ಈ ಕಾರಣಕ್ಕಾಗಿಯೇ ನಾನು ಈಗ ನನ್ನನ್ನು ಯಶ್ ಅಮ್ಮ ಅಂತ ನೋಡಬೇಡಿ, ಡ್ರೈವರ್ ಹೆಂಡ್ತಿ ಅಂತ ನೋಡಿ ಅಂತ ಹೇಳ್ತಾ ಇರೋದು. ನಮ್ಮ 'ಕೊತ್ತಲವಾಡಿ' ಸಿನಿಮಾವನ್ನು ನೀವು ಕನ್ನಡಕ್ಕೆ ಬಂದ ಡ್ರೈವರ್ ಹೆಂಡ್ತಿ ಪುಷ್ಪಾರ ಮೊದಲ ಸಿನಿಮಾ ಅಂತ ನೋಡಿ.. ನನ್ನ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ಮಾಡಿದ್ದು..
ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ (Puspa Arun Kumar) ಅವರು ಮತ್ತೆ ಮತ್ತೆ ತಾವು 'ಡ್ರೈವರ್ ಹೆಂಡ್ತಿ' ಅಂತ ಹೇಳ್ತಿದಾರೆ. ಅಂದ್ರೆ ಅವರು ಯಶ್ ಅಮ್ಮ ಅಲ್ಲ ಅಂತ ಹೇಳ್ತಿಲ್ಲ, ಬದಲಿಗೆ ಅವರ ಮಾತಿನ ಅರ್ಥ ಬೇರೆಯೇ ಇದೆ. ಬಹಳಷ್ಟು ಜನರು ಅವರಾಡುವ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇ ಹೆಚ್ಚು. ಕಾರಣ, ಎಲ್ಲರೂ ಅವರನ್ನು 'ಯಶ್ ಅಮ್ಮ' ಎಂದೇ ನೋಡುತ್ತಿರುವುದು. ಆದರೆ, ಅವರೀಗ ತುಂಬಾ ಸ್ಪಷ್ಟವಾಗಿ ಮಾತನ್ನಾಡುತ್ತಿದ್ದಾರೆ. 'ನನ್ನನ್ನು ಡ್ರೈವರ್ ಹೆಂಡ್ತಿ ಪುಷ್ಪಾ ಅರುಣ್ ಕುಮಾರ್ ಅಂತ ನೋಡಿ' ಎಂದಿದ್ದಾರೆ.
ಹೌದು, ಅವರು ಹೇಳುತ್ತಿರುವ ಮಾತಿಗೆ ಅವರು ಕೊಡುವ ಕಾರಣ ಕೇಳಿದರೆ ಮುಂದೆ ನೀವು ನಿಮ್ಮ ಜನ್ಮದಲ್ಲಿ ಮತ್ತೆ ಯಶ್ ಅಮ್ಮ ಅಂತ ಹೇಳೋದಿಲ್ಲ, ಬದಲಿಗೆ ಪುಷ್ಪಾ ಅರುಣ್ ಕುಮಾರ್ ಅಂತಾನೇ ಹೇಳ್ತೀರಿ. ಕಾರಣ, ಅವರಿಗೆ ತಮ್ಮ ಮಗ ಯಶ್ ಮೇಲೆ ತುಂಬಾ ಅಕ್ಕರೆ ಇದೆ, ಹೆಮ್ಮೆ ಇದೆ. ಜೀರೋದಿಂದ ಮಗ ಯಶ್ ಬೆಳೆದ ರೀತಿ ಬಗ್ಗೆ ತುಂಬಾ ಗೌರವವೂ ಇದೆ. ಅದನ್ನವರು ತುಂಬಾ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಆದರೆ, ಈಗ ಅವರೊಬ್ಬರು ಸಿನಿಮಾ ನಿರ್ಮಾಪಕಿ. ಅವರೀಗ ಜೀರೋದಿಂದ ಬೆಳೆಯುತ್ತಿರುವ ಕನ್ನಡ ಸಿನಿಮಾ ನಿರ್ಮಾಪಕಿಯಾಗಿ ಬೆಳೆಯುತ್ತಿದ್ದಾರೆ. ಈ ಕಾರಣಕ್ಕೆ ಅವರೀಗ 'ನನ್ನನ್ನು ಡ್ರೈವರ್ ಹೆಂಡ್ತಿ ಅಂತ ನೋಡಿ' ಅಂದಿದ್ದಾರೆ.
ಪುಷ್ಪಾ ಅರುಣ್ ಕುಮಾರ್ ಅವರು 'ನಾನು ಯಶ್ ಅಮ್ಮ ಹೌದು. ಅದೂ ನನಗೂ ಹೆಮ್ಮೆ. ಆದ್ರೆ ಅವ್ನು ಈಗ ಸಿನಿಮಾ ಹೀರೋ ಆಗಿ, ದೊಡ್ಡ ಸ್ಟಾರ್ ಆಗಿ ತುಂಬಾ ಬೆಳೆದಿದ್ದಾನೆ. ಅವನನ್ನು ನೋಡಿ ನಾನೂ ಕೂಡ ಏನಾದ್ರೂ ದೊಡ್ಡದನ್ನು ಸಾಧಿಸಬೇಕು ಎಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಅವನು ಸೊನ್ನೆಯಿಂದ ಶುರುಮಾಡಿ ಈಗ ಬೆಳೆದಿದ್ದಾನೆ. ಅವನೀಗ ಜಗತ್ತೇ ನೋಡುವ ಭಾರತದ ಸ್ಟಾರ್. ಆತನಿಂದ ಸ್ಪೂರ್ತಿ ಪಡೆದು ನಾನೀಗ ನಿರ್ಮಾಪಕಿಯಾಗಿ ಮೊದಲ ಹೆಜ್ಜೆಯಿಟ್ಟು ನನ್ನ ಸಿನಿಮಾ ಜರ್ನಿ ಶುರು ಮಾಡಿದ್ದೇನೆ. ನಾನು ಆತನ ಮಟ್ಟಕ್ಕೆ ಬೆಳೆಯಲು ಇನ್ನೂ ಸಾಕಷ್ಟು ಸಮಯ ಬೇಕು.
ಈ ಕಾರಣಕ್ಕಾಗಿಯೇ ನಾನು ಈಗ ನನ್ನನ್ನು ಯಶ್ ಅಮ್ಮ ಅಂತ ನೋಡಬೇಡಿ, ಡ್ರೈವರ್ ಹೆಂಡ್ತಿ ಅಂತ ನೋಡಿ ಅಂತ ಹೇಳ್ತಾ ಇರೋದು. ನಮ್ಮ 'ಕೊತ್ತಲವಾಡಿ' ಸಿನಿಮಾವನ್ನು ನೀವು ಕನ್ನಡಕ್ಕೆ ಬಂದ ಡ್ರೈವರ್ ಹೆಂಡ್ತಿ ಪುಷ್ಪಾರ ಮೊದಲ ಸಿನಿಮಾ ಅಂತ ನೋಡಿ.. ನನ್ನ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ಮಾಡಿದ್ದು, ಈಗಷ್ಟೇ ಬೆಳೆಯುತ್ತಿರುವ ನಿರ್ದೇಶಕರು, ಹೀರೋ, ನಟಿ ಹಾಗೂ ಕಲಾವಿದರನ್ನು ಇಟ್ಟುಕೊಂಡು ಮಾಡಿದ್ದು. ಯಶ್ ಸಿನಿಮಾ ಅನ್ನೋ ಭಾವನೆಯಲ್ಲಿ ನೋಡಬೇಡಿ. ಯಶ್ ಈಗ 2000 ಕೋಟಿ ಸಿನಿಮಾ ಮಾಡ್ತಿರೋ ಹೀರೋ. ಆದ್ರೆ ನಾನು ಹೊಸ ತಂಡವನ್ನು ಇಟ್ಟುಕೊಂಡು ಕಮ್ಮಿ ಬಜೆಟ್ ಸಿನಿಮಾ ಮಾಡ್ತಿರೋಳು..' ಎಂದಿದ್ದಾರೆ ಪುಷ್ಪಾ ಅರುಣ್ ಕುಮಾರ್.
ಜೊತೆಗೆ 'ಒಂದೇ ಮನೆಯಲ್ಲಿ ಎರಡು ನಿರ್ಮಾಣ ಸಂಸ್ಥೆ ಯಾಕೆ ಇರಬಾರ್ದು? ನನಗೆ ನನ್ನ ಮಗನೇ ಸಿನಿಮಾ ಮಾಡೋದಕ್ಕೆ ಹಣ ಕೊಟ್ಟಿರೋದು. ಅದರಲ್ಲೇನು ತಪ್ಪಿದೆ? ಅಮ್ಮ ಮಗನಿಗೆ ಹಣ ಕೊಡ್ಬಾರ್ದಾ..? ಅಮ್ಮನಿಂದ ಮಗ ಹೊರತೂ ಮಗನಿಂದ ಅಮ್ಮ ಅಲ್ಲ. ಆದರೆ, ಸಿನಿಮಾ ವಿಷಯಕ್ಕೆ ಬಂದರೆ ನನಗೆ ನನ್ನ ಮಗನೇ ಪ್ರೇರಣೆ, ಅವನಿಂದಲೇ ನಾನು ಕೆಲಸ ಕಲಿತಿದ್ದು, ಅವನೇ ನನಗೆ ಗುರು. ಈ ಕಾರಣಕ್ಕೇ ನಾನು ಈಗ ನನ್ನ ಸಿನಿಮಾವನ್ನು ಯಶ್ ಅಮ್ಮನದು ಅಂತ ನೋಡಬೇಡಿ, ಡ್ರೈವರ್ ಹೆಂಡ್ತಿ ಪುಷ್ಪಾ ಅರುಣ್ ಕುಮಾರ್ ಸಿನಿಮಾ ಅಂತ ನೋಡಿ ಅಂತ ಹೇಳ್ತಿರೋದು.
ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅರ್ಥ ಆಗುತ್ತೆ.. ಕರೆಕ್ಟಾಗಿ ಅರ್ಥ ಮಾಡಿಕೊಂಡು ನನಗೆ ಕಾಲ್ ಮಾಡಿ ಹಲವರು ಹೇಳಿದ್ದಾರೆ. ದಯವಿಟ್ಟು ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.. ನನ್ನ 'ಕೊತ್ತಲವಾಡಿ' ಸಿನಿಮಾವನ್ನು ಹೊಸಬರ ಸಿನಿಮಾ ಅಂತ ನೋಡಿ. ನಾನು ಒಂದೇ ಸಿನಿಮಾ ಮಾಡೋಕೆ ಬಂದಿರೊದು ಅಲ್ಲ, ಇನ್ನೂ ಬಹಳಷ್ಟು ಸಿನಿಮಾ ಮಾಡ್ತೀನಿ.. ಸಿನಿಮಾ ಪ್ರೇಕ್ಷಕರು ನನ್ನ ಸಿನಿಮಾವನ್ನೂ ನೋಡಿ, ಬೇರೆಯವರದೂ ನೋಡಿ' ಅಂತ ಹೇಳಿದ್ದಾರೆ ಪುಷ್ಪಾ ಅರುಣ್ ಕುಮಾರ್.
