'ಕೊತ್ತಲವಾಡಿ' ಸಿನಿಮಾ ಕರ್ನಾಟಕದಾದ್ಯಂತ ಪ್ರದರ್ಶನ ಕಾಣುತ್ತಿದೆ. 'ಪಾಲಿಗೆ ಬಂದಿದ್ದು ಪಂಚಾಮೃತ' ಎಂಬಂತೆ, ಸಿಕ್ಕಷ್ಟು ಥಿಯೇಟರ್‌ಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾಗೆ ಈಗ ಪ್ರತಿಕ್ರಿಯೆ ಉತ್ತಮವಾಗಿದ್ದು, ಸಿನಿಮಾ ಪ್ರೇಕ್ಷಕರು ಈಗ ಥಿಯೇಟರ್ ಕಡೆ ಮುಖ ಮಾಡುತ್ತಿದ್ದಾರೆ.
ಯಶ್ ಅಮ್ಮ, ಕನ್ನಡಕ್ಕೆ ನಿರ್ಮಾಪಕಿಯಾಗಿ ಇದೀಗ ಕಾಲಿಟ್ಟಿರುವ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಇದೀಗ ಮತ್ತೊಂದು ಸಿನಿಮಾಗೆ ಸ್ಕೆಚ್ ಹಾಕಿದ್ದಾರೆ. ಅಂದರೆ, ಕೊತ್ತಲವಾಡಿ ಸಿನಿಮಾ ಸಾಕಷ್ಟು ಕಡೆ ಯಶಸ್ವೀ ಪ್ರದರ್ಶನ ಕಾಣುತ್ತಿರುವಂತೆ, ಇದೀಗ ಪುಷ್ಪಾ ಅವರು ಮತ್ತೊಂದು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹಾಗಿದ್ದರೆ ಪುಷ್ಪಾ ಅವರ ಮುಂಬರುವ ಸಿನಿಮಾಗೆ ಹೀರೋ ಯಾರು? ನಿರ್ದೇಶಕರು ಯಾರು? ಬಜೆಟ್ ಎಷ್ಟು? ಈ ಬಗ್ಗೆ ಪುಷ್ಪಾ ಅವರು ಹೇಳಿದ್ದೇನು?
ಹೌದು, ಯಶ್ ಅಮ್ಮ ಪುಷ್ಪಾ ಅವರು ನಿರ್ಮಿಸಿರುವ 'ಕೊತ್ತಲವಾಡಿ' ಸಿನಿಮಾ ಕರ್ನಾಟಕದಾದ್ಯಂತ ಪ್ರದರ್ಶನ ಕಾಣುತ್ತಿದೆ. 'ಪಾಲಿಗೆ ಬಂದಿದ್ದು ಪಂಚಾಮೃತ' ಎಂಬಂತೆ, ಸಿಕ್ಕಷ್ಟು ಥಿಯೇಟರ್‌ಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಪ್ರತಿಕ್ರಿಯೆ ಉತ್ತಮವಾಗಿದ್ದು, ಉಳಿದ ಕಡೆಗಳಲ್ಲಿ ಈಗ ಪ್ರೇಕ್ಷಕರು ಥಿಯೇಟರ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾ ಟೀಂ ಇದೀಗ ಪ್ರಚಾರಕಾರ್ಯವನ್ನು ಹೆಚ್ಚು ಮಾಡಿದ್ದು, ಮುಂದಿನ ದಿನಗಳಲ್ಲಿ ಸಿನಿಮಾಗೆ ಹೆಚ್ಚುಹೆಚ್ಚು ಪ್ರೇಕ್ಷಕರು ಬರುವ ನಿರೀಕ್ಷೆ ಚಿತ್ರತಂಡಕ್ಕಿದೆ. ಇದರಿಂದ ಪುಷ್ಪಾ ಅವರು ಖುಷಿಯಾಗಿದ್ದಾರೆ.
ಇನ್ನೊಂದು ಸಂಗತಿ ಎಂದರೆ, ಕೊತ್ತಲವಾಡಿ ಸಿನಿಮಾ ಮುಗಿಸಿರುವ ಪುಷ್ಪಾ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾತನ್ನಾಡಿದ್ದಾರೆ. ಈಗಾಗಲೇ ನಟ ಶರಣ್ ಕಾಲ್‌ಶೀಟ್ ತೆಗೆದುಕೊಂಡಿದ್ದು, ಅವರಿಗೆ ಒಂದು ಕಥೆ ರೆಡಿ ಇದೆ. ಈ ಸಿನಿಮಾದ ಬಜೆಟ್ ಹಾಗೂ ಮೇಕಿಂಗ್ ಬಗ್ಗೆ ಪುಷ್ಪಾ ಅವರು ಬಾಯಿಬಿಟ್ಟಿಲ್ಲವಾದರೂ ಕೊತ್ತಲವಾಡಿ ನಿರ್ದೇಶಕ ಶ್ರೀರಾಜ್ ಮುಂಬರುವ ಸಿನಿಮಾವನ್ನೂ ಕೂಡ ನಿರ್ದೇಶನ ಮಾಡಲಿದ್ದಾರೆ ಎಂದಿದ್ದಾರೆ. ಆ ಮೂಲಕ, ತಮ್ಮ ಮುಂದಿನ ಚಿತ್ರದ ಹೀರೋ ಶರಣ್ ಎಂಬುದನ್ನು ಪುಷ್ಪಾ ಅವರು ಜಗಜ್ಜಾಹೀರು ಮಾಡಿದ್ದಾರೆ.
ಇನ್ನು ಸಿನಿಮಾ ನಿರ್ಮಾಣದ ಬಗ್ಗೆಯೂ ಹೇಳಿರುವ ಪುಷ್ಪಾ ಅವರು 'ನಾನು ಯಶ್ ಅಮ್ಮ. ಒಮ್ಮೆ ಕಾಲಿಟ್ಟ ಬಳಿಕ ಮತ್ತೆ ಹಿಂದೆ ಹೋಗುವ ಜಾಯಮಾನವೇ ನಮ್ಮ ಕುಟುಂಬದಲ್ಲಿ ಇಲ್ಲ. ನಾನು ಸಿನಿಮಾ ನಿರ್ಮಾಣಕ್ಕೆ ಪ್ಲಾನ್ ಮಾಡಿ ಕಾಲಿಟ್ಟಿದ್ದು ಕೇವಲ ಒಂದು ಸಿನಿಮಾ ಮಾಡಿ ಹೋಗಲಿಕ್ಕೆ ಅಲ್ಲ.. ನಾನು ನಿರಂತರವಾಗಿ ಸಿನಿಮಾ ಮಾಡಲಿದ್ದೇನೆ. ಆದರೆ, ಸರಿಯಾಗಿ ಪ್ಲಾನ್ ಮಾಡಿ, ಕಥೆ ಓಕೆ ಮಾಡಿ ಮಾಡುತ್ತೇನೆ.
ಏಕೆಂದರೆ, ನನ್ನ ಉದ್ಧೇಶ ಸಿನಿಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಕೊಡುವುದು' ಎಂದಿದ್ದಾರೆ. ಜೊತೆಗೆ, 'ಯಶ್ ಸ್ಟಾರ್‌ಡನ್ ಮನದಲ್ಲಿ ಇಟ್ಟುಕೊಂಡು ನನ್ನ ಸಿನಿಮಾ ನೋಡಬೇಡಿ. ನನ್ನ ಸಿನಿಮಾವನ್ನು ಡ್ರೈವರ್ ಹೆಂಡ್ತಿ ಸಿನಿಮಾ, ಹೊಸಬರ ಸಿನಿಮಾ ಅಂತ ನೋಡಿ' ಎಂದಿದ್ದಾರೆ. ಯಶ್‌ಗೆ ಸಿನಿಮಾ ಮಾಡುವ ಬಜೆಟ್ ಹೊಂದಿಸುವಷ್ಟು ನಾನಿನ್ನೂ ಬೆಳೆದಿಲ್ಲ. ಮುಂದೆ ಆ ಕಾಲ ಬರಲಿ ಎಂಬ ಆಸೆ ನನಗೂ ಇದೆ. ನನಗೆ ಯಶ್ ಸಿನಿಮಾಗೆಂದು 2000 ಕೋಟಿ ಬಜೆಟ್ ಹೊಂದಿಸಲು ಸಾಧ್ಯವಾದರೆ, ಆಗ ಖಂಡಿತ ನನ್ನ ಮಗ ಯಶ್ ಸಿನಿಮಾವನ್ನೂ ಮಾಡುತ್ತೇನೆ' ಎಂದಿದ್ದಾರೆ.
