ಅತಿದೊಡ್ಡ ರಿಯಾಲಿಟಿ ಶೋಗೆ ಬೀಗ: ಬಿಗ್‌ಬಾಸ್ ಕಣ್ಣಿಗೆ ಮಣ್ಣೆರಚಿತಾ ಜಾಲಿವುಡ್ ಸ್ಟುಡಿಯೋ?
Bigg Boss Kannada set sealed: ನಿಯಮ ಉಲ್ಲಂಘನೆ ಆರೋಪದ ಮೇಲೆ, ಬಿಗ್‌ಬಾಸ್ ಸೆಟ್ ಇರುವ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ಜಿಲ್ಲಾಡಳಿತ ಬೀಗ ಹಾಕಿದೆ. ಮಾಲಿನ್ಯ ಮಂಡಳಿ ನೋಟಿಸ್ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಬಿಗ್‌ಬಾಸ್ ಸೆಟ್ ಹೊಂದಿರುವ ಜಾಲಿವುಡ್ ಸ್ಟುಡಿಯೋ
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೆಟ್ ಹೊಂದಿರುವ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬೀಗ ಹಾಕಿದೆ. ಅನುಮತಿ ಪಡೆಯದೇ ಮನರಂಜನಾ ಪಾರ್ಕ್ ನಿರ್ಮಾಣ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಜಾಲಿವುಡ್ ಸ್ಟುಡಿಯೋ ವಿರುದ್ಧ ಕೇಳಿ ಬಂದಿದೆ. ಮಾಲಿನ್ಯ ಮಂಡಳಿಯಿಂದ ನೋಟಿಸ್ ಹಿನ್ನೆಲೆ ಬೀಗ ಹಾಕಲಾಗಿದೆ.
ಎಲ್ಲರನ್ನು ಹೊರಗೆ ಕಳುಹಿಸಿ ಬೀಗ
ಬಿಡದಿ ತಹಶೀಲ್ದಾರ್ ತೇಜಸ್ವಿನಿ ಅವರೇ ಜಾಲಿವುಡ್ ಸ್ಟುಡಿಯೋ ಬಳಿ ಬಂದು ಸೀಜ್ ಮಾಡಿದ್ದಾರೆ. ಈ ವೇಳೆ ಜಾಲಿವುಡ್ ಸಿಬ್ಬಂದಿ ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಮೊದಲೇ ಸೂಚನೆ ನೀಡಿದಂತೆ ಸಂಜೆ 7 ಗಂಟೆಯ ನಂತರ ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಜಾಲಿವುಡ್ ಸ್ಟುಡಿಯೋ ವೀಕ್ಷಣೆಗೆ ಬಂದಿದ್ದ ಎಲ್ಲಾ ಪ್ರವಾಸಿಗರನ್ನು ಹೊರಗೆ ಕಳುಹಿಸಲಾಗಿದೆ.
ಜಾಲಿವುಡ್ ಸ್ಟುಡಿಯೋಗೆ ನೋಟಿಸ್
ಎರಡು ವರ್ಷಗಳಿಂದ ರಾಮನಗರ ಪರಿಸರ ಮಾಲಿನ್ಯ ಮಂಡಳಿ, ಸ್ಥಳೀಯ ಪಂಚಾಯ್ತಿ ನಿಯಮ ಉಲ್ಲಂಘನೆ ಸಂಬಂಧ ಜಾಲಿವುಡ್ ಸ್ಟುಡಿಯೋಗೆ ನೋಟಿಸ್ ನೀಡಿದ್ದವು. ಜಾಲಿವುಡ್ ಸ್ಟುಡಿಯೋ ವಾಟರ್ ಗೇಮ್ ಸೇರಿದಂತೆ ಹಲವು ಸಾಹಸಿ ಅಟಗಳನ್ನು ಒಳಗೊಂಡಿದೆ. ಒಂದು ದಿನಕ್ಕೆ ಜಾಲಿವುಡ್ ಎರಡೂವರೆ ಲಕ್ಷ ಲೀಟರ್ ನೀರು ಬಳಕೆ ಮಾಡುತ್ತದೆ. ಈ ನೀರನ್ನು ಸಂಸ್ಕರಿಸಿ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಪ್ರವಾಸಿಗರಿಂದ ಉಂಟಾಗುವ ತ್ಯಾಜ್ಯದ ವಿಲೇವಾರಿಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪಗಳು ಬಂದಿವೆ.
ಸ್ಪರ್ಧಿಗಳನ್ನು ಒಂದೆಡೆ ಸೇರಿ ಮಾಹಿತಿ
ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಸ್ಟುಡಿಯೋ ನಿರ್ಮಿಸಲಾಗಿದೆ. ಇದೀಗ ಎಲ್ಲಾ ಸ್ಪರ್ಧಿಗಳನ್ನು ಒಂದೆಡೆ ಸೇರಿಸಿ ಮಾಹಿತಿಯನ್ನು ನೀಡಲಾಗಿದೆ. ಇದೀಗ ಎಲ್ಲಾ ಸ್ಪರ್ಧಿಗಳನ್ನು ಕಾರ್ ಮೂಲಕ ರಹಸ್ಯ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಇಂದಿನ ಸಂಚಿಕೆ ಪ್ರಸಾರಕ್ಕೆ ಸಿದ್ಧಗೊಂಡಿದ್ದು, ಪ್ರಸಾರವಾಗಲಿದೆ. ನಾಳೆ ಸಂಚಿಕೆ ಪ್ರಸಾರದ ಕುರಿತಿ ಯಾವುದೇ ಸ್ಪಷ್ಟತೆ ಇಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದು 17 ಸ್ಪರ್ಧಿಗಳು ಹೋಗಿದ್ದೆಲ್ಲಿಗೆ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ದೃಶ್ಯಾವಳಿ!
ಮಾಹಿತಿ ಮುಚ್ಚಿಟ್ಟಿರುವ ಆರೋಪ
ಒಂದು ತಿಂಗಳ ಹಿಂದೆಯೇ ಮಾಲಿನ್ಯ ಮಂಡಳಿಯಿಂದ ನೋಟಿಸ್ ಬಂದಿರುವ ವಿಷಯವನ್ನು ಬಿಗ್‌ಬಾಸ್ ಆಡಳಿತ ಮಂಡಳಿಯಿಂದ ಮುಚ್ಚಿಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಮಾಲಿನ್ಯ ಮಂಡಳಿ ವಿರುದ್ಧ ಜಾಲಿವುಡ್ (ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್‌ಟೇನ್ಮೆಂಟ್ ಸಂಸ್ಥೆ) ಕೋರ್ಟ್ ಮೊರೆ ಹೋಗಿದ್ದು, ಗುರುವಾರ ಅರ್ಜಿಯ ವಿಚಾರಣೆ ನಡೆಯಲಿದೆ.
ಬಿಗ್‌ಬಾಸ್ ಸಿಬ್ಬಂದಿ ಚಿಂತನೆ
ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಎಲ್ಲಾ ಸಿಬ್ಬಂದಿಯನ್ನು ಬಗ್‌ಬಾಸ್ ಆಡಳಿತ ಮಂಡಳಿ ಹೊರಗೆ ಕರೆದುಕೊಂಡು ಬರಲಾಗಿದೆ. ಇದೀಗ ಎಲ್ಲಾ ಸ್ಪರ್ಧಿಗಳನ್ನು ಎಲ್ಲಿಗೆ ಶಿಫ್ಟ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸ್ಪರ್ಧಿಗಳನ್ನು ಹೋಟೆಲ್ ಅಥವಾ ರೆಸಾರ್ಟ್‌ಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ.