ತಾಳಿ ಹಿಡಿದುಕೊಂಡವ ಒಬ್ಬ, ತಾಳಿ ಕಟ್ಟಿದವ ಮತ್ತೊಬ್ಬ... ಹೀಗೆ ಬ್ರಹ್ಮಗಂಟು ಸೀರಿಯಲ್​ ರೋಚಕ ತಿರುವಿನಲ್ಲಿ ಕೂಡಿದ್ದು ಮುಂದೇನಾಗತ್ತೆ ನೋಡಿ!

ಮದುವೆ ಮನೆಗಳಲ್ಲಿ ಕೊನೆಯ ಹಂತದಲ್ಲಿ ಭಾರಿ ಟ್ವಿಸ್ಟ್​ ನಡೆಯುವುದು ಸಿನಿಮಾ, ಸೀರಿಯಲ್​ಗಳಿಗಿಂತಲೂ ಹೆಚ್ಚಾಗಿ ರಿಯಲ್​ ಲೈಫ್​ನಲ್ಲಿಯೇ ನಡೆಯುತ್ತಿದೆ! ಇತ್ತೀಚಿನ ದಿನಗಳಲ್ಲಿ ಇಂಥ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ಮದುಮಗಳು ಈ ಮದುವೆ ಬೇಡ ಎನ್ನುವುದು, ಮದುಮಗ ಹಸೆಮಣೆಯಿಂದ ಎದ್ದು ಹೋಗುವುದು, ಮದುಮಗಳು ಮದುಮಗನನ್ನು ಬಿಟ್ಟು ಲವರ್​ನ ಮದ್ವೆಯಾಗುವುದು... ಅಬ್ಬಾ ರಿಯಲ್​ ಲೈಫ್​ನಲ್ಲಿ ನಡೆಯುತ್ತಿರುವುದು ಒಂದಾ... ಎರಡಾ... ಇವುಗಳ ಮುಂದೆ ಸೀರಿಯಲ್​ಗಳು ಡಬ್ಬಾ ಎನ್ನಿಸಿಬಿಡುವುದು ಉಂಟು. ಆದರೆ ಅಂಥದ್ದೇ ಒಂದು ರೋಚಕ ಟ್ವಿಸ್ಟ್​ ಸಿಕ್ಕಿರುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಬ್ರಹ್ಮಗಂಟು ಸೀರಿಯಲ್​ನಲ್ಲಿ.

ಅಷ್ಟಕ್ಕೂ, ಅತ್ತಿಗೆಯ ಮಾತು ಕೇಳಿ ಪತ್ನಿಯನ್ನೇ ದೂಷಿಸುವ, ಪತ್ನಿ ಕಂಡರೆ ಕಿರಿಕಿರಿ ಮಾಡುವ ಚಿರುಗೆ ಈಗ ಪತ್ನಿ ದೀಪಾಳ ಮೇಲೆ ಲವ್​ ಶುರುವಾಗಿದೆ. ದೀಪಾ ಮತ್ತು ಚಿರು ಯಾವುದೇ ಕಾರಣಕ್ಕೂ ಒಂದಾಗಬಾರದು ಎಂದು ಅತ್ತಿಗೆ ಸೌಂದರ್ಯ, ಚಿರುನಿಗೆ ಮತ್ತೊಂದು ಮದ್ವೆ ಮಾಡಲು ಮುಂದಾಗಿದ್ದಳು. ಆದರೆ, ಇದೇ ವೇಳೆ ಚಿರು ಮಾತ್ರ ದೀಪಾಳ ಲವ್​ನಲ್ಲಿ ಬಿದ್ದಿದ್ದಾನೆ. ಆದರೆ, ದೀಪಾಳಿಂದ ಆಣೆ ಮಾಡಿಸಿಕೊಂಡಿರೋ ಅತ್ತಿಗೆ ಸೌಂದರ್ಯ, ಅವಳನ್ನು ಮುಂದು ಮಾಡಿ ಚಿರು ಜೊತೆ ಸಂಜನಾಳ ಮದುವೆ ಮಾಡಿಸಲು ನೋಡಿದ್ದಾಳೆ. ಅತ್ತಿಗೆಯ ಮಾತನ್ನೂ ಕೇಳದೇ, ಚಿರು ಈ ಮದುವೆ ಸಾಧ್ಯವೇ ಇಲ್ಲಾ ಎಂದು ಎಷ್ಟು ಸಾಧ್ಯನೋ ಅಷ್ಟು ಇದಕ್ಕೆ ಅಡ್ಡಿಪಡಿಸಿದ್ದಾನೆ. ಆದರೆ ಆತನ ಮನವೊಲಿಸಲು ಸೌಂದರ್ಯ ಮಾಡಿದ ಪ್ರಯತ್ನ ಎಲ್ಲವೂ ಫೇಲ್​ ಆಗಿದೆ. ಲೈಫ್​ನಲ್ಲಿ ಇದೇ ಮೊದಲ ಬಾರಿಗೆ ಚಿರು ತನ್ನ ಅತ್ತಿಗೆಯ ಮಾತನ್ನು ಮೀರಿದ್ದ. ಕೊನೆಗೆ ದೀಪಾಳೇ ಮುಂದೆ ಬಂದು ಆಣೆ ಮಾಡಿಸಿಕೊಂಡು ಚಿರುನ ಸಂಜನಾ ಜೊತೆ ಮದುವೆಗೆ ಅಣಿಗೊಳಿಸಿಬಿಟ್ಟಿದ್ದಳು.

ಆದರೆ ಬ್ರಹ್ಮ ಬರೆದ ಗಂಟು ಎಂದರೆ ಸುಮ್ಮನೇನಾ? ಸಂಜನಾ ಅತ್ತ ದೀಪಾಳ ಅಣ್ಣ ನರಸಿಂಹನನ್ನು ಲವ್​ ಮಾಡುವ ಹಾಗೆ ಮಾಡಿ ಕಾಟ ಕೊಟ್ಟವಳು. ಅದಕ್ಕಾಗಿ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ನರಸಿಂಹ ಕಾಯುತ್ತಿದ್ದ. ಇತ್ತ ದೀಪಾಳ ಆಣೆಗೆ ಗಂಟು ಬಿದ್ದು ಚಿರು ಸಂಜನಾಳ ಕೊರಳಿಗೆ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆಯೇ ನರಸಿಂಹ ಬಂದು ತಾಳಿ ಕಟ್ಟುಬಿಟ್ಟಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗಿದೆ. ಒಟ್ಟಿನಲ್ಲಿ ಚಿರು ಮತ್ತು ದೀಪಾಳ ಬ್ರಹ್ಮಗಂಟು ತುಂಡಾಗದೇ ಗಟ್ಟಿಯಾಗಿಯೇ ಉಳಿದಿದೆ. ಸಂಜನಾಳ ಲೈಫ್​ನಲ್ಲಿ ಹೊಸ ತಿರುವು ಶುರುವಾಗಿದೆ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದವನನ್ನೇ ಮದುವೆಯಾಗುವ ಸ್ಥಿತಿ ಬಂದಿದೆ. ಮುಂದೇನಾಗುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಅಷ್ಟಕ್ಕೂ, ದೀಪಾಳ ಮೇಲೆ ಚಿರುಗೆ ಲವ್​ ಶುರುವಾಗಲೂ ಕಾರಣವಿದೆ. ಅದೇನೆಂದರೆ, ಯಾವುದೇ ದುರುದ್ದೇಶ ಇಲ್ಲದೆಯೇ ಸೌಂದರ್ಯಳಿಂದ ತೊಟ್ಟಿಲ ಪೂಜೆ ಮಾಡಿಸಲು ದೀಪಾ ಮುಂದಾಗಿದ್ದಳು. ಆದರೆ ಮಗು ಎಂದ್ರೆ ಆಗದ ಸೌಂದರ್ಯ ಅದನ್ನೇ ದೀಪಾಳ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದಳು. ಇದನ್ನು ನೋಡಿ ಚಿರು ದೀಪಾ ವಿರುದ್ಧ ತಿರುಗಿ ಬಿದ್ದಿದ್ದು ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾನೆ. ಇನ್ನು ನನ್ನ- ನಿಮ್ಮ ಸಂಬಂಧ ಮುಗಿಯಿತು, ಮತ್ತೆ ಮನೆಗೆ ಬರಬೇಡಿ ಎಂದು ಹೇಳಿದ್ದ. ಆದರೆ ದೀಪಾ, ಚಿರುಗೆ ನೀವೆಷ್ಟು ಸ್ವಾರ್ಥಿಯಾದ್ರಿ, ಅತ್ತಿಗೆ ನಿಮ್ಮನ್ನೇ ಮಗ ಎಂದು ತಿಳಿದು ಮತ್ತೊಂದು ಮಗು ಮಾಡಿಕೊಳ್ಳಲಿಲ್ಲ. ನೀವು ಕೂಡ ಅತ್ತಿಗೆಗೆ ಪ್ರೋತ್ಸಾಹ ಮಾಡಿದ್ರಿ. ಅವರಿಗೂ ಅಮ್ಮ ಆಗಬೇಕು, ಮಗು ಬೇಕು ಎನ್ನುವ ಆಸೆ ಇರತ್ತಲ್ವಾ ಎಂದಾಗ ಚಿರುಗೆ ಹೌದು ಎನ್ನಿಸಿದೆ. ಅಷ್ಟಕ್ಕೂ ಸೌಂದರ್ಯ ಮಗು ಮಾಡಿಕೊಳ್ಳದೇ ಇರಲು ಕಾರಣ ಎಲ್ಲಿ ತನ್ನ ಸೌಂದರ್ಯ ಹಾಳಾಗುತ್ತದೆಯೋ ಎನ್ನುವ ಕಾರಣಕ್ಕೆ. ಆದರೆ ಚಿರುನನ್ನೇ ತನ್ನ ಮಗು ಎಂದು ಅಂದುಕೊಂಡಿರುವುದಾಗಿ, ಅದಕ್ಕಾಗಿ ತಾನು ಮಕ್ಕಳನ್ನು ಮಾಡಿಕೊಳ್ಳುತ್ತಿಲ್ಲ ಎಂದು ಎಲ್ಲರನ್ನೂ ನಂಬಿಸಿ ಇಟ್ಟಿದ್ದಾಳೆ. ಯಾರಿಗೂ ಈ ಸತ್ಯ ಮಾತ್ರ ಗೊತ್ತಿಲ್ಲ. ಚಿರುಗೆ ತಾನು ಮಾಡ್ತಿರೋದು ತಪ್ಪು ಎನ್ನಿಸಿ ದೀಪಾಳ ಮೇಲೆ ಲವ್​ ಶುರುವಾಗಿದೆ.