ಎಡವಟ್ಟು ರಾಣಿ ಎಂದೇ ಫೇಮಸ್ಸಾಗಿರೋ ನಾನಿನ್ನ ಬಿಡಲಾರೆ ದುರ್ಗಾ ಪಾತ್ರಧಾರಿ ರಿಷಿಕಾ ಅವರು ಶೂಟಿಂಗ್ ಮುಗಿಸಿ ಕ್ಯಾಮೆರಾ ಎದುರೇ ಗೆಟಪ್ ಚೇಂಜ್ ಮಾಡಿ ಹೋಗಿದ್ದಾರೆ. ಆಗಿದ್ದೇನು ನೋಡಿ...
ಎಡವಟ್ಟು ಮಾಡಿದ್ರೂ ಎಲ್ಲರ ಹಿತ ಬಯಸೋ ದುರ್ಗಾಗೆ ಈಗ ಸಂಕಷ್ಟ ಎದುರಾಗಿದೆ. ತನ್ನದಲ್ಲದ ತಪ್ಪಿಗೆ ಬೇರೆಯವರ ಕುತಂತ್ರದಿಂದ ಶರತ್ ಕೈಯಲ್ಲಿ ಬೈಸಿಕೊಂಡು ಮನೆ ಬಿಟ್ಟಿದ್ದಾಳೆ ದುರ್ಗಾ. ಮುಂದೆನಾಗತ್ತೆ ಎನ್ನುವ ಕುತೂಹಲ ಸದ್ಯ ವೀಕ್ಷಕರಲ್ಲಿದೆ. ಅಂದಹಾಗೆ ಇದು ಜೀ ಕನ್ನಡ ನಾನಿನ್ನ ಬಿಡಲಾರೆ ಸೀರಿಯಲ್. ಇದರಲ್ಲಿ ಮುಗ್ಧ ಹಾಗೂ ಪೆದ್ದುತನದಿಂದ ಎಲ್ಲರ ಮನಸ್ಸನ್ನು ಗೆಲ್ತಿರೋ ದುರ್ಗಾಳ ರಿಯಲ್ ಹೆಸರು ರಿಷಿಕಾ. ಇದೀಗ ರಿಷಿಕಾ ಸೀರಿಯಲ್ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇದರಲ್ಲಿ ದುರ್ಗಾ ಗೆಟಪ್ನಿಂದ ನಟಿ ರಿಷಿಕಾ ಗೆಟಪ್ಗೆ ಬದಲಾಗಿದ್ದಾರೆ. ಈ ಸಮಯದಲ್ಲಿ ಎದುರಿಗೆ ಕ್ಯಾಮೆರಾ ಇಟ್ಟುಕೊಂಡು ಗೆಟಪ್ ಚೇಂಜ್ ಮಾಡುವುದನ್ನು ತೋರಿಸಿದ್ದಾರೆ. ಲಂಗ ದಾವಣಿಯಿಂದ ಕ್ಯಾಸುವಲ್ ಡ್ರೆಸ್ಗೆ ಗೆಟಪ್ ಬದಲಾಯಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತಮಾಷೆಗಾಗಿ ಎದುರಿಗೆ ಕ್ಯಾಮೆರಾ ಇರೋದೇ ಮರೆತು ಹೋಯ್ತಾ? ಕ್ಯಾಮೆರಾ ಎದುರಿಗೇ ಡ್ರೆಸ್ ಚೇಂಜ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಎಡವಟ್ಟು ದುರ್ಗಾ ಎಂದರೆ, ಸೀರಿಯಲ್ ಪ್ರೇಮಿಗಳಿಗೆ ಮೊದಲು ನೆನಪಾಗೋದು ನಾನಿನ್ನ ಬಿಡಲಾರೆಯ ದುರ್ಗಾ. ಹೌದು. ಈಕೆ ಮಾಡೊದೆಲ್ಲಾ ಎಡವಟ್ಟೇ. ಆದರೂ ಸೌಮ್ಯ ಸ್ವಭಾವ ಇನ್ನೂ ಚಿಕ್ಕಮಕ್ಕಳ ಮುಗ್ಧತೆ ಇರುವ ಯುವತಿ ದುರ್ಗಾ. ಸತ್ತಿರೋ ಅಂಬಿಕಾ ಜೊತೆ ಮಾತನಾಡುವ ಶಕ್ತಿ ಇರುವ ನಾಯಕಿ ಈಕೆ! ಅಂದಹಾಗೆ, ಈಕೆ ನಿಜ ಜೀವನದಲ್ಲಿ ಆತ್ಮಗಳ ಜೊತೆ ಮಾತನಾಡಲ್ಲ, ಬದಲಿಗೆ ನಾನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಸತ್ತುಹೋಗಿರೋ ಅಂಬಿಕಾ ಇವಳಿಗೆ ಕಾಣಿಸುತ್ತಿದ್ದಾಳೆ. ಆಕೆ ಸತ್ತು ಹೋಗಿದ್ದಾಳೆ ಎನ್ನುವುದು ದುರ್ಗಾಗೆ ಗೊತ್ತಿಲ್ಲ. ಅಷ್ಟಕ್ಕೂ ಅವಳು ಯಾರು ಎನ್ನೋದೇ ಗೊತ್ತಿಲ್ಲ. ಆದರೂ ಇಬ್ಬರೂ ಫ್ರೆಂಡ್ಸ್ ಆಗಿದ್ದಾರೆ. ಅಂಬಿಕಾಗೋ ದುರ್ಗಾ ಮೇಲೆ ಇನ್ನಿಲ್ಲದ ಪ್ರೀತಿ. ತನ್ನ ಗಂಡನನ್ನೇ ದುರ್ಗಾಗೆ ಮದ್ವೆ ಮಾಡಿಸೋ ಪ್ಲ್ಯಾನ್ ಈ ಅಂಬಿಕಾ ಎನ್ನೋ ಆತ್ಮದ್ದು. ಇದು ಕ್ಯೂಟ್ ಆತ್ಮ ಎಂದೇ ಫೇಮಸ್ಸು.
ಇನ್ನು ದುರ್ಗಾ ಪಾತ್ರಧಾರಿ ರಿಷಿಕಾ ಕುರಿತು ಹೇಳುವುದಾದರೆ, ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್ನಲ್ಲಿ ಸೈಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.
ಇನ್ನು ನಾನಿನ್ನ ಬಿಡಲಾರೆ ಸೀರಿಯಲ್ ಕುರಿತು ಹೇಳುವುದಾದರೆ, ಶರತ್ ಮತ್ತು ಅಂಬಿಕಾ ಮದುವೆಯಾಗಿ ಹಿತಾ ಎನ್ನುವ ಮಗಳು ಇರುತ್ತಾಳೆ. ಇಬ್ಬರಿಗೂ ಆಕೆಯ ಮೇಲೆ ಪಂಚಪ್ರಾಣ. ಆದರೆ ಓರ್ವ ಲೇಡಿ ವಿಲನ್ ಸೀರಿಯಲ್ನಲ್ಲಿ ಇರಲೇಬೇಕಲ್ವೆ? ಅವಳೇ ಮಾಯಾ. ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳ ಕೊಲೆ ಮಾಡ್ತಾಳೆ. ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ಅದೊಂದು ಸಂದರ್ಭದಲ್ಲಿ ಅಪ್ಪನ ಮೇಲೂ ಕೋಪಿಸಿಕೊಳ್ಳುವ ಸನ್ನಿವೇಶ ಎದುರಾಗಿ ಮಾತನ್ನೇ ಬಿಡುತ್ತಾಳೆ. ಇತ್ತ ಮಾಯಾ ಹಿತಾಳನ್ನೂ ಕೊಲ್ಲಲು ಸಂಚು ರೂಪಿಸ್ತಾಳೆ. ಆಗ ಸತ್ತು ಹೋದ ತಾಯಿ ಅಂಬಿಕಾ ರಕ್ಷಣೆ ಬರುತ್ತಾಳೆ.
