ಪಾಕಿಸ್ತಾನ ನನ್ನ ಜನ್ಮಭೂಮಿ ಆದ್ರೆ ಭಾರತ ನನ್ನ ಮಾತೃಭೂಮಿ ಎಂದು ಗುಡುಗಿದ ಸ್ಟಾರ್ ಕ್ರಿಕೆಟಿಗ!
ಕರಾಚಿ: ಸದಾ ಒಂದಿಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನೀಶ್ ಕನೇರಿಯಾ, ಇದೀಗ ಮತ್ತೊಂದು ಅಚ್ಚರಿಯ ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ. ಇದೇ ವೇಳೆ ತಾವು ಭಾರತೀಯ ನಾಗರಿತ್ವ ಪಡೆಯುವ ಆಲೋಚನೆ ಸದ್ಯಕ್ಕಿಲ್ಲ ಎಂದು ಕನೇರಿಯಾ ಸ್ಪಷ್ಟನೆ ನೀಡಿದ್ದಾರೆ.

ಪಾಕ್ ಮಾಜಿ ಕ್ರಿಕೆಟಿಗ ಡ್ಯಾನೀಶ್ ಕನೇರಿಯಾ
ಪಾಕಿಸ್ತಾನದ ಮಾಜಿ ಲೆಗ್‌ಸ್ಪಿನ್ನರ್ ಡ್ಯಾನೀಶ್ ಕನೇರಿಯಾ, ಪಾಕಿಸ್ತಾನ ನನ್ನ ಜನ್ಮಭೂಮಿಯಾದರೂ, ನಾನಿಲ್ಲಿನ ಕ್ರಿಕೆಟ್ ಬೋರ್ಡ್ ಹಾಗೂ ಸರ್ಕಾರಿ ಅಧಿಕಾರಿಗಳಿಂದ ಸಾಕಷ್ಟು ತಾರತಮ್ಯಗಳನ್ನು ಎದುರಿಸಿದ್ದೇನೆ ಎಂದು ಹೇಳಿದ್ದಾರೆ.
ಪ್ರಶ್ನಿಸುವವರಿಗೆ ಉತ್ತರ ಕೊಟ್ಟ ಕನೇರಿಯಾ
ಸಾಕಷ್ಟು ಮಂದಿ ನನ್ನನು ನೀವ್ಯಾಕೆ ಪಾಕಿಸ್ತಾನದ ಬಗ್ಗೆ ಮಾತನಾಡುವುದಿಲ್ಲ. ಭಾರತದ ಆಂತರಿಕ ವಿಚಾರದ ಬಗ್ಗೆ ಮಾತ್ರ ಯಾಕೆ ಮಾತಾಡುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ.
ಸ್ಪಷ್ಟನೆ ಕೊಟ್ಟ ಮಾಜಿ ಲೆಗ್‌ಸ್ಪಿನ್ನರ್
ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಭಾರತೀಯ ಪೌರತ್ವ ಪಡೆಯುದಕ್ಕಾಗಿಯೇ ಹೀಗೆಲ್ಲಾ ಭಾರತವನ್ನು ಹೊಗಳುತ್ತಿದ್ದೀರ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ನೇರವಾಗಿ ನಾನು ಹೇಳಲು ಬಯಸುತ್ತೇನೆ ಎಂದು ಕನೇರಿಯಾ ಹೇಳಿದ್ದಾರೆ.
ನನ್ನನ್ನು ಮತಾಂತರಿಸುವ ಪ್ರಯತ್ನ ನಡೆದಿತ್ತು ಎಂದ ಕನೇರಿಯಾ
ಪಾಕಿಸ್ತಾನದಲ್ಲಿ ಇಲ್ಲಿನ ಜನರಿಂದ ನಾನು ಸಾಕಷ್ಟು ಪ್ರೀತಿ ವಿಶ್ವಾಸಗಳನ್ನು ಎದುರಿಸಿದ್ದಾರೆ. ಈ ಪ್ರೀತಿ ವಿಶ್ವಾಸವನ್ನು ಮೀರಿ, ನಾನಿಲ್ಲಿ ಸಾಕಷ್ಟು ತಾರತಮ್ಯಗಳನ್ನು ಎದುರಿಸಿದ್ದಾರೆ. ನನ್ನನ್ನು ಇಲ್ಲಿ ಮತಾಂತರಿಸಲು ಪ್ರಯತ್ನ ನಡೆದಿತ್ತು ಎಂದು ಕನೇರಿಯಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ನನ್ನ ಮಾತೃಭೂಮಿ ಎಂದ ಕನೇರಿಯಾ
ಒಂದಂತೂ ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ, ಪಾಕಿಸ್ತಾನ ನನ್ನ ಜನ್ಮಭೂಮಿಯಾಗಿರಬಹುದು, ಆದರೆ ಭಾರತ ನನ್ನ ಪೂರ್ವಜರು ನೆಲೆಸಿದ್ದ ಮಾತೃಭೂಮಿಯಾಗಿದೆ. ಭಾರತ ನನಗೆ ಒಂದು ರೀತಿ ದೇವಸ್ಥಾನವಿದ್ದಂತೆ ಎಂದು ಕನೇರಿಯಾ ಹೇಳಿದ್ದಾರೆ.
ನನಗೆ ಭಾರತದ ಪೌರತ್ವ ಪಡೆಯುವ ಆಲೋಚನೆ ಇಲ್ಲ
ಸದ್ಯಕ್ಕಂತೂ ನನಗೆ ಭಾರತದ ನಾಗರಿಕತ್ವ ಪಡೆಯುವ ಯಾವುದೇ ಆಲೋಚನೆಯಿಲ್ಲ. ಮುಂದೊಂದು ದಿನ ಹಾಗೇನಾದರೂ ಅನಿಸಿದರೆ, ನಮ್ಮಂತಹವರಿಗಾಗಿಯೇ ಸಿಎಎ ಇದೆಯಲ್ಲ ಎಂದು ಡ್ಯಾನೀಶ್ ಕನೇರಿಯಾ ಹೇಳಿದ್ದಾರೆ.
ಶ್ರೀರಾಮ ನನ್ನನ್ನು ಕಾಪಾಡುತ್ತಾರೆ
ನನ್ನ ಮಾತುಗಳನ್ನು ಅಪರ್ಥ ಮಾಡಿಕೊಂಡು, ನಾನು ಭಾರತೀಯ ನಾಗರಿಕತ್ವ ಪಡೆಯಲು ಹೀಗೆ ಹೇಳಿಕೆ ಕೊಡುತ್ತಿದ್ದೇನೆ ಎನ್ನುವುದು ಅಕ್ಷರಶಃ ತಪ್ಪು ಕಲ್ಪನೆ. ನನ್ನ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವವರಿಗೆ ಶ್ರೀರಾಮನ ಆಶೀರ್ವಾದ ಇರುವವರೆಗೂ ನಾವು ಸುರಕ್ಷಿತವಾಗಿರುತ್ತೇವೆ. ನನ್ನ ಹಣೆಬರಹ ಶ್ರೀರಾಮನ ಕೈಯಲ್ಲಿ ಇದೆ. ಜೈ ಶ್ರೀರಾಮ್ ಎಂದು ಕನೇರಿಯಾ ಬರೆದುಕೊಂಡಿದ್ದಾರೆ.