“ಇದು ನಾನು ಹೀರೋ ಆಗಿ ನಟಿಸುತ್ತಿರುವ ಮೂರನೇ ಸಿನಿಮಾ. ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ.

ಒಂದು ಕಾಲದ ಸ್ಟಾರ್ ಹೀರೋ, ಸುರಸುಂದರಾಂಗ ನಟ ಶಶಿಕುಮಾರ್ (Shashikumar) ಅವರನ್ನು ಕನ್ನಡ ಸಿನಿರಸಿಕರು ಎಂದೂ ಮರೆಯೋ ಹಾಗಿಲ್ಲ. ಈಗ ಅವರ ಮಗ ಮತ್ತೊಂದು ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಆದರೆ ಈ ಮೊದಲು ಅವರು ಅಕ್ಷಿತ್ ಶಶಿಕುಮಾರ್ ಆಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಈಗಾಗಲೇ ಎರಡು ಸಿನಿಮಾ ಮಾಡಿದವರು ಶಶಕುಮಾರ್ ಮಗ. ಆದರೆ ಮೂರನೆಯ ಸಿನಿಮಾ 'ರಾಶಿ' ಮಾಡುವ ಸಮಯದಲ್ಲಿ ಅಕ್ಷಿತ್ ತಮ್ಮ ಹೆಸರನ್ನು 'ಆದಿತ್ಯ ಶಶಿಕುಮಾರ್' (Aditya Shashikumar) ಎಂದು ಬದಲಾಯಿಸಿಕೊಂಡಿದ್ದಾರೆ.

ಇದೀಗ ನಟ ಆದಿತ್ಯ ಶಶಿಕುಮಾರ್ ಅವರದೊಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ತಂದೆ ಶಶಿಕುಮಾರ್ ಅವರೊಂದಿಗೆ ಡಾನ್ಸ್ ಮಾಡುತ್ತಿರುವ ಮಗ, ನಟ ಆದಿತ್ಯ ಅವರ ವಿಡಿಯೋ ಇದಾಗಿದ್ದು, ಇಬ್ಬರೂ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು 'ರಾಶಿ' ನಟ ಆದಿತ್ಯ ತಮ್ಮ ಇನ್‌ಸ್ಟಾಗ್ರಾಂ ಖಾತಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಅದರೊಂದಿಗೆ ಚೆಂದದ ಬರಹವನ್ನೂ ಇಟ್ಟಿದ್ದಾರೆ.

'ನಾನು ನನ್ನ ಅಪ್ಪನೊಂದಿಗೆ ನನ್ನದೇ ಸ್ಟೈಲಿನಲ್ಲಿ ಡಾನ್ಸ್ ಮಾಡುತ್ತಿರುವೆ.. ಆದರೆ, ಈ ವಯಸ್ಸಿನಲ್ಲೂ ಅವರು ನನ್ನ ಎನರ್ಜಿಯನ್ನೂ ಮೀರಿಸಿ ನನ್ನನ್ನೇ ಮೂಲೆಗುಂಪು ಮಾಡುವಷ್ಟರ ಮಟ್ಟಿಗೆ ಚೆನ್ನಾಗಿ ಸ್ಟೆಪ್ ಹಾಕುತ್ತಿದ್ದಾರೆ. ಈ ವಿಡಿಯೋ ಮಾಡಲು ಕಾರಣರಾದ ಭೂಷಣ್ ಮಾಸ್ಟರ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಬರೆದುಕೊಂಡಿದ್ದಾರೆ. (Dancing with Dad on my own track… and he still outshines me 😅 Energy levels at this age 🔥 Forever grateful to @bhushanmaster_official for making this happen)

ಇನ್ನು, ಮಗ ಆದಿತ್ಯ ನಟನೆಯ 'ರಾಶಿ' ಚಿತ್ರದ ಬಿಡುಗಡೆಯಾಗಿರುವ 'ಸುದ್ದಿ ಇಲ್ಲದೆ ಮೊದಲ ಪ್ರೀತಿ' Song ನೋಡಿ ಅಪ್ಪ ಶಶಿಕುಮಾರ್ ಅವರು ಮೆಚ್ಚಿದ್ದಾರೆ. ಅಂದಹಾಗೆ ಈ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಮುಹೂರ್ತ ಆಚರಿಸಿಕೊಂಡು ಶೂಟಿಂಗ್‌ ಶುರುಮಾಡಿಕೊಂಡಿತ್ತು.

ನಟ ಶಶಿಕುಮಾರ್ ಪುತ್ರ ಆದಿತ್ಯ ಅಭಿನಯದ ‘ರಾಶಿ’ ಸಿನಿಮಾ 'ಧುವನ್ ಫಿಲಂಸ್' ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ವಿಜಯ್ ಪಾಳೇಗಾರ್ ನಿರ್ದೇಶಿಸುತ್ತಿರುವ ಈ ಸುಂದರ ಪ್ರೇಮ ಕಥಾನಕಕ್ಕೆ ‘ರಾಶಿ’ ಎಂದು ಹೆಸರಿಡಲಾಗಿದೆ. ಆದಿತ್ಯ ಶಶಿಕುಮಾರ್ ಅವರ ಹುಟ್ಟುಹಬ್ಬದ ದಿನವೇ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ನಾಯಕನಿಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿದೆ.

ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ ಎಸ್ ಚಂದ್ರಶೇಖರ್, ನಟ ಶಶಿಕುಮಾರ್, ಬೆಂಗಳೂರು ಪೊಲೀಸ್ ಉಪ ಆಯುಕ್ತರಾದ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್ ಚಿದಂಬರ್ ಸೇರಿದಂತೆ ಮುಂತಾದ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಹೆಸರು ಬದಲಾಯಿಸಿಕೊಂಡ ಅಕ್ಷಿತ್!

ಆದಿತ್ಯ ಶಶಿಕುಮಾರ್ ಮಾತನಾಡಿ, “ಇದು ನಾನು ಹೀರೋ ಆಗಿ ನಟಿಸುತ್ತಿರುವ ಮೂರನೇ ಸಿನಿಮಾ. ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು ವಿನಂತಿಸುತ್ತೇನೆ” ಎಂದರು.

ವಿಜಯ್ ಪಾಳೇಗಾರ್ ಏನಂದ್ರು?

ನಿರ್ದೇಶಕ ವಿಜಯ್ ಪಾಳೇಗಾರ್ ಮಾತನಾಡಿ, “ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖಿಲೇಶ್ ಅವರು ನನ್ನನ್ನು ಕರೆದು ಈ ಚಿತ್ರವನ್ನು ನಿರ್ದೇಶಿಸಬೇಕೆಂದರು. ಅಖಿಲೇಶ್ ಅವರೆ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನವನ್ನೂ ಮಾಡುತ್ತಿದ್ದೇನೆ. ‘ಟ್ರಿಗರ್’ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಇನ್ನು ಈ ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ‌, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ” ಎಂದು ಹೇಳಿದ್ದಾರೆ.

ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ?

ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ಮಾಡಿಕೊಂಡಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಸಮೀಕ್ಕ್ಷಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರ ನಟನೆಯ 'ರಾನಿ' ಸಿನಿಮಾ ರಿಲೀಸ್ ಆಗಿದೆ. ಸಮೀಕ್ಷಾ ಕೆಲವು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಮಿಕ್ಕಂತೆ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಮುಖ್ಯ ಪಾತ್ರ ಪೋಷಣೆ ಮಾಡುತ್ತಿದ್ದಾರೆ. ಈ ಚಿತ್ರದ ನಿರ್ಮಾಪಕ ಅಖಿಲೇಶ್.

View post on Instagram