ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರೋಡೆಕೋರರು ಬಿಟ್ಟುಹೋದ ವಾಹನದಿಂದ ಒಂದು ಬ್ಯಾಗ್ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿದೆ. ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ವಶಪಡಿಸಿಕೊಂಡ ಈ ಬ್ಯಾಗ್‌ನಲ್ಲಿ 6.540 ಕೆ.ಜಿ. ಚಿನ್ನ ಮತ್ತು 41.04 ಲಕ್ಷ ರೂ. ನಗದು ದೊರೆತಿದೆ.

ವಿಜಯಪುರ (ಸೆ.19): ಜಿಲ್ಲೆಯ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರೋಡೆಕೋರರು ಕದ್ದೊಯ್ದಿದ್ದ ಚಿನ್ನ ಮತ್ತು ನಗದು ತುಂಬಿದ ಬ್ಯಾಗ್ ಒಂದು ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಪತ್ತೆಯಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೇಗೆ ಪತ್ತೆಯಾಯಿತು?

ಸೆಪ್ಟೆಂಬರ್ 16ರಂದು ದರೋಡೆ ನಡೆದ ದಿನ, ಆರೋಪಿಗಳು ಮಾರುತಿ ಇಕೋ ವ್ಯಾನ್‌ನಲ್ಲಿ ದರೋಡೆ ಮಾಡಿದ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗುತ್ತಿದ್ದರು. ಈ ವೇಳೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ದರೋಡೆಕೋರರು ಬಂದೂಕು ತೋರಿಸಿ ಬೆದರಿಸಿ ವಾಹನ ಬಿಟ್ಟು ಪರಾರಿಯಾಗಿದ್ದರು.

ಆದರೆ, ದರೋಡೆಕೋರರು ಬಿಟ್ಟು ಹೋದ ವ್ಯಾನ್‌ನಲ್ಲಿ ಚಿನ್ನ ಮತ್ತು ನಗದು ತುಂಬಿದ್ದ ಒಂದು ಬ್ಯಾಗ್ ಇತ್ತು. ಇದರಿಂದಾಗಿ ಕೆಲವೊಂದು ಚಿನ್ನಾಭರಣಗಳು ಮತ್ತು ಹಣ ರಸ್ತೆಯಲ್ಲಿ ಬಿದ್ದಿದ್ದವು. ಗ್ರಾಮಸ್ಥರು ಈ ಹಣ ಮತ್ತು ಬ್ಯಾಗ್‌ನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಹುಲಜಂತಿ ಗ್ರಾಮಕ್ಕೆ ಭೇಟಿ ನೀಡಿದ ವಿಜಯಪುರ ಹಾಗೂ ಸೊಲ್ಲಾಪುರ ಪೊಲೀಸರು ಗ್ರಾಮಸ್ಥರ ಸಭೆ ನಡೆಸಿ, ಸಂಜೆ 5 ಗಂಟೆಯೊಳಗೆ ಬ್ಯಾಗ್ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪೊಲೀಸರ ಈ ಕಟ್ಟುನಿಟ್ಟಿನ ಎಚ್ಚರಿಕೆಯಿಂದ ಹೆದರಿದ ಒಬ್ಬ ಗ್ರಾಮಸ್ಥ, ತಾನು ಬಚ್ಚಿಟ್ಟಿದ್ದ ಬ್ಯಾಗ್‌ನ್ನು ಪಾಳುಬಿದ್ದ ಮನೆಯೊಂದರ ಮೇಲ್ಛಾವಣಿಯಲ್ಲಿ ತಂದು ಇರಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬ್ಯಾಗ್‌ನ್ನು ವಶಕ್ಕೆ ಪಡೆದಿದ್ದಾರೆ.

ಏನೇನು ಪತ್ತೆಯಾಗಿದೆ?

ಪತ್ತೆಯಾದ ಬ್ಯಾಗ್‌ನಲ್ಲಿ ಒಟ್ಟು 6.540 ಕೆ.ಜಿ. ಚಿನ್ನ ಮತ್ತು 41.04 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಒಟ್ಟು 136 ಚಿನ್ನದ ಪ್ಯಾಕೇಟ್‌ಗಳು ಈ ಬ್ಯಾಗ್‌ನಲ್ಲಿ ದೊರೆತಿವೆ. ದರೋಡೆಕೋರರು ಬ್ಯಾಂಕ್‌ನಿಂದ ಸುಮಾರು 20 ಕೆ.ಜಿ. ಚಿನ್ನ ಮತ್ತು 1.4 ಕೋಟಿ ರೂಪಾಯಿ ನಗದು ದರೋಡೆ ಮಾಡಿದ್ದರು ಎಂದು ಅಂದಾಜಿಸಲಾಗಿದೆ. ಈಗ ಪತ್ತೆಯಾದದ್ದು ಕೇವಲ ಒಂದು ಬ್ಯಾಗ್ ಮಾತ್ರ. ಇನ್ನೂ ಎರಡು ಬ್ಯಾಗ್‌ಗಳು ದರೋಡೆಕೋರರ ಬಳಿ ಇರುವ ಶಂಕೆ ಇದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಸದ್ಯ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಆರೋಪಿಗಳ ಪತ್ತೆಗಾಗಿ 8 ತಂಡಗಳನ್ನು ರಚಿಸಿದ್ದಾರೆ. ಸದ್ಯದಲ್ಲೇ ದರೋಡೆಕೋರರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಇಲಾಖೆ ಭರವಸೆ ನೀಡಿದೆ.