ನಟ ಕಿಶೋರ್ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನ್ನಾಡಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ 'ಕಾಂತಾರ' ಖ್ಯಾತಿಯ ನಟ ಕಿಶೋರ್ ಅವರು ಅದೇನು ಮಾತನ್ನಾಡಿದ್ದಾರೆ?
ಕನ್ನಡ ಮೂಲದ ಬಹುಭಾಷಾ ನಟ ಕಿಶೋರ್ (Kishore) ಅವರು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನ್ನಾಡಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿರುವ ಈ ವಿಡಿಯೋದಲ್ಲಿ 'ಕಾಂತಾರ' ಖ್ಯಾತಿಯ ನಟ ಕಿಶೋರ್ ಅವರು ಅದೇನು ಮಾತನ್ನಾಡಿದ್ದಾರೆ? ತಮ್ಮ ನಟನೆಯ 'ಅಟ್ಟಹಾಸ' ಸಿನಿಮಾ ಬಗ್ಗೆ, ಅದರಲ್ಲಿ ಒಂದು ಸೀನ್‌ಗೆ ಪ್ರೇಕ್ಷಕರು ಕೊಟ್ಟ ರಿಯಾಕ್ಷನ್ ಬಗ್ಗೆ ನಟ ಕಿಶೋರ್ ಮಾತನ್ನಾಡಿದ್ದಾರೆ.
ನಟ ಕಿಶೋರ್ 'ಅಟ್ಟಹಾಸ ಚಿತ್ರದಲ್ಲಿ ಶಕೀಲ್ ಅಹಮ್ಮದ್ ಹಾಗೂ ಹರಿಕೃಷ್ಣ ಅವರನ್ನು ಶೂಟ್ ಮಾಡೋ ಸೀನ್.. ಅದ್ರಲ್ಲಿ ನಾವು ಸಿನಿಮಾಗೋಸ್ಕರ ಆಕ್ಷನ್ ಅಂಡ್ ರಿಯಾಕ್ಷನ್ ಥರ ಮಾಡಿದ್ವಿ.. ವೀರಪ್ಪನ್ ಗ್ಯಾಂಗ್‌ನಲ್ಲಿ ಒಬ್ಬ ಸಾಯ್ತಾನೆ, ಆ ಕಾರಣಕ್ಕೆ ವೀರಪ್ಪನ್ ಗ್ಯಾಂಗ್ ಈ ಇಬ್ಬರು ಸೀನಿಯರ್ ಆಫೀಸರ್‌ಗಳನ್ನು ಸಾಯಿಸಿಬಿಡ್ತಾರೆ. ಅದು ಟೈಮ್‌ಲೈನಲ್ಲಿ ಹಾಗೆ ಇತ್ತು. ಜೊತೆಗೆ, ನಮ್ಗ ಆಮೇಲೆ ಲಿಮಿಟೆಡ್ ಟೈಮಲ್ಲಿ ಆ ಕಥೆ ಮುಗಿತಿತ್ತು. ಆದ್ರೆ.. ಆ ದೃಶ್ಯ ನೋಡಿ ಪ್ರೇಕ್ಷಕರು ವಿಸಿಲ್ ಹೊಡೆದ್ಬಿಟ್ರು..!
ನಮ್ಮ ಉದ್ದೇಶ ಅದು ಆಗಿರ್ಲಿಲ್ಲ. ಯಾಕಂದ್ರೆ, ಅವರಿಬ್ಬರೂ ನರರಾಕ್ಷಸ, ದಂತಚೋರ ವೀರಪ್ಪನ್ ಎದುರು ನಿಂತು ಹೋರಾಡಿದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು. ಅಂಥವರು ಕುಖ್ಯಾತ ವ್ಯಕ್ತಿಯೊಬ್ಬನಿಂದ ಪ್ರಾಣ ಕಳೆದುಕೊಂಡಾಗ ಪ್ರೇಕ್ಷಕರು 'ಕೇಕೆ' ಹಾಕೋದು ಸರಿಯಲ್ಲ, ಅದು ನಮ್ಮ ಉದ್ಧೇಶಕ್ಕೆ ವಿರುದ್ಧವಾಗಿತ್ತು. ಅಲ್ಲಿಗೆ ನಮ್ಮ ಸಿನಿಮಾ ಗಳಿಕೆಯಲ್ಲಿ ಗೆದ್ದರೂ ಕೂಡ, ಪ್ರೇಕ್ಷಕರು ಆ ದೃಶ್ಯಕ್ಕೆ ಕೊಟ್ಟ ಪ್ರತಿಕ್ರಿಯೆ ಮೂಲಕ ಸೋತಿತ್ತು. ಕೆಲವೊಮ್ಮೆ ಹೀಗೆ ಆಗುತ್ತೆ.. ಸಿನಿಮಾ ಕಥೆಯಲ್ಲಿ ನಮ್ಮ ಉದ್ಧೇಶ ಬೇರೆಯೇ ಇರುತ್ತೆ.. ಆದರೆ ಅದಕ್ಕೆ ಪ್ರೇಕ್ಷಕರ ಕಡೆಯಿಂದ ಬರುವ ರಿಯಾಕ್ಷನ್ ಆ ಸಿನಿಮಾ ಉದ್ದೇಶದ ದೃಷ್ಟಯಿಂದ ತುಂಬಾ ಮುಖ್ಯ ಎನ್ನಿಸುತ್ತವೆ.
ಪ್ರೇಕ್ಷಕರ ರಿಯಾಕ್ಷನ್ ಸಿನಿಮಾ ಮಾಡಿರುವ ಉದ್ದೇಶಕ್ಕೆ ವಿರುದ್ಧವಾಗಿ ಇರಬಾರದು. ಆಗ ಸಿನಿಮಾ ಸಮಾಜಕ್ಕೆ ಮಾರಕ ಎನ್ನಿಸಿಬಿಡುತ್ತದೆ' ಎಂದಿದ್ದಾರೆ ನಟ, ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ಪಾತ್ರ ಮಾಡಿದ್ದ ನಟ ಕಿಶೋರ್. ಇದೇ ರೀತಿ ಕಾಂತಾರ ಸಿನಿಮಾದಲ್ಲಿ ಕೂಡ ಆಗಿದೆ' ಎಂದು ಒಂದು ಉದಾಹರಣೆ ಕೊಡುವ ಮೂಲಕ ನಟ ಕಿಶೋರ್ ಅವರು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಹೇಳಿಕೆ ಇದೀದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
