- Home
- News
- Crime
- ನಿರ್ಭಯಾ ಹತ್ಯೆಗಿಂತ ಕ್ರೂರ; ಚಿತ್ರದುರ್ಗ ಕಾಲೇಜು ವಿದ್ಯಾರ್ಥಿನಿ ರೇಪ್ ಮಾಡಿ, ಬೆಂಕಿ ಹಚ್ಚಿ ಸುಟ್ಟರಾ ಕ್ರಿಮಿಗಳು!
ನಿರ್ಭಯಾ ಹತ್ಯೆಗಿಂತ ಕ್ರೂರ; ಚಿತ್ರದುರ್ಗ ಕಾಲೇಜು ವಿದ್ಯಾರ್ಥಿನಿ ರೇಪ್ ಮಾಡಿ, ಬೆಂಕಿ ಹಚ್ಚಿ ಸುಟ್ಟರಾ ಕ್ರಿಮಿಗಳು!
ಚಿತ್ರದುರ್ಗದಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯ ಅರೆಬೆಂದ ಶವ ಪತ್ತೆಯಾಗಿದ್ದು, ಆಕೆಯನ್ನು ಅತ್ಯಾಚಾ*ರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚಿತ್ರದುರ್ಗ (ಆ.19): ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಅರೆಬೆಂದ ಸ್ಥಿತಿಯಲ್ಲಿ ನಗ್ನವಾಗಿರುವ 19 ವರ್ಷದ ಕಾಲೇಜು ಯುವತಿಯ ಶವ ಪತ್ತೆಯಾಗಿದೆ.ಈ ಘಟನೆಯಲ್ಲಿ ಆರೋಪಿಗಳ ಕೃತ್ಯವು ದೆಹಲಿಯಲ್ಲಿ ನಡೆ ನಿರ್ಭಯಾ ಪ್ರಕರಣವನ್ನು ಮೀರಿಸುವಂತಿದೆ ಎಂಬ ಆರೋಪಗಳು ಸ್ಥಳೀಯ ಸಂಘಟನೆಗಳಿಂದ ವ್ಯಕ್ತವಾಗಿದೆ. ಇಡೀ ಜಿಲ್ಲೆಯಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಹಿನ್ನೆಲೆ
ಈ ಘಟನೆಯು ಹಿರಿಯೂರು ತಾಲ್ಲೂಕಿನ ಕೋವೇರಹಟ್ಟಿ ಗ್ರಾಮದ 19 ವರ್ಷದ ಪದವಿ ವಿದ್ಯಾರ್ಥಿನಿ ವರ್ಷಿತಾ ಎಂಬ ಯುವತಿಯ ಬರ್ಬರ ಹತ್ಯೆ ಎಂದು ಗುರುತಿಸಲಾಗಿದೆ. ಕೋವೇರಹಟ್ಟಿಯ ನಿವಾಸಿಯಾದ ವರ್ಷಿತಾ, ಚಿತ್ರದುರ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು ಮತ್ತು ನಗರದ ಬಾಲಕಿಯರ ವಸತಿ ಶಾಲೆಯಲ್ಲಿ ತಂಗಿದ್ದಳು. ಕಳೆದ 4 ದಿನಗಳಿಂದಲೂ ವರ್ಷಿತಾ ಹಾಸ್ಟೆಲ್ ಅಥವಾ ಮನೆಗೆ ಹೋಗಿರಲಿಲ್ಲ.
ರಜೆ ಪತ್ರ ಬರೆದುಕೊಟ್ಟಿದ್ದ ವರ್ಷಿತಾ:
ಆಗಸ್ಟ್ 14ರಂದು, ತನ್ನ ಊರಿಗೆ ಹೋಗಲು ರಜೆ ಕೋರಿ ಹಾಸ್ಟೆಲ್ ವಾರ್ಡನ್ ಅವರಿಗೆ ಲಿವ್ ಲೆಟರ್ ನೀಡಿ ಹಾಸ್ಟೆಲ್ ತೊರೆದಿದ್ದಳು. ಹಾಸ್ಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವಳು ಮೊಬೈಲ್‌ನಲ್ಲಿ ಮಾತನಾಡುತ್ತಾ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಳು ಎಂದು ತಿಳಿದುಬಂದಿದೆ.
ಬರ್ಬರ ಕೊಲೆ
ಆಗಸ್ಟ್ 19 ರಂದು, ಗೋನೂರು ಗ್ರಾಮದ ಬಳಿ ಇರುವ ಹೆದ್ದಾರಿ 48ರ ಅಂಚಿನಲ್ಲಿ ವರ್ಷಿತಾಳ ಸುಟ್ಟ ದೇಹ ಪತ್ತೆಯಾಗಿದೆ. ಈ ಘಟನೆ ಆಕೆಯ ಕುಟುಂಬ ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಅತ್ಯಾಚಾ*ರ ಎಸಗಿ ನಂತರ ಆಕೆಯನ್ನು ಕೊಲೆ ಮಾಡಿ, ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ರೀತಿಯ ಘಟನೆಗಳು ಉತ್ತರ ಭಾರತದಲ್ಲಿ ಮಾತ್ರ ನಡೆಯುತ್ತಿದ್ದವು, ಈಗ ನಮ್ಮ ರಾಜ್ಯದಲ್ಲಿಯೂ ನಡೆದಿರುವುದು ವಿಷಾದನೀಯ ಎಂದು ಮೃತರ ಸಂಬಂಧಿ ಪ್ರವೀಣ್ ಕಳವಳ ವ್ಯಕ್ತಪಡಿಸಿದ್ದಾರೆ. ಇದೊಂದು ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ.
ತನಿಖೆ ಮತ್ತು ಪ್ರತಿಭಟನೆ
ಈ ಪ್ರಕರಣ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ವರ್ಷಿತಾ ಜೊತೆ ಸಂಪರ್ಕದಲ್ಲಿದ್ದ ಚೇತನ್ ಎಂಬ ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ಆತ ಕ್ಯಾನ್ಸರ್‌ನ ಮೂರನೇ ಹಂತದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಇನ್ನು ವರ್ಷಿತಾಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಇಂದು ಎಬಿವಿಪಿ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಒನಕೆ ಓಬವ್ವ ವೃತ್ತ ಮತ್ತು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿವೆ. ದಲಿತ ಸಂಘಟನೆ ಮುಖಂಡ ಬೀರಾವರ ಪ್ರಕಾಶ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ತಾಯಿಯ ಕರುಣಾಜನಕ ನೋವು
ವರ್ಷಿತಾಳ ಸಾವಿನ ಸುದ್ದಿ ಕೇಳಿ ಆಕೆಯ ತಾಯಿ ಜ್ಯೋತಿ ತಿಪ್ಪೇಸ್ವಾಮಿ ಕಣ್ಣೀರಿಟ್ಟಿದ್ದಾರೆ. 'ಗಂಡು ಮಕ್ಕಳಿಲ್ಲದ ನಮಗೆ, ಮಗಳು ಓದಿ ದೊಡ್ಡ ವ್ಯಕ್ತಿಯಾಗಲಿ ಎಂದು ನಗರಕ್ಕೆ ಕಳುಹಿಸಿದ್ದೆವು. ನಮ್ಮ ಮಗಳಿಗೆ ಆದ ಪರಿಸ್ಥಿತಿ ಬೇರೆ ಯಾವುದೇ ಮಕ್ಕಳಿಗೂ ಬರಬಾರದು.
ಹಾಸ್ಟೆಲ್ ಮತ್ತು ಕಾಲೇಜು ಸಿಬ್ಬಂದಿ ನಿಮ್ಮ ಮಕ್ಕಳಂತೆ ವಿದ್ಯಾರ್ಥಿನಿಯರನ್ನು ನೋಡಿಕೊಳ್ಳಿ' ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಆಕೆಯ ಅಂತಿಮ ಸಂಸ್ಕಾರದ ಸಮಯದಲ್ಲಿ, ಸಂಬಂಧಿಕರು ಮತ್ತು ಸ್ಥಳೀಯರು ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಜಮಾಯಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಈ ಕರುಣಾಜನಕ ಘಟನೆ ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಪೊಲೀಸರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.