ಕನ್ನಡ ಹೊರತಾಗಿ ಬೇರೆ ಭಾಷೆಯಲ್ಲಿ ಶ್ರುತಿ ನಟಿಸಿದ ಚಿತ್ರಗಳು: ಇಲ್ಲಿದೆ ಪಟ್ಟಿ!
films in other languages by actress Shruthi ಸ್ಯಾಂಡಲ್‌ವುಡ್ ನಟಿ ಶ್ರುತಿ ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 'ಶ್ರುತಿ' ಚಿತ್ರದಿಂದ ಖ್ಯಾತಿ ಪಡೆದ ಅವರು, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂನ ತಲಾ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿ ಹಾಗೂ ಕನ್ನಡ ಬಿಗ್‌ಬಾಸ್‌ನ ಏಕೈಕ ಮಹಿಳಾ ವಿಜೇತೆ ಶ್ರುತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1990ರಲ್ಲಿ ತೆರೆಕಂಡ 'ನಂಬಿದ್ರೆ ನಂಬಿ ಬಿಟ್ರೆ ಬಿಡಿ' ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆಗ ಅವರನ್ನು 'ಪ್ರಿಯದರ್ಶಿನಿ' ಎಂದು ಕರೆಯಲಾಗುತ್ತಿತ್ತು.
ಅದೇ ವರ್ಷ ಬಿಡುಗಡೆಯಾದ 'ಶ್ರುತಿ' ಹೆಸರಿನ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಚಿತ್ರದಲ್ಲಿನ ಅವರ ಪಾತ್ರದ ಹೆಸರೇ ಶ್ರುತಿ ಆಗಿತ್ತು. ಈ ಸಿನಿಮಾ ಸೂಪರ್ ಹಿಟ್ ಆದ ನಂತರ, ಅವರು ಚಿತ್ರರಂಗದಲ್ಲಿ 'ಶ್ರುತಿ' ಎಂದೇ ಖ್ಯಾತಿ ಪಡೆದರು.
ಸದ್ಯ, ನಟಿ ಶ್ರುತಿ ಅವರು ಹಿರಿತೆರೆ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದು, ತಮ್ಮ ನಟನಾ ಪಯಣವನ್ನು ಮುಂದುವರೆಸಿದ್ದಾರೆ. ಕನ್ನಡದಲ್ಲಿ ಜನಪ್ರಿಯ ನಟಿಯಾಗಿರುವ ಶ್ರುತಿ ಕನ್ನಡವಲ್ಲದೆ, ದಕ್ಷಿಣ ಭಾರತದ ಬೇರೆ ಭಾಷೆಯ 9 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಲಾ ಮೂರು ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದು ಅದರ ವಿವರ ಇಲ್ಲಿದೆ.
ದೇವರ್ ವೀಟ್ಟು ಪೊಣ್ಣು
1992ರಲ್ಲಿ ಶ್ರುತಿ ನಟಿಸಿದ ಮೊದಲ ತಮಿಳು ಸಿನಿಮಾ. ಸರೋಜಾ ಪಾತ್ರದಲ್ಲಿ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ಅವರ ಹೆಸರನ್ನು ಪ್ರಿಯದರ್ಶಿನಿ ಎಂದೇ ಹಾಕಲಾಗಿತ್ತು.
ಪೆಲ್ಲಾನಿಕೀ ಪ್ರೇಮಲೇಖಾ ಪ್ರಿಯುರಲಿಕೀ ಶುಭಲೇಖಾ
ರಾಜೇಂದ್ರ ಪ್ರಸಾದ್ ಅವರೊಂದಿಗೆ 1992ರಲ್ಲಿ ನಟಿಸಿದ್ದ ಸಿನಿಮಾ ಪೆಲ್ಲಾನಿಕೀ ಪ್ರೇಮಲೇಖಾ ಪ್ರಿಯುರಲಿಕೀ ಶುಭಲೇಖಾ. ಕಾಮಿಡಿ ಪ್ರಧಾನ ಸಿನಿಮಾದಲ್ಲಿ ಶ್ರುತಿ, ಕೀರ್ತಿ ಎನ್ನುವ ಪಾತ್ರದಲ್ಲಿ ನಟಿಸಿದ್ದರು.
ಪರುಗೋ ಪರುಗು
ಹಾಸ್ಯನಟ ಸುಧಾಕರ್ ನಿರ್ಮಾಣದ ಈ ತೆಲುಗು ಸಿನಿಮಾದಲ್ಲೂ ಶ್ರುತಿ ಹಾಗೂ ರಾಜೇಂದ್ರ ಪ್ರಸಾದ್ ಜೋಡಿಯಾಗಿ ನಟಿಸಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ವೈಫಲ್ಯ ಕಂಡಿತ್ತು.
ಕಲ್ಕಿ
ಕೆ.ಬಾಲಚಂದರ್ ನಿರ್ದೇಶನದ ಸಿನಿಮಾ 1996ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗಾಗಿ ಅತ್ಯುತ್ತಮ ನಟಿ ತಮಿಳುನಾಡು ರಾಜ್ಯ ಪ್ರಶಸ್ತಿಯನ್ನೂ ಶ್ರುತಿ ಜಯಿಸಿದ್ದರು. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್ ಕೂಡ ನಟಿಸಿದ್ದರು.
ಒರಲ್ ಮಾತ್ರಮ್
ಮಮ್ಮುಟ್ಟಿ, ತಿಲಕನ್ ನಟಿಸಿದ್ದ ಸಿನಿಮಾ 1997ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ದೇವಿಕಾ ಮೆನನ್ ಅನ್ನೋ ಪಾತ್ರದಲ್ಲಿ ಶ್ರುತಿ ನಟಿಸಿದ್ದರು.
ಕೊಟ್ಟಾರಂ ವೀಟ್ಟಿಲೆ ಅಪ್ಪುಟ್ಟನ್
ಮಲಯಾಳಂ ರೋಮಾಂಟಿಕ್ ಕಾಮಿಡಿ ಸಿನಿಮಾ. ಜಯರಾಮ್ ಜೊತೆಯಾಗಿ ಶ್ರುತಿ ನಟಿಸಿದ್ದರು. ಅಂಬಿಲಿ ಅನ್ನೋ ಪಾತ್ರದಲ್ಲಿ ಶ್ರುತಿ ನಟಿಸಿದ್ದರು. ಬಳಿಕ ತಮಿಳು ಹಾಗೂ ತೆಲುಗು ಭಾಷೆಗೂ ಇದು ರಿಮೇಕ್ ಆಯಿತು.
ಬೊಬ್ಬೊಲಿ ವಂಶಂ
1998ರಲ್ಲಿ ರಿಲೀಸ್ ಆದ ತೆಲುಗು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರುತಿ ನಟಿಸಿದ್ದರು. ಇದು ತೆಲುಗು ಭಾಷೆಯಲ್ಲಿ ಶ್ರುತಿ ನಟಿಸಿದ ಕೊನೆಯ ಸಿನಿಮಾ
ಅನ್ನನ್ ತಂಗಾಚಿ
ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ತವರಿನ ತೊಟ್ಟಿಲು ಸಿನಿಮಾದ ತಮಿಳು ರಿಮೇಕ್. ಕನ್ನಡದಲ್ಲಿ ಶ್ರುತಿ ಅಣ್ಣನಾಗಿ ನಟಿಸಿದ್ದ ಚರಣ್‌ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಗೂ ಚರಣ್ ರಾಜ್ ನಟಿಸಿದ್ದರು.
ಸಿ. ಐ. ಮಹಾದೇವನ್ 5 ಅಡಿ 4 ಇಂಚು
2004ರಲ್ಲಿ ಬಂದ ಮಲಯಾಳಂ ಸಿನಿಮಾ. ಡಾ. ಲಕ್ಷ್ಮೀ ಅನ್ನೋ ಪಾತ್ರದಲ್ಲಿ ಶ್ರುತಿ ನಟಿಸಿದ್ದರು. ಇದು ಬೇರೆ ಭಾಷೆಯಲ್ಲಿ ಶ್ರುತಿ ನಟಿಸಿದ್ದ ಕೊನೇ ಸಿನಿಮಾ ಆಗಿತ್ತು.