Ankalagi Durgadevi Jatra violence: ವಿಜಯಪುರ ಜಿಲ್ಲೆಯ ಅಂಕಲಗಿ ಗ್ರಾಮದ ದುರ್ಗಾದೇವಿ ಜಾತ್ರೆಯಲ್ಲಿ ವಡ್ಡರ್ ಮತ್ತು ಪೂಜಾರಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಾಲಕಿಯೊಬ್ಬಳಿಗೆ ಗಾಯವಾಗಿದ್ದು, ಪೊಲೀಸರು 14 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ವಿಜಯಪುರ (ಅ.4): ವಿಜಯಪುರ ಜಿಲ್ಲೆಯ ಅಂಕಲಗಿ ಗ್ರಾಮದ ದುರ್ಗಾದೇವಿ ಜಾತ್ರೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಗಲಾಟೆಯಾಗಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಭವಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಒಟ್ಟು 14 ಜನರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸೀರೋಡಾ ಸಮುದ್ರದಲ್ಲಿ ಘನಘೋರ ದುರಂತ: ಬೆಳಗಾವಿಯ ಒಂದೇ ಕುಟುಂಬದ ಮೂವರು ಜಲಸಮಾಧಿ, ನಾಲ್ವರು ಕಣ್ಮರೆ!
ಗಲಾಟೆ ನಡೆದಿದ್ದು ಹೇಗೆ?
ಜಾತ್ರೆಯ ವೇಳೆ ವಡ್ಡರ್ ಮತ್ತು ಪೂಜಾರಿ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಮ ಅಂಕಲಗಿ ಎಂಬಾತ ತನ್ನ ಲೈಸೆನ್ಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಗುಂಡು ದುರದೃಷ್ಟವಶಾತ್ ಒಬ್ಬ ಬಾಲಕಿಯ ಕಾಲಿಗೆ ಗುಂಡು ತಗುಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು, ಎರಡೂ ಗುಂಪುಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಗಲಾಟೆಯಲ್ಲಿ ಭಾಗಿಯಾದ ಒಟ್ಟು 14 ಜನರನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, ತನಿಖೆಯನ್ನು ಆರಂಭಿಸಿದ್ದಾರೆ.
ಘಟನೆಯಿಂದ ಜಾತ್ರೆಯ ವಾತಾವರಣ ಹಾಳಾಗಿ ಕೆಲಕಾಲ ಆತಂಕ ಸೃಷ್ಟಿಸಿತು, ಪೊಲೀಸರು ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಘಟನೆಯ ಹಿನ್ನೆಲೆ ಮತ್ತು ಗುಂಡು ಹಾರಾಟಕ್ಕೆ ನಿಖರ ಕಾರಣಗಳ ಬಗ್ಗೆ ಪೊಲೀಸರು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
