ಗಲ್ಲಾಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸುತ್ತಿರೋ ಸು ಫ್ರಂ ಸೋಗೆ ನಿಜವಾಗಿ ಖರ್ಚು ಆಗಿದ್ದೆಷ್ಟು? ಚಿತ್ರದ ಪಾರ್ಟ್​-2 ಬರುತ್ತಿದ್ಯಾ? ನಟ ರಾಜ್​ ಬಿ.ಶೆಟ್ಟಿ ಹೇಳಿದ್ದೇನು? 

ಕಡಿಮೆ ಬಜೆಟ್​ನಲ್ಲಿ ಸಿನಿಮಾ ಒಂದು ಹೇಗೆ ಚಿಂದಿ ಉಡಾಯಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತದ್ದು ಸು ಫ್ರಂ ಸೋ. ರಾಜ್​ ಬಿ.ಶೆಟ್ಟಿ ಅವರ ಈ ಚಿತ್ರ ನಿರೀಕ್ಷೆಗೂ ಮೀರಿ ಗಳಿಕೆ ಮಾಡಿದೆ. ಇತರ ಭಾಷೆಗಳಲ್ಲಿಯೂ ಚಿತ್ರಕ್ಕೆ ಸಕರ್​ ರೆಸ್ಪಾನ್ಸ್ ಸಿಗುತ್ತಿದೆ. ಭಾರಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಆಗಸ್ಟ್ 1 ರಂದು ಬಿಡುಗಡೆ ಮಾಡಲಾಗಿದೆ. ತೆಲುಗು ಆವೃತ್ತಿ ಆಗಸ್ಟ್ 8 ರಂದು ತೆರೆಗೆ ಬಂದಿದೆ. ಈ ಚಿತ್ರದ ಬಜೆಟ್​ ಮತ್ತು ಪಾರ್ಟ್​-2 ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಸಾಮಾನ್ಯವಾಗಿ ಒಂದು ಚಿತ್ರ ಭರ್ಜರಿ ಯಶಸ್ಸು ಕಂಡ ತಕ್ಷಣದ ಅದರ ಪಾರ್ಟ್​-2 ಮಾಡುವುದು ಮಾಮೂಲು. ಅದರಂತೆಯೇ ರಾಜ್​ ಶೆಟ್ಟಿ ಅವರೂ Su From So ಚಿತ್ರದ ಪಾರ್ಟ್​ -2 ಮಾಡುತ್ತಾರೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

ಈ ಎಲ್ಲಾ ಪ್ರಶ್ನೆಗಳಿಗೆ ರಾಜ್​ ಶೆಟ್ಟಿ ಅವರು, ದಿ ಹಾಲಿವುಡ್​ ರಿಪೋರ್ಟರ್​ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ. ಹಾಲಿವುಡ್​ ರೇಂಜ್​ನಲ್ಲಿಯೂ ಕನ್ನಡದ ಚಿತ್ರ ಸದ್ದು ಮಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಈ ಚಿತ್ರಕ್ಕೆ 1.5 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರಾಜ್​ ಅವರು, ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, ‘ಸಣ್ಣ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸಿದಾಗ ಇಂಥಹಾ ಸುದ್ದಿಗಳು ಹುಟ್ಟಿಕೊಳ್ಳುತ್ತವೆ, ಬಹಳ ಕಡಿಮೆ ಬಜೆಟ್​ನಲ್ಲಿ ಸಿನಿಮಾ ಮಾಡಲಾಗಿದೆ ಎಂದು ಹೇಳಿ ಸಿನಿಮಾದ ಯಶಸ್ಸನ್ನು ಇನ್ನಷ್ಟು ದೊಡ್ಡದು ಮಾಡುವ ಪ್ರಯತ್ನ ಮಾಡಲಾಗುತ್ತದೆ. ಆದರೆ ನಮ್ಮ ಸಿನಿಮಾದ ಬಜೆಟ್ 1.50 ಕೋಟಿ ಅಲ್ಲ. ನಾವು ಸುಮಾರು 30 ವೃತ್ತಿಪರ ರಂಗಭೂಮಿ ನಟರೊಂದಿಗೆ 50 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಮಾಡಿದ್ದೇವೆ. 1.5 ಕೋಟಿ ರೂಪಾಯಿ ಎನ್ನುವುದು ತಪ್ಪು. ಇಷ್ಟೊಂದು ನಟರೊಂದಿಗೆ ಚಿತ್ರೀಕರಣ ಮಾಡುವಾಗ ಇಷ್ಟು ಕಡಿಮೆ ಮೊತ್ತ ಸಾಕಾಗುವುದಿಲ್ಲ. ಸು ಫ್ರಮ್ ಸೋ ಚಿತ್ರದ ನಿರ್ಮಾಣ ಬಜೆಟ್ 4.5 ಕೋಟಿ ರೂಪಾಯಿ ಖರ್ಚು ಆಗಿದೆ. ಇದರ ಜೊತೆ ಸಿನಿಮಾದ ಪ್ರಚಾರ ಮತ್ತು ಇತರ ಖರ್ಚುಗಳಿಗಾಗಿ ಹೆಚ್ಚುವರಿಯಾಗಿ 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಒಟ್ಟು ವೆಚ್ಚ ಸುಮಾರು 5.5 ಕೋಟಿಯಿಂದ 6 ಕೋಟಿ ರೂಪಾಯಿಗಳಾಗಿವೆ. ಮೊದಲ 5 ದಿನಗಳಲ್ಲಿಯೇ ಈ ಬಜೆಟ್​ ಮೀರಿ ಹಣ ಸಂಪಾದನೆ ಆಗಿದೆ ಎಂದಿದ್ದಾರೆ.

ಪಾರ್ಟ್​-2 ಬರುತ್ತದಾ?

ಇನ್ನು ಚಿತ್ರದ ಪಾರ್ಟ್​-2 ಬರುತ್ತದೆಯೇ ಎನ್ನುವ ಪ್ರಶ್ನೆಗೆ ರಾಜ್​ ಅವರು, ನಾನು ನಟನೆಯನ್ನು ಇಷ್ಟಪಡುತ್ತೇನೆ ಮತ್ತು ಒಳ್ಳೆಯ ಚಿತ್ರಗಳಲ್ಲಿ ನಟಿಸುವುದನ್ನು ನಾನು ಆನಂದಿಸುತ್ತೇನೆ. ನಿರ್ಮಾಣವನ್ನೂ ಇಷ್ಟಪಡುತ್ತೇನೆ. ಆದರೆ ಈ ಚಿತ್ರದ ಎರಡನೇ ಭಾಗ ಮಾಡುವುದಿಲ್ಲ. ಕಥೆಯ ಇನ್ನೊಂದು ಆವೃತ್ತಿಯನ್ನು ಹೇಳಬೇಕೆಂದು ನನಗೆ ಅನ್ನಿಸುತ್ತಿಲ್ಲ ಎಂದಿದ್ದಾರೆ. ಅಲ್ಲಿಗೆ ಈ ಚಿತ್ರದ ಪಾರ್ಟ್​-2 ಬರುವುದಿಲ್ಲ ಎನ್ನುವುದನ್ನು ರಾಜ್​ ಅವರು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಲೆಕ್ಷನ್ ಬಗ್ಗೆ ಹೇಳುವುದಾದರೆ, 'ಸು ಫ್ರಮ್ ಸೋ' ಚಿತ್ರವು ಬಿಡುಗಡೆಯಾದ ಮೊದಲ ಹತ್ತು ದಿನಗಳಲ್ಲಿ ಕರ್ನಾಟಕದಲ್ಲಿ 34 ಕೋಟಿ ರೂ. ಗಳಿಸಿದೆ ಮತ್ತು ವಿದೇಶಗಳಲ್ಲಿ 5 ಕೋಟಿ ರೂ. ಗಳಿಸಿದೆ. ಈಗ 13 ನೇ ದಿನದಲ್ಲಿ, ಚಿತ್ರವು 60 ಕೋಟಿ ರೂಪಾಯಿಯತ್ತ ಗಳಿಕೆಯತ್ತ ಸಾಗುತ್ತಿದೆ ಎಂದು ರಾಜ್ ಅವರು ಇದಾಗಲೇ ಹೇಳಿದ್ದಾರೆ.

ಚಿತ್ರದ ಕಥೆ ಏನು?

ಇನ್ನು ಈ ಚಿತ್ರವನ್ನು ರಾಜ್ ಬಿ ಶೆಟ್ಟಿ (Raj B.Shetty) ಅವರ ಲೈಟರ್ ಬುದ್ಧ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಜೆಪಿ ತುಮಿನಾಡ್ ನಿರ್ದೇಶಿಸಿದ್ದಾರೆ. ಚಿತ್ರಕಥೆಯು ಸೋಮೇಶ್ವರದಿಂದ ಬಂದ ಸುಲೋಚನಾ ಮತ್ತು ಅಶೋಕನ ಸುತ್ತಲೂ ಸುತ್ತುತ್ತದೆ. ಅಶೋಕ ಎಂಬ ಯುವಕನಿಗೆ ಸುಲೋಚನಾ ಎಂಬ ದೆವ್ವ ಆವರಿಸಿದೆ ಎಂಬ ವದಂತಿ ಮಾರ್ಲುರು ಗ್ರಾಮವನ್ನು ತಲೆಕೆಳಗಾಗಿ ಮಾಡುವ ವಿಲಕ್ಷಣ, ಹಾಸ್ಯ ಮತ್ತು ಅಲೌಕಿಕ ಘಟನೆಗಳ ಸರಣಿಯನ್ನು ಬಿಚ್ಚಿಡುತ್ತದೆ. ನಿರ್ದೇಶಕ ಜೆಪಿ ತುಮಿನಾಡ್ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಮೈಮ್ ರಾಮದಾಸ್, ಪುಷ್ಪರಾಜ್ ಬೋಳಾರ್ ಮತ್ತು ಇನ್ನೂ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಚಂದ್ರಶೇಖರನ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಸಂಯೋಜನೆ ಮತ್ತು ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತವಿದೆ.

YouTube video player