ಆನ್‌ಲೈನ್ ಮನಿ ಗೇಮಿಂಗ್ ಕಾಯ್ದೆ ಜಾರಿಯಿಂದ ಬೆಟ್ಟಿಂಗ್ ಆ್ಯಪ್‌ಗಳ ಜಾಹೀರಾತು ಮತ್ತು ಪ್ರಾಯೋಜಕತ್ವದಿಂದ ಹಣ ಪಡೆಯುತ್ತಿದ್ದ ಕ್ರೀಡಾ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು. ಐಪಿಎಲ್ ಫ್ರಾಂಚೈಸಿಗಳು ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳಿಗೆ ಇದು ಹೊಸ ಸವಾಲೊಡ್ಡಿದೆ.
ನವದೆಹಲಿ: ಆನ್‌ಲೈನ್ ಮನಿ ಗೇಮಿಂಗ್ ಕಾಯ್ದೆ ರಾಷ್ಟ್ರಪತಿ ಅಂಗೀಕಾರದೊಂದಿಗೆ ಕಾನೂನಾದ ಬೆನ್ನಲ್ಲೇ ಬೆಟ್ಟಿಂಗ್ ಆ್ಯಪ್‌ನ ಜಾಹೀರಾತು, ಪ್ರಾಯೋಜತ್ವಕಗಳಿಂದ ಸುಲಭವಾಗಿ ಹಣ ಪಡೆಯುತ್ತಿದ್ದ ಐಪಿಎಲ್ ಫ್ರಾಂಚೈಸಿಗಳು ಸೇರಿದಂತೆ ದೇಶದ ವಿವಿಧ ಕ್ರೀಡಾ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಬಹುದು.
ಕ್ರಿಕೆಟ್ ಸೇರಿದಂತೆ ದೇಶದ ನಾನಾ ಕ್ರೀಡೆಗಳಲ್ಲಿ ವಿವಿಧ ಹಂತದಲ್ಲಿ ಯಥೇಚ್ಛವಾಗಿ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರ ನಡೆಯುತ್ತಿದೆ. ಹಲವು ಆ್ಯಪ್‌ಗಳು ಟೂರ್ನಿಗಳ ಪ್ರಾಯೋಜತ್ವವನ್ನೂ ನಿರ್ವಹಿಸುತ್ತಿವೆ. ಟೀಂ ಇಂಡಿಯಾದ ಆಟಗಾರರು, ಐಪಿಎಲ್, ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್, ಪ್ರೊ ಕಬಡ್ಡಿ ಲೀಗ್‌ನಂಥ ಪ್ರತಿಷ್ಟಿತ ಟೂರ್ನಿಗಳಲ್ಲಿ ಆಟಗಾರರ ಜೆರ್ಸಿ ಗಳಲ್ಲಿ ಆ್ಯಪ್‌ಗಳ ಲೋಗೋ ಹಾಕಿ ಪ್ರಚಾರ ಮಾಡಲಾಗುತ್ತಿದೆ.
ಆದರೆ ಗೇಮಿಂಗ್, ಬೆಟ್ಟಿಂಗ್ ಆ್ಯಪ್‌ಗಳ ಮೂಲಕ ಅಕ್ರಮ ಹಣ ಸಾಗಣೆ, ತೆರಿಗೆ ವಂಚನೆ ಹಾಗೂ ಭಯೋತ್ಪಾದಕ ಕೃತಗಳಿಗೂ ಹಣ ಬಳಕೆಯಾಗುತ್ತಿರುವುದು ಕಂಡು ಬಂದಿರುವ ಕಾರಣ ಆ್ಯಪ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಭಾರತದ ವಿವಿಧ ಕ್ರೀಡಾ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನೂತನ ಕಾಯ್ದೆಯಂತೆ ಬಿಸಿಸಿಐ ಎಲೆಕ್ಷನ್‌ಗೆ ಸಚಿವಾಲಯ ಪ್ಲ್ಯಾನ್
ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಜಾರಿಗೆ ತಂದಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಪ್ರಕಾರವೇ ಬಿಸಿಸಿಐನ ಮುಂದಿನ ಚುನಾವಣೆ ನಡೆಸಲು ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಆದರೆ ಕಾಯ್ದೆ ಜಾರಿಗೊಳ್ಳಲು 6 ತಿಂಗಳು ಬೇಕಿರುವುದರಿಂದ, ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಮಂಡಳಿಯ ಚುನಾವಣೆ ಲೋಧಾ ಸಮಿತಿ ಶಿಫಾರಸ್ಸಿನಂತೆ ನಡೆಯುವ ಸಾಧ್ಯತೆ ಹೆಚ್ಚು.
ಕ್ರೀಡಾ ಸಚಿವಾಲಯ ಕಾಯ್ದೆಗೆ ಸಂಬಂಧಪಟ್ಟಂತೆ ಶಾಸನಗಳನ್ನು ಸಿದ್ಧಪಡಿಸಿಬೇಕಿದ್ದು, ಅದಕ್ಕೆ 6 ತಿಂಗಳು ಬೇಕು. ಒಂದು ವೇಳೆ ಬಿಸಿಸಿಐ ಚುನಾವಣೆ ಹೊತ್ತಲ್ಲಿ ಕಾಯ್ದೆಗೆ ಸಂಬಂಧಿತ ನಿಯಮಗಳು ಕಾರ್ಯರೂಪಕ್ಕೆ ಬಾರದಿದ್ದಲ್ಲಿ ಸುಪ್ರೀಂ ಕೋರ್ಟ್ ಅನುಮೋದಿತ ಲೋಧಾ ಸಮಿತಿಯ ಶಿಫಾರಸ್ಸಿನಂತೆ ಚುನಾವಣೆ ನಡೆಯಲಿದೆ. ಹೀಗಾದರೆ ಪದಾಧಿಕಾರಿಗಳು, ಅಧ್ಯಕ್ಷರ ಸ್ಪರ್ಧೆಗೆ 70 ವರ್ಷ ಮಿತಿಯಿರಲಿದೆ. ಆದರೆ ಹೊಸ ಕ್ರೀಡಾ ನೀತಿಯಲ್ಲಿ ವಯಸ್ಸಿನ ಮಿತಿ 75ಕ್ಕೆ ಏರಿಸಲಾಗಿದೆ. ಈ ಕಾಯ್ದೆ ಪ್ರಕಾರ ಚುನಾವಣೆ ನಡೆದರೆ 70ರಿಂದ 75 ವರ್ಷದ ನಡುವಿನ ವ್ಯಕ್ತಿಗಳಿಗೂ ಸ್ಪರ್ಧಿಸಬಹುದು.
ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅವಧಿ ಒಂದು ವರ್ಷ ವಿಸ್ತರಣೆ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಅವಧಿಯನ್ನು ಬಿಸಿಸಿಐ ಒಂದು ವರ್ಷ ವಿಸ್ತರಿಸಿದೆ. ಅವರ ಅವಧಿ 2026ರ ಜೂನ್‌ವರೆಗೂ ಇರಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಾಜಿ ಕ್ರಿಕೆಟಿಗ ಅಗರ್ಕರ್ 2023ರ ಜೂನ್‌ನಲ್ಲಿ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅವರ ಅವಧಿಯಲ್ಲಿ ಭಾರತ ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಅಲ್ಲದೆ, 2023ರ ಏಕದಿನ ವಿಶ್ವಕಪ್ ಫೈನಲ್‌ಗೇರಿತ್ತು. ಹೀಗಾಗಿ ಕೆಲ ತಿಂಗಳ ಹಿಂದೆಯೇ ಅವರ ಅವಧಿ ವಿಸ್ತರಿಸಲಾಗಿದೆ. ಆದರೆ ಇತರ ಕೆಲ ಸದಸ್ಯರನ್ನು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಕ ಸಭೆಯಲ್ಲಿ ಹುದ್ದೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
