ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರು ಸಂದರ್ಶನವೊಂದರಲ್ಲಿ ಸಿನಿಮಾ ಮತ್ತು ನಟಿಯರ ಬಗ್ಗೆ ನೆಗೆಟಿವ್ ಕಮೆಂಟ್‌ಗಳನ್ನು ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ತಾಯಿ ಪುಷ್ಪಾ (Pushpa Arunkumar) ಅವರು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮತ್ತು ನಟಿಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡೋರ ವಿರುದ್ಧ ಪುಷ್ಪಾ ಅರುಣ್‌ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ನನ್ನ ಮೊಮ್ಮಕ್ಕಳು ಮತ್ತು ಸೊಸೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ ಅಂತ ವಿಷಯ ನನಗೆ ಗೊತ್ತಿರಲಿಲ್ಲ. ರಮ್ಯಾ (Actress Ramya) ಅವರು ಹೇಳಿದ ಮೇಲೆಯೇ ನಮಗೆ ಗೊತ್ತಾಯ್ತು. ಗೊತ್ತಿದ್ರೆ ಆವತ್ತೇ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದೆ ಎಂದು ಪುಷ್ಪಾ ಹೇಳಿದರು.

ನಾನು ಮತ್ತು ನಮ್ಮ ಯಜಮಾನ್ರು ಇರೋವರೆಗೂ ನಮ್ಮ ಮೊಮ್ಮಕ್ಕಳನ್ನ ಯಾರಿಂದಲೂ ಟಚ್ ಮಾಡೋಕೆ ಸಾಧ್ಯವಿಲ್ಲ. ಮಗ ಮತ್ತು ಸೊಸೆ ಇಬ್ಬರು ವಿದ್ಯಾವಂತರಾಗಿದ್ದು, ಮಕ್ಕಳನ್ನು ತುಂಬಾಗಿ ಚೆನ್ನಾಗಿ ಬೆಳೆಸುತ್ತಿದ್ದಾರೆ. ಅವರಿಬ್ಬರೂ ಗ್ರೇಟ್ ಎಂದು ಯಶ್ ಮತ್ತು ರಾಧಿಕಾ ಅವರನ್ನು ಪುಷ್ಪಾ ಮೆಚ್ಚುಗೆ ಸೂಚಿಸಿದರು. ಈ ರೀತಿಯ ಕಮೆಂಟ್‌ಗಳು ಬರದಿದ್ದರೆ ನಾವು ರಮ್ಯಾ ವಿಷಯ, ನಮ್ಮನೆ ವಿಷಯ ರಮ್ಯಾ ಮಾತನಾಡುತ್ತಿರಲಿಲ್ಲ. ನಮಗೂ ರಮ್ಯಾಗೂ ಏನು ಸಂಬಂಧವಿಲ್ಲ. ಒಬ್ಬ ಮಹಿಳೆಯಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರಮ್ಯಾ ನಿರ್ಧಾರವನ್ನು ಪುಷ್ಪಾ ಸ್ವಾಗತಿಸಿದರು.

ನೆಗೆಟಿವ್ ಕಮೆಂಟ್ ಹಾಕೋರ ಚಳಿ ಬಿಡಿಸಿದ ಯಶ್ ತಾಯಿ

ಸಂದರ್ಶನದಲ್ಲಿ ನಿರೂಪಕಿ, ಕಲಾವಿದರು ಮತ್ತು ಸಿನಿಮಾಗಳಿಗೆ ಬರುವ ನೆಗೆಟಿವ್ ಕಮೆಂಟ್ ಕುರಿತು ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆ ಉತ್ತರಿಸುವ ಸಂದರ್ಭದಲ್ಲಿ ಪುಷ್ಪಾ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಒಬ್ಬ ಮಹಿಳೆಯಾಗಿ ರಮ್ಯಾ ಎಲ್ಲರ ಪರವಾಗಿ ನಿಂತುಕೊಂಡಿದ್ದಾರೆ. ಸಿನಿಮಾ ಮತ್ತು ಕಲಾವಿದರ ಬಗ್ಗೆ ತುಂಬಾನೇ ನೆಗೆಟಿವ್ ಆಗಿ ಬರೀತಾರೆ. ಇಂತಹ ಕಮೆಂಟ್ ಮಾಡೋರು ಮೊದಲು ನಿಮ್ಮ ಮನೆಯಲ್ಲಿರೋ ತಂದೆ-ತಾಯಿಯನ್ನು ಚೆನ್ನಾಗಿ ನೋಡ್ಕೊಳ್ಳಿ. ನಿಮ್ಮ ಅಕ್ಕ-ತಂಗಿಯರಿಗೆ ಮದುವೆ ಮಾಡಿ. ನಿಮ್ಮ ಮನೆ ತೂತು ಮುಚ್ಕೊಂಡು, ಬೇರೆಯವರ ಬಗ್ಗೆ ಮಾತನಾಡಿ. ನಾವು ಚೆನ್ನಾಗಿಯೇ ಜೀವನ ನಡೆಸುತ್ತಿದ್ದೇವೆ. ನಾವು ಹೇಗಿರಬೇಕು ಅನ್ನೋದನ್ನು ನಿಮ್ಮಿಂದ ಕಲಿಯುವ ಅಗತ್ಯವಿಲ್ಲ ಎಂದು ನೆಗೆಟಿವ್ ಕಮೆಂಟ್ ಹಾಕೋರಿಗೆ ಪುಷ್ಪಾ ಅವರು ಚಳಿ ಬಿಡಿಸಿದರು.

ಪೋಷಕರ ಮನಸ್ಸಿಗೆ ನೋವುಂಟು ಮಾಡಬೇಡಿ

ಒಂದು ಸಿನಿಮಾ ಅಂದ್ರೆ ಸಾವಿರಾರು ಜನರು ಅಲ್ಲಿ ಕೆಲಸ ಮಾಡಿರುತ್ತಾರೆ. ಸಿನಿಮಾ ನೋಡದೇ ನೆಗೆಟಿವ್ ಕಮೆಂಟ್ ಮಾಡುತ್ತಾರೆ. ಒಂದು ಸಿನಿಮಾ ಕೆಟ್ಟು ಹೋದ್ರೆ ಸಾವಿರಾರು ಜನರಿಗೆ ಸಿಗುವ ಕೆಲಸ ತಪ್ಪಲಿದೆ. ಇವರಲ್ಲಿ ನಿಮ್ಮ ಅಣ್ಣ-ತಮ್ಮ, ಸಂಬಂಧಿಕರು ಸಹ ಕೆಲಸ ಮಾಡುತ್ತಿರುತ್ತಾರೆ. ಚೆನ್ನಾಗಿರೋರು ಯಾರೂ ಈ ರೀತಿಯ ಕೆಲಸವನ್ನು ಮಾಡಲ್ಲ. ನಿಮ್ಮಂತವರಿಂದ ತಂದೆ-ತಾಯಿ ನೋವು ಅನುಭವಿಸುತ್ತಾರೆ. ಯಾವುದೇ ಪೋಷಕರು ಮಕ್ಕಳಿಗೆ ಕೆಟ್ಟದನ್ನು ಮಾಡು ಎಂದು ಕಲಿಸಲ್ಲ. ಮಗ ಹೊರಗೆ ಏನೋ ಕೆಲಸ ಮಾಡುತ್ತಿರುತ್ತಾನೆ ಅಂತ ನಂಬಿರುತ್ತಾರೆ. ನೀವು ಈ ರೀತಿಯಲ್ಲಿ ಮಾಡಿ ಪೋಷಕರ ಮನಸ್ಸಿಗೆ ನೋವುಂಟು ಮಾಡಬೇಡಿ ಎಂದು ಪುಷ್ಪಾ ಅವರು ತಿಳಿ ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್​ ಅಮ್ಮ ಪ್ರತಿಕ್ರಿಯೆ…

ನಮ್ಮ ಪ್ರಚಾರ ನೋಡಿ ಭಯ ಇತ್ತು ಅವರಿಗೆ, ಸಿನಿಮಾ ಚೆನ್ನಾಗಿ ಓಡತ್ತೆ ಎಂದು. ಅದೇ ಕಾರಣಕ್ಕೆ ನಮ್ಮ ಸಿನಿಮಾ ಬಗ್ಗೆ ಮೊದಲೇ ಸುಳ್ಳು ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ. ಇದು ನನಗೆ ಮೊದಲು ಗೊತ್ತೇ ಆಗಲಿಲ್ಲ. ಅದು ಈಗ ಗೊತ್ತಾಯ್ತು ನನಗೆ. ಏನು ಬೇಕೋ ಅದನ್ನು ಮಾಡಿದ್ದೇನೆ. ಸುಳ್ಳು ಸುದ್ದಿ ಹರಡಿಸಿದ್ದನ್ನೆಲ್ಲಾ ತೆಗೆಸಿದ್ದೇನೆ ಎಂದು ತಿಳಿಸಿದರು.