ಚಿತ್ರದುರ್ಗದಲ್ಲಿ ನಡೆದ ವಿದ್ಯಾರ್ಥಿನಿ ವರ್ಷಿತಾ ಹತ್ಯೆ ಪ್ರಕರಣದಲ್ಲಿ ಆರೋಪಿ ಚೇತನ್ ತಪ್ಪೊಪ್ಪಿಕೊಂಡಿದ್ದಾನೆ. ವರ್ಷಿತಾಳ ಜೊತೆ ದೈಹಿಕ ಸಂಬಂಧ ಹೊಂದಿದ್ದ ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ.
ಚಿತ್ರದುರ್ಗ (ಆ.20): ಇಲ್ಲಿನ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿದ್ಯಾರ್ಥಿನಿ ವರ್ಷಿತಾ (19) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಚೇತನ್ ಪೊಲೀಸರ ಮುಂದೆ ಕೆಲವು ಗಂಭೀರ ಅಂಶಗಳನ್ನು ಬಹಿರಂಗಪಡಿಸಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಚೇತನ್ ಈ ಕೃತ್ಯವನ್ನು ತಾನು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರ ನಡುವೆ ಆರೋಪಿಯಾಗಿರುವ ಚೇತನ್‌ಗೆ ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಚೇತನ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ
‘ಗಂಗಾವತಿಯ ಖಾಸಗಿ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಕಳೆದ ಎರಡು ವರ್ಷದಿಂದ ವರ್ಷಿತಾಳನ್ನು ಪ್ರೀತಿ ಮಾಡುತ್ತಿದ್ದೆ. ಆದರೆ, ಕೆಲ ತಿಂಗಳಿನಿಂದ ವರ್ಷಿತಾ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ವರ್ಷಿತಾ ಗರ್ಭಿಣಿ ಆಗಿದ್ದಳೆಂದು ನನಗೆ ಗೊತ್ತಾಗಿತ್ತು. ವರ್ಷಿತಾ ಜತೆ ಮದುವೆಗೆ ಸಂಬಂಧಿಕರು ಒತ್ತಡ ಹೇರಿದ್ದರು. ಆಗಷ್ಟ್ 14ಕ್ಕೆ ವರ್ಷಿತಾ ಹಿರಿಯೂರಿನ ಸಂಬಂಧಿಕರ ಮನೆಗೆ ಹೋಗಿದ್ದಳು. ಆಗಸ್ಟ್ 18ರಂದು ವರ್ಷಿತಾ ಚಿತ್ರದುರ್ಗಕ್ಕೆ ವಾಪಾಸ್ ಆಗಿದ್ದಳು. ಆ.18ರ ಮಧ್ಯಾಹ್ನ 2 ಗಂಟೆಗೆ ಬೈಕ್ ನಲ್ಲಿ ಗೋನೂರು ಬಳಿ ಆಕೆಯನ್ನು ಕರೆದೊಯ್ದಿದ್ದೆ. ಚಿತ್ರದುರ್ಗ ತಾಲೂಕಿನ ಗೋನೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ನಿರ್ಜನ ಪ್ರದೇಶದಲ್ಲಿ ನಾವು ಕೆಲ ಹೊತ್ತು ಕುಳಿತಿದ್ದೆವು. ಈ ವೇಳೆ ವರ್ಷಿತಾ ಜೊತೆ ದೈಹಿಕ ಸಂಬಂದ ಬೆಳೆಸಿದ ಬಳಿಕ ನಾನು ಆಕೆಯ ತಲೆಗೆ ಹೊಡೆದಿದ್ದೆ. ನೆಲಕ್ಕೆ ಬಿದ್ದಾಗ ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದೇನೆ. ಬಳಿಕ ಬೈಕ್‌ನಲ್ಲಿ ತಂದಿದ್ದ ಪೆಟ್ರೋಲ್ ಹಾಕಿ ಆಕೆಯ ದೇಹಕ್ಕೆ ಬೆಂಕಿ ಇಟ್ಟಿದ್ದೆ. ಆ.19ರ ಬೆಳಗ್ಗೆ ಮತ್ತೆ ಸ್ಥಳಕ್ಕೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಾಕಿದೆ. ಮೃತ ದೇಹದ ಮೇಲೆ ವರ್ಷಿತಾಳ ಚಪ್ಪಲಿಯಿಟ್ಟು ಹೋಗಿದ್ದೆ.’
ಪ್ರಕರಣ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಚೇತನ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯಾಗಿರುವ ಚೇತನ್ ಚಿತ್ರದುರ್ಗದ ಕೆಳಗೋಟೆ ಬಡಾವಣೆಯನು ಎನ್ನಲಾಗಿದೆ.
ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ: ರಸ್ತೆ ಸಂಚಾರ ಅಸ್ತವ್ಯಸ್ತ
ವಿದ್ಯಾರ್ಥಿನಿ ವರ್ಷಿತಾ (19) ಹತ್ಯೆ ಪ್ರಕರಣವನ್ನು ಖಂಡಿಸಿ, ಚಿತ್ರದುರ್ಗದಲ್ಲಿ ದಲಿತಪರ ಸಂಘಟನೆಗಳು ಮತ್ತು ವರ್ಷಿತಾಳ ಸಂಬಂಧಿಕರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ನಗರದ ಡಾ. ಅಂಬೇಡ್ಕರ್ ವೃತ್ತ ಮತ್ತು ಜಿಲ್ಲಾಸ್ಪತ್ರೆ ಎದುರು ರಸ್ತೆ ತಡೆದು ಧರಣಿ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ನಗರದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ಚಳ್ಳಕೆರೆ ಗೇಟ್‌ನಿಂದ ಅಂಬೇಡ್ಕರ್ ವೃತ್ತದವರೆಗಿನ ಮಾರ್ಗವನ್ನು ಪೊಲೀಸರು ಬದಲಾಯಿಸಿ, ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್‌ಪಿ ಪಿ. ದಿನಕರ್ ಮತ್ತು ನಗರ ಠಾಣೆ ಸಿಪಿಐ ಉಮೇಶ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
