೊಳ್ಳುತ್ತದೆ, ಎಷ್ಟು ದಿನ ಉರಿಯುತ್ತದೆ ಮತ್ತು ಯಾವಾಗ ಆರುತ್ತದೆ. ಇದರ ಬಗ್ಗೆ ಯಾರಿಗೂ ತಿಳಿದಿಲ್ಲ. ನವರಾತ್ರಿ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಭಕ್ತರ ದಂಡು ಹರಿದು ಬರುತ್ತದೆ.
ದೇವಿಯ ಪ್ರತಿಮೆಗೆ ಯಾವುದೇ ಹಾನಿ ಆಗೋದಿಲ್ಲ: ಈ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ದೇವಿ ಮಾತೆಯ ಎಲ್ಲಾ ಬಟ್ಟೆಗಳು ಸುಟ್ಟುಹೋಗುತ್ತವೆ. ಆದರೆ ವಿಗ್ರಹ ಸುರಕ್ಷಿತವಾಗಿರುತ್ತದೆ. ಈ ಬೆಂಕಿ ಎಷ್ಟು ಭೀಕರವಾಗಿರುತ್ತದೆ ಎಂದರೆ ಅದರ ಜ್ವಾಲೆಗಳು 20 ರಿಂದ 25 ಅಡಿ ಎತ್ತರಕ್ಕೆ ಇರುತ್ತದೆ. ಆದರೆ ದೇವಿಯ ವಿಗ್ರಹ ಸುರಕ್ಷಿತವಾಗಿರುವುದು ಒಂದು ರಹಸ್ಯ.
ವರ್ಷದಲ್ಲಿ ಏಳೇ ದಿನ ತೆರೆಯುವ ಹಾಸನಾಂಬ
ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹಾಸನಂಬ ದೇವಿಯ ಪ್ರಸಿದ್ಧ ದೇವಾಲಯವಿದೆ. ಈ ದೇವಾಲಯವು ವರ್ಷದಲ್ಲಿ ಕೇವಲ 7 ದಿನಗಳ ಕಾಲ ದೀಪಾವಳಿಯ ಸಂದರ್ಭದಲ್ಲಿ ತೆರೆದಿರುತ್ತದೆ. ಉಳಿದ ದಿನಗಳಲ್ಲಿ ಈ ದೇವಾಲಯವು ಮುಚ್ಚಿರುತ್ತದೆ. ಈ 7 ದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಭಾರತದಲ್ಲಿ ಇದು ತನ್ನದೇ ಆದ ವಿಶಿಷ್ಟ ದೇವಾಲಯವಾಗಿದೆ.
ದೀಪ ಉರಿಯುತ್ತಲೇ ಇರುತ್ತದೆ: ಈ ದೇವಾಲಯವನ್ನು ಮುಚ್ಚಿದಾಗ ಇಲ್ಲಿ ಒಂದು ದೀಪದಲ್ಲಿ ಎಣ್ಣೆ ತುಂಬಿ ಉರಿಸಲಾಗುತ್ತದೆ. ಒಂದು ವರ್ಷದ ನಂತರ ದೇವಾಲಯದ ಬಾಗಿಲು ತೆರೆದಾಗ ಆ ದೀಪ ಉರಿಯುತ್ತಲೇ ಕಂಡುಬರುತ್ತದೆ, ಆದರೆ ಆ ದೀಪದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಯನ್ನು ಹಾಕಲಾಗುತ್ತದೆ. ಇಂದಿಗೂ ಈ ರಹಸ್ಯವನ್ನು ಯಾರೂ ಬಿಡಿಸಲು ಸಾಧ್ಯವಾಗಿಲ್ಲ.
ಹೂವುಗಳು ತಾಜಾವಾಗಿರುತ್ತವೆ: ಈ ದೇವಾಲಯಕ್ಕೆ ಸಂಬಂಧಿಸಿದ ಮತ್ತೊಂದು ವಿಶೇಷವೆಂದರೆ ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ಇಲ್ಲಿ ದೇವಿಗೆ ಅರ್ಪಿಸಲಾಗುವ ಹೂವುಗಳು, ಒಂದು ವರ್ಷದ ನಂತರ ಬಾಗಿಲು ತೆರೆದಾಗ ತಾಜಾವಾಗಿರುತ್ತವೆ. ಅಂದರೆ ಒಂದು ವರ್ಷದ ನಂತರವೂ ಆ ಹೂವುಗಳು ಒಣಗುವುದಿಲ್ಲ ಮತ್ತು ಅದರ ತಾಜಾತನ ಉಳಿದಿರುತ್ತದೆ.
ಇದನ್ನೂ ಓದಿ
ರಕ್ಷಾ ಬಂಧನದಿಂದ ಜನ್ಮಾಷ್ಟಮಿಯವರೆಗೆ: ಆಗಸ್ಟ್‌ನಲ್ಲಿವೆ ಈ 5 ಹಿಂದೂ ಹಬ್ಬಗಳು
ಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಮಹಿಳೆ: ಫೋಟೋ ವೈರಲ್
ಹಕ್ಕುತ್ಯಾಗ
ಈ ಲೇಖನದಲ್ಲಿ ನೀಡಿರುವ ಎಲ್ಲಾ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸಲು ನಾವು ಕೇವಲ ಒಂದು ಮಾಧ್ಯಮ. ಬಳಕೆದಾರರು ಈ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕೆಂದು ವಿನಂತಿಸಲಾಗಿದೆ.