ಕರ್ನಾಟಕದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ. ಈ ಆಚರಣೆಯು 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ಭಾಗವಾಗಿದ್ದು, ಅತಿ ರುದ್ರ ಮಹಾ ಯಜ್ಞ, ದುರ್ಗಾ ಪೂಜೆ, ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಒಳಗೊಂಡಿದೆ
ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿರುವ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನ (ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್) ಉಚಿತ ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಉಪಕ್ರಮಗಳೊಂದಿಗೆ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿದೆ. ಕರ್ನಾಟಕದ ಮುದ್ದೇನಹಳ್ಳಿಯಲ್ಲಿರುವ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಹೆಗ್ಗುರುತಾಗಿ ಆಯೋಜಿಸುತ್ತಿದೆ.

ಈ ವರ್ಷದ ನವರಾತ್ರಿ ಆಚರಣೆಗಳು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿವೆ. ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಂಭ್ರಮದ ಸಂದರ್ಭದಲ್ಲಿಯೇ ನವರಾತ್ರಿ ಉತ್ಸವವೂ ನಡೆಯುತ್ತಿರುವುದು ವಿಶೇಷ. ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 100 ದಿನಗಳ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಪ್ರಮುಖ ಭಾಗವಾಗಿದೆ. ಇದು ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯು ಒಂದೆಡೆ ಕಲೆಯುವ ಅನನ್ಯ ಜಾಗತಿಕ ಸಮಾವೇಶ ಎನಿಸಿದೆ.

ಸತ್ಯ ಸಾಯಿ ಗ್ರಾಮದ ನವರಾತ್ರಿ ಸಂಭ್ರಮ ವಿಶೇಷ:
ನವರಾತ್ರಿ ಆಚರಣೆಯ ಮುಖ್ಯ ಭಾಗವಾಗಿ ‘ಅತಿ ರುದ್ರ ಮಹಾ ಯಜ್ಞ’ ನಡೆಯಲಿದೆ. ಶೃಂಗೇರಿ ಮಠದ 108 ಪುರೋಹಿತರು ಹನ್ನೊಂದು ದಿನಗಳ ಕಾಲ ಈ ಆಚರಣೆಯನ್ನು ನಡೆಸಿಕೊಡಲಿದ್ದಾರೆ. ಇದು ಜಗತ್ತಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸುತ್ತದೆ. ಇದರ ಜೊತೆಯಲ್ಲಿ ನವರಾತ್ರಿ ಹೋಮವು ಸ್ತ್ರೀರೂಪದ ದೈವಿಕ ಶಕ್ತಿಯನ್ನು ಒಂಬತ್ತು ರೂಪಗಳಲ್ಲಿ ಗೌರವಿಸುತ್ತದೆ. ಇದೇ ವೇಳೆ ಬಂಗಾಳದ ಸಾಂಪ್ರದಾಯಿಕ ದುರ್ಗಾ ಪೂಜೆಯನ್ನು ಸಹ ನಡೆಸಲಾಗುತ್ತದೆ. ಭಾರತದ ಪವಿತ್ರ ಸಂಪ್ರದಾಯಗಳ ವೈವಿಧ್ಯತೆಯನ್ನು ಇದು ಎತ್ತಿ ತೋರಿಸುತ್ತದೆ. ಸತ್ಯ ಸಾಯಿ ಗ್ರಾಮದ ನವರಾತ್ರಿ ಸಂಭ್ರಮದಲ್ಲಿ ವೇದ ಗುರುಕುಲಂನ ವಿದ್ಯಾರ್ಥಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಇದು ಮುಂದಿನ ಪೀಳಿಗೆಗೆಗೆ ಭಾರತದ ಪಾರಂಪರಿಕ ಬೌದ್ಧಿಕ ವಾರಸುದಾರಿಕೆಯ ಹರಿಯುವಿಕೆಯನ್ನು ಸಂಕೇತಿಸುತ್ತದೆ.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ:
ಪ್ರತಿ ಸಂಜೆಯೂ ಭಾರತದ ಕೆಲವು ಪ್ರಸಿದ್ಧ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಸಂಭ್ರಮಗಳು ಆಚರಣೆಗಳಿಗೆ ಜೀವ ತುಂಬಲಿವೆ. ಕರ್ನಾಟಕದ ಸಾಂಸ್ಕೃತಿಕ ಜಗತ್ತು ಗೌರವದಿಂದ ಗುರುತಿಸುವ ಅರುಣಾ ಸಾಯಿರಾಂ ಅವರಿಂದ ಭಕ್ತಿಗೀತೆಗಳು, ಸಿತಾರ್ ಮಾಂತ್ರಿಕ ಪಂಡಿತ್ ನೀಲಾದ್ರಿ ಕುಮಾರ್ ಅವರ ಭಾವಪೂರ್ಣ ಪ್ರಸ್ತುತಿ ಮತ್ತು ಖ್ಯಾತ ನೃತ್ಯಪಟುಗಳಾದ ತನುಶ್ರೀ ಶಂಕರ್, ಡಾ ಸೋನಾಲ್ ಮಾನ್ಸಿಂಗ್ ಮತ್ತು ಡಾ ಪದ್ಮಾ ಸುಬ್ರಹ್ಮಣ್ಯಂ ಮತ್ತಿತರರ ಕಲಾ ಪ್ರದರ್ಶನವು ಪ್ರೇಕ್ಷಕರ ಮನಸಿಗೆ ಮುದ ನೀಡಲಿದೆ. ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಈ ರೋಮಾಂಚಕ ಆಚರಣೆಗಳು ಭಕ್ತಿ ಮತ್ತು ಕಲಾತ್ಮಕತೆಯನ್ನು ಬೆಸೆಯಲಿದೆ.

ಉಮಾ ಮಹೇಶ್ವರ ದೇವಸ್ಥಾನ ಪ್ರಾಣ ಪ್ರತಿಷ್ಠಾಪನೆ:
ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನಾ ಪೂಜೆಯೂ ಐದು ದಿನಗಳ ಕಾಲ ನಡೆಯಲಿದೆ. ಶಿವ ಮತ್ತು ಶಕ್ತಿ ದೇವತೆಗೆ ಸಮರ್ಪಿತವಾದ ಉಮಾ ಮಹೇಶ್ವರ ದೇವಾಲಯವು ಪ್ರಾರ್ಥನೆ ಮತ್ತು ಭಕ್ತರ ಆತ್ಮಾವಲೋಕನಕ್ಕೆ ಹೊಸದೊಂದು ಪವಿತ್ರ ಸ್ಥಳವನ್ನು ಒದಗಿಸಲಿದೆ.

ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ
ಈ ಸಂದರ್ಭದಲ್ಲಿ ಮಾತನಾಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, "ನನ್ನ ಪೂಜ್ಯ ಗುರುಗಳಾದ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದೇವೆ. ನಿಸ್ವಾರ್ಥ ಸೇವೆಯಿಲ್ಲದೆ ಆಧ್ಯಾತ್ಮಿಕತೆಯು ಅಪೂರ್ಣ ಎಂದು ಈ ನವರಾತ್ರಿ ಆಚರಣೆಗಳು ನಮಗೆ ನೆನಪಿಸುತ್ತದೆ. ಪ್ರೀತಿ, ಏಕತೆ ಮತ್ತು ಸಹಾನುಭೂತಿಯಿಂದ ಒಗ್ಗೂಡಿದ ಉತ್ತಮ ಜಗತ್ತನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ನಾವು ವಿಶ್ವ ಸಾಂಸ್ಕೃತಿಕ ಮಹೋತ್ಸವ ಮತ್ತು ಈ ಪವಿತ್ರ ಆಚರಣೆಗಳ ಮೂಲಕ ಪುನರುಚ್ಚರಿಸುತ್ತೇವೆ. ಸಾಂಸ್ಕೃತಿಕ ವೈವಿಧ್ಯವನ್ನು ಮಾನವೀಯತೆಯ ಶಕ್ತಿಯಾಗಿ ಸಂಭ್ರಮಿಸಲಾಗುತ್ತದೆ” ಎಂದು ಹೇಳಿದರು.

‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ವು ಆಗಸ್ಟ್ 16 ರಂದು ಆರಂಭವಾಯಿತು. ಈ ಕಾರ್ಯಕ್ರಮಗಳು ನವೆಂಬರ್ 2025 ರಂದು ಮುಕ್ತಾಯಗೊಳ್ಳಲಿದೆ, ಜಾಗತಿಕ ಕಾರ್ಯಕ್ರಮವಾಗಿದ್ದು, ಪ್ರತಿ ದಿನವೂ ವಿಭಿನ್ನ ಸದಸ್ಯ ದೇಶಗಳ ಕಲಾವಿದರು ತಮ್ಮ ರಾಷ್ಟ್ರಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತಾರೆ. ಈ ರಾಷ್ಟ್ರಗಳ ಮಾನವತಾವಾದಿಗಳು ಜಗತ್ತಿನಾದ್ಯಂತ ಪ್ರೀತಿ, ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಾರೆ. ಈ ಉಪಕ್ರಮವು 100 ದೇಶಗಳು, ವಿವಿಧ ಧರ್ಮಗಳ ನಡುವಣ ಸಾಮರಸ್ಯ ಮತ್ತು ಮಾನವೀಯ ಶ್ರೇಷ್ಠತೆಯನ್ನು ಗುರುತಿಸಿ, ಸಂಭ್ರಮಿಸುವ ಪ್ರಯತ್ನವನ್ನು ಒಳಗೊಂಡಿರುತ್ತದೆ.

ಈ ಆಚರಣೆಯು ನವೆಂಬರ್ 2025 ರಲ್ಲಿ ವಿಶ್ವದ ಅತಿದೊಡ್ಡ ಉಚಿತ ಖಾಸಗಿ ಗ್ರಾಮೀಣ ಆಸ್ಪತ್ರೆಯ ಉದ್ಘಾಟನೆಯೊಂದಿಗೆ ಸಂಪನ್ನಗೊಳ್ಳಲಿದೆ. ‘ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ’ದ ಜಾಗತಿಕ ಮಾನವೀಯ ಸೇವೆಯ ಬದ್ಧತೆಯನ್ನು ಈ ಆಸ್ಪತ್ರೆಯು ಸಾರಿ ಹೇಳಲಿದೆ.
