ಮೈಸೂರಿನಲ್ಲಿ ಗಣಪತಿ ವಿಗ್ರಹದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ ಆಟೋ ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮೈಸೂರು (ಆ.21): ಮೈಸೂರಿನ ಹೈವೇ ವೃತ್ತದ ಬಳಿಯ ಖಾಸಗಿ ಹೋಟೆಲ್ ಮುಂಭಾಗದಲ್ಲಿ ವಾಸ್ತು ಗಣಪತಿ ವಿಗ್ರಹದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ ಆಟೋ ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಮೇದರಕೇರಿ ನಿವಾಸಿ ವಿಜಯಕುಮಾರ್ ಹಲ್ಲೆಗೊಳಗಾದ ಆಟೋ ಚಾಲಕ. ಪುರುಷೋತ್ತಮ್ ಹಲ್ಲೆ ನಡೆಸಿರುವ ಆರೋಪಿ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವಿಜಯಕುಮಾರ್ ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಆರೋಪಿ ಪುರುಷೋತ್ತಮ್ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:

ಖಾಸಗಿ ಹೋಟೆಲ್ ಮುಂದೆ ಸ್ಥಾಪಿಸಲಾಗಿರುವ ಗಣಪತಿ ವಿಗ್ರಹದ ಬಳಿ ಪುರುಷೋತ್ತಮ್ ಎಂಬಾತ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಆಟೋ ಚಾಲಕ ವಿಜಯಕುಮಾರ್ ಗಮನಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ, ಪುರುಷೋತ್ತಮ್ 'ಕ್ಷಮಿಸಿ, ತಪ್ಪಾಯ್ತು' ಎಂದು ಹೇಳಿ ಸ್ಥಳದಿಂದ ತೆರಳಿದ್ದಾನೆ. ಆದರೆ, ಕೆಲವೇ ಕ್ಷಣಗಳಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಪಸ್ ಬಂದ ಪುರುಷೋತ್ತಮ್, ವಿಜಯಕುಮಾರ್‌ನ ತಲೆಗೆ ಕಾರ್ ಕೀಯಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ವೇಳೆ ಸ್ಥಳೀಯರು ಮಂಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಗಾಯಗೊಂಡ ವಿಜಯಕುಮಾರ್‌ನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಪುರುಷೋತ್ತಮ್ ಹಾಗೂ ಅವನೊಂದಿಗೆ ಬಂದ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೊಲೀಸರು ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದಾರೆ. ಸ್ಥಳೀಯರಲ್ಲಿ ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.