ಏಷ್ಯಾಕಪ್ ಗೆಲುವಿನ ಬಳಿಕ ಭಾರತ ತಂಡವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತವರಿನ ಅಭಿಯಾನವನ್ನು ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಯೊಂದಿಗೆ ಆರಂಭಿಸಲಿದೆ. ಶುಭಮನ್ ಗಿಲ್ ನಾಯಕತ್ವದ ತಂಡವು ಅಹಮದಾಬಾದ್‌ನಲ್ಲಿ ಮೊದಲ ಪಂದ್ಯವನ್ನಾಡಲಿದೆ.
ಅಹಮದಾಬಾದ್: ಏಷ್ಯಾಕಪ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಈಗ ಮತ್ತೊಂದು ಸವಾಲು ಎದುರಿಸಲು ಸಜ್ಜಾಗಿದೆ. 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ತಂಡ, ಗುರುವಾರದಿಂದ ತವರಿನಲ್ಲಿ ವೆಸ್ಟ್ ಇಂಡೀಸ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. 2 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಅಹಮದಾಬಾದ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಏಷ್ಯಾಕಪ್ ಗೆದ್ದ ಭಾರತ ತಂಡದಲ್ಲಿರುವ ಬಹುತೇಕ ಆಟಗಾರರು ಈ ಸರಣಿ ಆಡುತ್ತಿಲ್ಲ. ಆದರೆ ಜಸ್‌ಪ್ರೀತ್ ಬುಮ್ರಾ ಸೇರಿ ಪ್ರಮುಖರು ಕೇವಲ 3 ದಿನಗಳ ಅಂತರದಲ್ಲಿ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ. ಶುಭಮನ್ ಗಿಲ್ ನಾಯಕತ್ವದ ತಂಡದಲ್ಲಿ ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಕರ್ನಾಟಕದ ಕೆ.ಎಲ್.ರಾಹುಲ್, ದೇವದತ್ ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಇದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಎನ್.ಜಗದೀಶನ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ಕೂಡಾ 15 ಮಂದಿ ಆಟಗಾರರ ತಂಡದಲ್ಲಿದ್ದಾರೆ.
ಧೃವ್ ಜುರೆಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್
ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಧೃವ್ ಜುರೆಲ್ ತಂಡದಲ್ಲಿದ್ದಾರೆ. ಎನ್.ಜಗದೀಶನ್ ಮೀಸಲು ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಅಕ್ಟೋಬರ್ 2ರಿಂದ ಅಹಮದಾಬಾದ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದ್ದು, ಅ.10ರಂದು ಆರಂಭಗೊಳ್ಳಲಿರುವ 2ನೇ ಪಂದ್ಯಕ್ಕೆ ನವದೆಹಲಿ ಆತಿಥ್ಯ ವಹಿಸಲಿದೆ.
ಆಘಾತ ನೀಡುತ್ತಾ ವಿಂಡೀಸ್?
ಇತ್ತೀಚಿನ ದಿನಗಳಲ್ಲಿ ವಿಂಡೀಸ್ ತಂಡದ ಸೀಮಿತ ಓವರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿದ್ದರೂ, ಟೆಸ್ಟ್‌ನಲ್ಲಿ ಉತ್ತಮ ಆಟವಾಡುತ್ತಿದೆ. ರೋಸ್ಟನ್ ಚೇಸ್ ತಂಡದ ನಾಯಕತ್ವ ವಹಿಸಲಿದ್ದು, ಶಾಯ್ ಹೋಪ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಆಡಲಿದ್ದಾರೆ. ಭಾರತಕ್ಕೆ ಕಠಿಣ ಸವಾಲು ನೀಡಬೇಕಿದ್ದರೆ ವಿಂಡೀಸ್ ಸ್ಪಿನ್ ಅಸ್ತ್ರ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಟ್ಟು 100 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ವೆಸ್ಟ್ ಇಂಡೀಸ್ ತಂಡವೇ ಸ್ಪಷ್ಟ ಮೇಲುಗೈ ಸಾಧಿಸಿದೆ. 100 ಟೆಸ್ಟ್ ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ತಂಡವು 30 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೇ, ಭಾರತ ತಂಡವು 23 ಪಂದ್ಯಗಳಲ್ಲಿ ಜಯದ ಸಿಹಿಯುಂಡಿದೆ. ಇನ್ನು 47 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡ:
ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧೃವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಎನ್.ಜಗದೀಶನ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಕುಲ್ದೀಪ್ ಯಾದವ್.
