ಹೋಂವರ್ಕ್ ಮಾಡದ ಬಾಲಕನೊಬ್ಬ ಶಿಕ್ಷಕರ ಎದುರು ದೆವ್ವ ಬಂದಂತೆ ನಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲೆಲ್ಲಾ ಮನೆಯಲ್ಲಿ ಮಾಡಲು ಕೊಟ್ಟ ಹೋಮ್ ವರ್ಕನ್ನು ಮಾಡದೇ ಹೋದರೆ ಶಾಲೆಯಲ್ಲಿ ಶಿಕ್ಷಕರು ಬೆನ್ನು ಹುಡಿಯಾಗುವಂತೆ ಬಾರಿಸುತ್ತಿದ್ದರು ಅದೂ ನಮ್ಮ ಕೈಯಲ್ಲೇ ಕೋಲು ತರಿಸಿ ಬೆನ್ನು ಬಿಸಿಯಾಗುವಂತೆ ಮಾಡ್ತಿದ್ದರು. ಹೀಗಾಗಿ ಮೊದಲೆಲ್ಲಾ ಹೋಮ್‌ವರ್ಕ್ ಆಗದೇ ಹೋದರೆ ಶಾಲೆಗೆ ಹೋಗುವ ಮನಸ್ಸಿಲ್ಲದೇ ಮಕ್ಕಳು ಹೊಟ್ಟೆ ನೋವಿನ ಕತೆ ಹೇಳ್ತಿದ್ದರು. ನೀವು ಹೀಗೆ ಮಾಡಿದ್ದಿದ್ರೆ ನಿಮಗೂ ಈಗ ನಗು ಬರಬಹುದು. ಆದರೆ ಈಗಿನ ಮಕ್ಕಳು ನಮ್ಮ ಕಾಲಕ್ಕಿಂತ ಬಹಳ ಧೈರ್ಯವಂತರು ಜನರೇಷನ್ ಜೆಡ್ ಕಿಡ್‌ಗಳು ಸ್ವಲ್ಪ ಸಡಿಲ ಬಿಟ್ರೆ ಶಿಕ್ಷಕರ ತಲೆ ಮೇಲೆ ಹತ್ತಿ ಕೊಳಿತುಕೊಳ್ಳುವಷ್ಟು ಚಾಣಾಕ್ಷರು. ಹೋಮ್ ವರ್ಕ್ ಮಾಡಿಲ್ಲ ಅಂದ್ರೆ ಆ ಮಕ್ಕಳು ಏನ್ ಮಾಡ್ಬಹುದು ಅದನ್ನು ಅವರ ಶಿಕ್ಷಕರಿಂದಲೇ ಕೇಳಬೇಕು. ಆದರೆ ಇಲೊಬ್ಬ ಹೋಮ್‌ವರ್ಕ್ ಮಾಡದ ಬಾಲಕ ನೆಕ್ಸ್ಟ್ ಲೆವೆಲ್ ಆಟ ಆಡಿದ್ದು, ಈತನ ಅವತಾರಕ್ಕೆ ಶಿಕ್ಷಕರೇ ದಂಗಾಗಿದ್ದಾರೆ.
ಇದು ನಡೆದಿರುವುದು ಕರ್ನಾಟಕದಲ್ಲೇ ಆದರೆ ಎಲ್ಲಿ ಯಾವಾಗ ಎಂಬ ಬಗ್ಗೆ ಈ ವೀಡಿಯೋದಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದನ್ನು ನೋಡಿ ಆತನ ಪೋಷಕರು ನಗಬೇಕೋ ಅಳಬೇಕೋ ತಿಳಿತಿಲ್ಲ. ಹಾಗಿದ್ರೆ ಆ ವೀಡಿಯೋದಲ್ಲೇನಿದೆ ನೋಡೋಣ.
ವೀಡಿಯೋದಲ್ಲಿ ಬಹುಶಃ ಇದು ಕನ್ನಡ ಮೀಡಿಯಾಂನ ಯಾವುದೋ ಸರ್ಕಾರಿ ಶಾಲೆಯಂತೆ ಕಾಣುತ್ತಿದೆ. ವೀಡಿಯೋದಲ್ಲಿ ಶಿಕ್ಷಕರು ಯಾಕ್ಲ ಹೋಮ್ ವರ್ಕ್ ಮಾಡಿಲ್ಲ ಎಂದು ಕನ್ನಡದಲ್ಲೇ ಬಾಲಕನೋರ್ವನಿಗೆ ಕೇಳಿದ್ದಾರೆ. ಇದಕ್ಕೆ ಆ ಬಾಲಕ ದೆವ್ವ ಮೈಮೇಲೆ ಬಂದವನಂತೆ ವರ್ತಿಸಿದ್ದಾನೆ. ಯಾಕೆ ಹೋಮ್ ವರ್ಕ್ ಮಾಡಿಲ್ಲ ಎಂದ್ರೆ ಅಪ್ಪನ ಕೇಳು ಎಂದಿದ್ದಾನೆ. ಅದಕ್ಕೆ ಜೊತೆಯಲ್ಲಿದ್ದ ಶಿಕ್ಷಕರು ಯಾರ ಅಪ್ಪನ ಕೇಳ್ಬೇಕು ಎಂದಿದ್ದಾರೆ. ಅದಕ್ಕೆ ಆ ಬಾಲಕ ನಾನು ಮೈಮೇಲೆ ಬಂದಿದ್ನಲ್ಲ ಆ ಯುವಕನ ಅಪ್ಪನನ್ನು ಕೇಳು ಎಂದಿದ್ದಾನೆ. ಕಣ್ಣು ಮುಚ್ಚಿಕೊಂಡೆ ಆ ಬಾಲಕ ಮಾತನಾಡುತ್ತಿದ್ದು, ಈ ವೀಡಿಯೋ ನೋಡುಗರಲ್ಲಿ ನಗು ತರಿಸುತ್ತಿದೆ. ಸರಿಯಾಗಿ ನಾಟಕ ಮಾಡ್ತಿದ್ದೀಯಾ ಬಿಡು ರಾಜ ಅಂತ ಕೆಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಶಾಲೆಯ ಶಿಕ್ಷಕರು ಆತನ ಬಳಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಬಾಲಕ ನಾನು ಹೋಗ್ಬೇಕು ಅಂತ ಹೇಳ್ತಾನೆ, ಸಿನಿಮಾದಲ್ಲಿ ನಟನೆ ಮಾಡಿದ್ದೀಯಾ ಏನು ಎಂದು ಒಬ್ಬರು ಕೇಳುತ್ತಾರೆ. ಜೊತೆಗೆ ಮತ್ತೊಬ್ಬರು ನಿನ್ ಹೆಸರೇನಪ್ಪ ಎಂದು ಕೇಳುತ್ತಾರೆ. ಅದಕ್ಕೆ ಆತ ಫೋನ್ ಮಾಡಿ ಕೇಳು ಎಂದಿದ್ದಾನೆ. ಅದಕ್ಕೆ ಶಿಕ್ಷಕರು ಯಾರನ್ನು ಎಂದಿದ್ದಕ್ಕೆ, ಆತ ಇವರಪ್ಪಂಗೆ ಕಾಲ್ ಮಾಡಿ ಕೇಳು ಎಂದಿದ್ದಾನೆ. ಅದಕ್ಕೆ ಶಿಕ್ಷಕರು ಯಾರ ಅಪ್ಪನಿಗೆ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ, ನಾನಿದ್ದೀನಲ್ಲ, ಈ ಯುವಕನ್ನ ಅಪ್ಪನ ಕೇಳು ಅವರಿಗೆ ಗೊತ್ತಾಗುತ್ತೆ ಎಂದಿದ್ದಾನೆ. ಅದಕ್ಕೆ ಅವರು ಮತ್ತೆ ನಿನ್ ಹೆಸರೇನು ಎಂದು ಕೇಳಿದ್ರೆ ನಾನು ಹೇಳಲ್ಲ, ನಾನು ಅವರ ಮನೆ ಕಾಯುವುದಕ್ಕೋಸ್ಕರ ಬಂದಿದ್ದೇನೆ ಎಂದು ಆ ಬಾಲಕ ಹೇಳಿದ್ದಾನೆ. ಹಾಗಿದ್ರೆ ಯಾರಿಗೆ ಫೋನ್ ಮಾಡ್ಬೇಕು ಎಂದು ಮಹಿಳೆಯೊಬ್ಬರು ಬಹುಶಃ ಶಿಕ್ಷಕಿ ಕೇಳುತ್ತಾರೆ ಅದಕ್ಕೆ ಅವರಪ್ಪನಿಗೆ ಕಾಲ್ ಮಾಡು ನಾನು ಮೈಮೇಲೆ ಬಂದ ಯುವಕನ ಅಪ್ಪನಿಗೆ ಫೋನ್ ಮಾಡಿ ಇದು ನ್ಯಾಯನ ಅಂತ ಕೇಳಿ ಅವರಿಗೆ ಗೊತ್ತು ಎಂದು ಆತ ಮತ್ತೆ ಹೇಳಿದ್ದಾನೆ.
ಆತನ ವರ್ತನೆ ನೋಡಿ ಶಿಕ್ಷಕರೇ ತಲೆ ಚಚ್ಚಿಕೊಂಡಿದ್ದಾರೆ. ಈ ವೀಡಿಯೋ ಈಗ ಇನ್ಸ್ಟಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಒಬ್ಬರು ಬೆಲ್ಟ್ ಟ್ರೀಟ್‌ಮೆಂಟ್ ಕೊಟ್ರೆ ಸರಿಯಾಗ್ಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅಯ್ಯೋ ಶಾಲೆಗೆ ಹೋಗ್ಬಾವ ಇಂತಹ ಐಡಿಯಾ ನಂಗೆ ಬಂದೆ ಇಲ್ವಲ್ಲೋ ಎಂದು ಪ್ರತಿಕ್ರಿಯಿಸಿದ್ದಾರೆ. ನಿನ್ನ ನಾನು ಫ್ರೆಂಡ್ ಮಾಡ್ಕೋಬೇಕು ಅಂತ ಇದ್ದೀನಿ ಕಣೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
