ಜಗತ್ತಲ್ಲಿ ಅದೆಷ್ಟು ಗಣಪತಿಗಳಿವೆ. ಆದರೆ ಎಲ್ಲಕ್ಕಿಂತಲೂ ಅತ್ಯಂತ ಶಕ್ತಿಶಾಲಿಯಾಗಿರುವ, ಕೇಳಿದ್ದನ್ನೆಲ್ಲಾ ದಯಪಾಲಿಸೋ ಗಣಪ ಎಂದೇ ಫೇಮಸ್​ ಆಗಿರೋದು ಮೈಸೂರು ಅರಮನೆಯಲ್ಲಿರುವ ಆತ್ಮವಿಲಾಸ ಗಣಪ. ಇದರ ರೋಚಕ ಸ್ಟೋರಿ ಇಲ್ಲಿದೆ... 

ಇಂದು ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಗಣೇಶನಲ್ಲಿ ನಾನಾ ರೂಪಗಳಿವೆ. ತಮ್ಮ ತಮ್ಮ ಭಕ್ತಿ ಭಾವಕ್ಕೆ ತಕ್ಕಂತೆ, ತಮ್ಮ ಕಲ್ಪನೆಗೆ ತಕ್ಕಂತೆ ಗಣಪನಿಗೆ ರೂಪು ನೀಡಲಾಗುತ್ತದೆ. ವಿಘ್ನಗಳನ್ನು ನಿವಾರಿಸುವ ಅವನ ಕಾರ್ಯಕ್ಕೆ ಸಂಬಂಧಿಸಿದ್ದರೆ ವಿಘ್ನೇಶ್ವರ ಎಂದೂ, ಆನೆ ಮುಖವಾಗಿದ್ದಕ್ಕೆ ಗಜಾನನ ಎಂದೂ, ಒಂದೇ ದಂತ ಉಳ್ಳವನಾಗಿರುವುದಕ್ಕೆ "ಏಕದಂತ"ನೆಂದೂ, ಹೊಗೆ ಬಣ್ಣದವನಾದ್ದರಿಂದ ಧೂಮ್ರವರ್ಣನೆಂದು, ಬಾಲಕನಾದ ಗಣೇಶನಿಗೆ "ಬಾಲಗಣಪತಿ"ಯೆಂದೂ, ಕಲಿಯುಗದಲ್ಲಿ ಕುದುರೆಯ ಮೇಲೆ ಸವಾರಿ ಮಾಡುವವನು "ಧೂಮ್ರವರ್ಣ" ಅಥವಾ "ಶೂರ್ಪಕರ್ಣ" ರೂಪದಲ್ಲೂ ಕಾಣಿಸಿಕೊಳ್ಳುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಆದರೆ, ಇವೆಲ್ಲಕ್ಕಿಂತಲೂ ಭಿನ್ನವಾಗಿರುವ, ಅತ್ಯಂತ ಶಕ್ತಿಸ್ವರೂಪಿಯಾಗಿರುವ ಗಣಪತಿ ಇರುವುದು ಮೈಸೂರಿನ ಅರಮನೆಯಲ್ಲಿ ಇದೆ. ಅಂಬಾವಿಲಾಸ ಅರಮನೆಯಲ್ಲಿ ಯಾರಿಗೂ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಿಸದ ಈ ಗಣಪ 200 ವರ್ಷಕ್ಕೂ ಹೆಚ್ಚು ವರ್ಷ ಹಿಂದಿನ ಇತಿಹಾಸ ಹೊಂದಿದ್ದಾನೆ. ಅದೇ ಆತ್ಮವಿಲಾಸ ಗಣಪ. ಇದರ ಇತಿಹಾಸವೂ ರೋಚಕವಾಗಿದೆ. 1897ರಲ್ಲಿ ಅರಮನೆ ಬೆಂಕಿಗಾಹುತಿಯಾದಾಗ ಅನೇಕ ವಿಗ್ರಹಗಳು ಹಾನಿಗೊಳಗಾದರೂ, ಈ ಗಣಪತಿ ಮಾತ್ರ ಉಳಿದಿದ್ದಾನೆಂಬ ನಂಬಿಕೆ ಇದೆ. ನಂತರ 1912ರಲ್ಲಿ ಹೊಸ ಅರಮನೆ ನಿರ್ಮಾಣಗೊಂಡಾಗ, ಗಣಪತಿಯ ದೇಗುಲಕ್ಕೆ ವಿಶೇಷ ಗೋಪುರವನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗಿದೆ. ಇಂದಿಗೂ ಅದರ ಪೂಜೆ ನಡೆಯುತ್ತದೆ.

ಕೆಂಪು ಬಣ್ಣದಲ್ಲಿ ಸೂರ್ಯ ತೇಜಸ್ವಿ ಪ್ರತಿರೂಪ ಈ ಗಣಪನನ್ನು ನೋಡುವುದೇ ಅದೃಷ್ಟವೋ ಅದೃಷ್ಟ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇದನ್ನು ನೋಡಬೇಕು ಎಂದು ಹಂಬಲಿಸುತ್ತಾರೆ. ಈ ಆತ್ಮವಿಲಾಸ ಗಣಪತಿಯನ್ನು ನೋಡುವ ಅವಕಾಶ ಅರಮನೆ ಕುಟುಂಬದವರಿಗೆ ಮಾತ್ರವಿದೆ. ಆದರೆ, ಅದೇ ರೀತಿಯ ಗಣಪನನ್ನು ಮಾಡುವ ಕುಟುಂಬ ಕೂಡ ಇದೆ. ಒಂದು ವರ್ಷ ಮುಂಚಿತವಾಗಿ ಆರ್ಡರ್​ ಕೊಟ್ಟರೆ, ಅದೇ ರೀತಿಯ ಗಣಪತಿಯನ್ನು ಮಾಡಿಕೊಡಲಾಗುತ್ತದೆ. ಚುಟುಕು ದೇಹಭಂಗಿಯಲ್ಲಿರುವ ಕೆಂಪು ಬಣ್ಣದ ಈ ಗಣಪತಿ ವಿಗ್ರಹವನ್ನು ಚಿತ್ತಾರ ಸಮುದಾಯದ ಕಲಾವಿದರು ಮಣ್ಣಿನಿಂದ ರೂಪಿಸಿದ್ದು, ವಿಗ್ರಹದ ಹೊಟ್ಟೆಯೊಳಗೆ ಸುಮಾರು 450 ಶಾಲಿಗ್ರಾಮಗಳನ್ನು ಪ್ರತಿಷ್ಠಾಪಿಸಲಾಗಿದೆ. ಆತ್ಮವಿಲಾಸ ಗಣಪ ಮೂರ್ತಿಯು ಕೆಂಪು ಬಣ್ಣದ್ದಾಗಿದೆ .

ಗಣಪನ ಮೇಲೆ ಆಕರ್ಷಕವಾದ ಅರ್ಧ ಚಂದ್ರಾಕಾರದ ಹಸಿರು ಬಣ್ಣದ ಕಮಾನಿದೆ, ಗಣಪನ ಹಿಂಭಾಗದಲ್ಲಿ ಚಿನ್ನದ ಬಣ್ಣದ ಲೇಪನದಲ್ಲಿ ಸರ್ಪದಂತಹ ಆಕಾರದ ಚಿತ್ತಾರವಿದೆ. ಆತ್ಮ ವಿಲಾಸ ಗಣಪ ಚತುರ್ಭುಜನಾಗಿದ್ದಾನೆ. ಎಡಗೈನಲ್ಲಿ ಪಾಶ ಹಿಡಿದಿದ್ದಾನೆ. ಬಲಗೈನಲ್ಲಿ ಅಂಕುಶ ಹಿಡಿದಿದ್ದಾನೆ. ಮೂರನೇ ಕೈನಲ್ಲಿ ಮೋದಕ, ನಾಲ್ಕನೇ ಕೈನಲ್ಲಿ ಮುರಿದ ದಂತವನ್ನು ಹಿಡಿದಿದ್ದಾನೆ. ತಲೆಯ ಮೇಲೆ ಚಿನ್ನದ ಬಣ್ಣದ ಕಿರೀಟವಿದೆ. ಹಣೆಯ ತುಂಬಾ ಗಂಧದ ತಿಲಕವಿದೆ. ಅಗಲವಾದ ಕಿವಿಗಳು, ಎರಡು ದಂತದಲ್ಲಿ ಒಂದು ದಂತ ಭಗ್ನವಾಗಿರುವುದು. ಡೊಳ್ಳು ಹೊಟ್ಟೆ. ಹಳದಿ ಬಣ್ಣದ ಹೆಡೆ ಬಿಚ್ಚಿದ ಸರ್ಪ. ಕಾಲುಗಳಲ್ಲಿ ಆಕರ್ಷಕ ಗೆಜ್ಜೆಯಿದೆ. ಇದೇ ಕಾರಣಕ್ಕೆ ಆತ್ಮವಿಲಾಸ ಗಣಪತಿ ಭಕ್ತರಲ್ಲಿ ಮನೋಭಿಲಾಷೆಗಳನ್ನು ಈಡೇರಿಸುವ ದೇವರು ಎಂದೇ ಪ್ರಸಿದ್ಧವಾಗಿದೆ.