ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 39 ರನ್‌ಗಳ ಜಯ ಸಾಧಿಸಿದೆ. ಮೈಸೂರು 7 ವಿಕೆಟ್‌ಗೆ 136 ರನ್ ಗಳಿಸಿದರೆ, ಬೆಂಗಳೂರು 9 ವಿಕೆಟ್‌ಗೆ 97 ರನ್‌ಗಳಿಗೆ ಆಲೌಟ್ ಆಯಿತು.
ಮೈಸೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಗೆಲುವಿನ ಹಳಿಗೆ ಮರಳಿದೆ. ಆರಂಭಿಕ ಪಂದ್ಯದಲ್ಲಿ ಗೆದ್ದು, ಬಳಿಕ 4 ಪಂದ್ಯಗಳಲ್ಲಿ ಗೆಲುವು ಕಾಣದಿದ್ದ ತಂಡ ಸೋಮವಾರ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 39 ರನ್‌ಗಳಿಂದ ಗೆದ್ದಿತು. ತಂಡಕ್ಕಿದು 6ರಲ್ಲಿ 2ನೇ ಜಯ. ಬೆಂಗಳೂರು 6 ಪಂದ್ಯಗಳಲ್ಲಿ 3ನೇ ಸೋಲು ಕಂಡಿತು.
ಮಳೆಯಿಂದಾಗಿ ತಲಾ 16 ಓವರ್ ಪಂದ್ಯ ನಡೆಸಲಾಯಿತು. ಮೊದಲು ಬ್ಯಾಟ್ ಮಾಡಿದ ಮೈಸೂರು 7 ವಿಕೆಟ್‌ಗೆ 136 ರನ್ ಗಳಿಸಿತು. ಯಶೋವರ್ಧನ್ 39, ಕಾರ್ತಿಕ್ ಸಿ.ಎ. 20 ರನ್ ಗಳಿಸಿದರು. ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್ ತಲಾ 2 ವಿಕೆಟ್ ಕಿತ್ತರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬೆಂಗಳೂರು ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯಿತು. ಕೇವಲ 33 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಮಾಧವ್ ಪ್ರಕಾಶ್ ಬಜಾಜ್(34) ಆಸರೆಯಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ತಂಡ 9 ವಿಕೆಟ್‌ಗೆ 97 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಾರಕ ದಾಳಿ ಸಂಘಟಿಸಿದ ಶಿಖರ್ ಶೆಟ್ಟಿ 3 ಓವರ್‌ನಲ್ಲಿ 5 ರನ್‌ಗೆ 3 ವಿಕೆಟ್ ಕಿತ್ತರು.
ಗುಲ್ಬರ್ಗಕ್ಕೆ ಜಯ
ದಿನದ ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ವಿರುದ್ದ ಗುಲ್ಬರ್ಗ 4 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಹುಬ್ಬಳ್ಳಿ 8 ವಿಕೆಟ್ ಕಳೆದುಕೊಂಡು 158 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಲ್ಬರ್ಗ ತಂಡವು 19.4 ಓವರ್‌ಗಳಲ್ಲಿ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಯಿತು. ಗುಲ್ಬರ್ಗ ತಂಡಕ್ಕಿಂದು ನಾಲ್ಕನೇ ಗೆಲುವು ಎನಿಸಿಕೊಂಡಿತು.
14 ಯುವ ಬೌಲರ್ಸ್‌ಗೆ ಬೆಂಗ್ಳೂರಲ್ಲಿ ತರಬೇತಿ
ಬೆಂಗಳೂರು: ಭಾರತ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿರ್ಧರಿಸಿರುವ ಬಿಸಿಸಿಐ, ಒಟ್ಟು 14 ಯುವ ವೇಗಿಗಳಿಗೆ ವಿಶೇಷ ತರಬೇತಿ ನೀಡುತ್ತಿದೆ. ಈ ಬಗ್ಗೆ ಬಿಸಿಸಿಐ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಂಡರ್-19 ವಿಭಾಗದ ಎಂಟು ಸೇರಿ ಒಟ್ಟು 14 ಬೌಲರ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ತುಷಾರ್ ದೇಶಪಾಂಡೆ ಸೇರಿ ಹಲವರಿದ್ದಾರೆ.
ಬುಚ್ಚಿಬಾಬು ಕಪ್: ಸರ್ಫರಾಜ್ ಶತಕ
ಚೆನ್ನೈ: ಇಲ್ಲಿ ನಡೆಯುತ್ತಿರುವ ಬುಚ್ಚಿ ಬಾಬು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್ ಭರ್ಜರಿ ಶತಕ ಬಾರಿಸಿದ್ದಾರೆ. ಅವರು ತಮಿಳುನಾಡು ಇಲೆವೆನ್ ತಂಡದ ವಿರುದ್ಧ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು 114 ಎಸೆತಕ್ಕೆ 138 ರನ್ ಗಳಿಸಿದರು. ಆದರೆ ಗಾಯದಿಂದಾಗಿ ರಿಟೈರ್ಟ್ ಹರ್ಟ್ ಆಗಿ ಕ್ರೀಸ್ ತೊರೆದರು. ಮುಂಬೈ ಮೊದಲ ದಿನ 5 ವಿಕೆಟ್‌ಗೆ 367 ರನ್ ಕಲೆಹಾಕಿದೆ.
ಏಷ್ಯಾಕಪ್ ಟಿ20ಗೆ ವೇಗಿ ಜಸ್ಪ್ರೀತ್ ಬುಮ್ರಾ ಲಭ್ಯ
ನವದೆಹಲಿ: ಸೆಪ್ಟೆಂಬರ್ 9ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಡಲು ತಾವು ಸಿದ್ಧವಿರುವುದಾಗಿ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್ ವೇಳೆ ತಂಡದಿಂದ ಬಿಡುಗಡೆಯಾಗಿದ್ದ ಜಸ್ಪ್ರೀತ್ ಬುಮ್ರಾ, ಏಷ್ಯಾಕಪ್‌ನಲ್ಲಿ ಆಯ್ಕೆಗೆ ಲಭ್ಯವಿರುವ ಬಗ್ಗೆ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕೆಲ ದಿನಗಳಲ್ಲೇ ಆಯ್ಕೆ ಸಮಿತಿ ಸಭೆ ಸೇರಲಿದ್ದು, ತಂಡವನ್ನು ಆಯ್ಕೆ ಮಾಡಲಿದೆ. ಕಾರ್ಯದೊತ್ತದ ಕಾರಣದಿಂದಾಗಿ ಬುಮ್ರಾ ಏಷ್ಯಾಕಪ್‌ನಲ್ಲಿ ಆಡುವ ಬಗ್ಗೆ ಗೊಂದಲವಿತ್ತು. ಅವರನ್ನು ಟಿ20ಯಲ್ಲಿ ಆಡಿದರೆ ಟೆಸ್ಟ್‌ನಲ್ಲಿ ಮಾತ್ರ ಕಣಕ್ಕಿಳಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದೂ ಹೇಳಲಾಗುತ್ತಿತ್ತು.
