ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ನಲ್ಲಿ, ವಿಂಡೀಸ್‌ನ ಕೊನೆಯ ವಿಕೆಟ್ ಜೊತೆಯಾಟ ಭಾರತದ ತಾಳ್ಮೆ ಪರೀಕ್ಷಿಸಿತು. ಈ ವೇಳೆ ಮೊಹಮ್ಮದ್ ಸಿರಾಜ್ ತಮಾಷೆಯಾಗಿ ಎದುರಾಳಿ ಆಟಗಾರನಿಗೆ ಎಚ್ಚರಿಕೆ ನೀಡಿದ ಘಟನೆ ವೈರಲ್ ಆಗಿದೆ.
ದೆಹಲಿ: ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಂದು, ವಿಂಡೀಸ್ ಆರಂಭಿಕರಾದ ಜಾನ್ ಕ್ಯಾಂಪ್‌ಬೆಲ್ ಮತ್ತು ಶಾಯ್ ಹೋಪ್ ಅನಿರೀಕ್ಷಿತ ಪ್ರತಿರೋಧ ತೋರಿ ಅಚ್ಚರಿ ಮೂಡಿಸಿದರು. ಭಾರತದ ಇನ್ನಿಂಗ್ಸ್ ಜಯವನ್ನು ತಡೆದ ಇವರಿಬ್ಬರೂ ಶತಕ ಸಿಡಿಸಿ ದಾಖಲೆ ಬರೆದರು. ಆದರೆ, ಅವರಿಬ್ಬರೂ ಔಟಾದ ನಂತರ ಕುಸಿತ ಕಂಡ ವಿಂಡೀಸ್, ನಾಲ್ಕನೇ ದಿನವೇ ಭಾರತಕ್ಕೆ ಜಯ ತಂದುಕೊಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಕೊನೆಯ ವಿಕೆಟ್‌ಗೆ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ 24 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ನಿಂತು ಭಾರತದ ತಾಳ್ಮೆ ಪರೀಕ್ಷಿಸಿದರು. ಹತ್ತನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟವಾಡಿದ್ದರಿಂದ ಭಾರತದ ಗೆಲುವಿನ ಗುರಿ 100 ದಾಟಿತು.
DSP ಸಿರಾಜ್ ವಾರ್ನಿಂಗ್ ಫೋಟೋ ವೈರಲ್
ಈ ನಡುವೆ, ಮೈದಾನದಲ್ಲಿ ನಡೆದ ಒಂದು ತಮಾಷೆಯ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಲ್ಕನೇ ದಿನ ಟೀ ವಿರಾಮಕ್ಕೂ ಮುನ್ನ ಒಂಬತ್ತು ವಿಕೆಟ್ ಕಳೆದುಕೊಂಡರೂ, ಗ್ರೀವ್ಸ್ ಮತ್ತು ಸೀಲ್ಸ್ ಭಾರತದ ಸುಲಭ ಗೆಲುವಿನ ನಿರೀಕ್ಷೆಯನ್ನು ಹುಸಿಗೊಳಿಸಿದರು. ಟೀ ವಿರಾಮದ ನಂತರ ಆಟಗಾರರು ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾಗ, ವಿಂಡೀಸ್ ಆಟಗಾರ ಜಸ್ಟಿನ್ ಗ್ರೀವ್ಸ್ ಬಳಿ ತೆರಳಿದ ಸಿರಾಜ್, ಬೆರಳು ತೋರಿಸಿ ಮಾತನಾಡುತ್ತಿರುವುದು ಮತ್ತು ಗ್ರೀವ್ಸ್ ನಗುತ್ತಾ ನಿಂತಿರುವುದು ಕಂಡುಬಂತು. ತೆಲಂಗಾಣ ಪೊಲೀಸ್‌ನಲ್ಲಿ ಡಿಎಸ್‌ಪಿ ಆಗಿರುವ ಸಿರಾಜ್, 'ಇನ್ನೂ ನಮ್ಮ ತಾಳ್ಮೆ ಪರೀಕ್ಷಿಸಬೇಡಿ' ಎಂದು ತಮಾಷೆಯಾಗಿ ಗ್ರೀವ್ಸ್‌ಗೆ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಸಿರಾಜ್ ಅವರ ಎಚ್ಚರಿಕೆಯನ್ನು ತಮಾಷೆಯಾಗಿ ತೆಗೆದುಕೊಂಡ ಗ್ರೀವ್ಸ್, ಟೀ ವಿರಾಮದ ನಂತರವೂ ಸ್ವಲ್ಪ ಸಮಯ ಭಾರತೀಯ ಆಟಗಾರರ ತಾಳ್ಮೆ ಪರೀಕ್ಷಿಸಿ ಅರ್ಧಶತಕವನ್ನೂ ಗಳಿಸಿದರು. ಕೊನೆಗೆ ಜೇಡನ್ ಸೀಲ್ಸ್ ಅವರನ್ನು ಔಟ್ ಮಾಡಿದ ಜಸ್ಪ್ರೀತ್ ಬುಮ್ರಾ ವಿಂಡೀಸ್ ಇನ್ನಿಂಗ್ಸ್‌ಗೆ ತೆರೆ ಎಳೆದರು. ಗ್ರೀವ್ಸ್ 50 ರನ್‌ಗಳಿಸಿ ಅಜೇಯರಾಗಿ ಉಳಿದರು. 121 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ, ನಾಲ್ಕನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತ್ತು. ಕೊನೆಯ ದಿನ ಭಾರತಕ್ಕೆ ಗೆಲ್ಲಲು 58 ರನ್‌ಗಳ ಸಾಧಾರಣ ಗುರಿ ಸಿಕ್ಕಿತ್ತು. ಇನ್ನು ಐದನೇ ದಿನದಾಟದಲ್ಲಿ ಭಾರತ ಸಾಯಿ ಸುದರ್ಶನ್(39) ಹಾಗೂ ಶುಭ್‌ಮನ್ ಗಿಲ್(13) ವಿಕೆಟ್ ಕಳೆದುಕೊಂಡಿತಾದರೂ, ಮತ್ತೊಂದು ತುದಿಯಲ್ಲಿ ಕೆ ಎಲ್ ರಾಹುಲ್ ಅಜೇಯ ಅರ್ಧಶತಕ(58) ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿ ಮಿಂಚಿದ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜಯಿಸಿದರೆ, ಸರಣಿಯಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರಿದ ರವೀಂದ್ರ ಜಡೇಜಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ವಿಂಡೀಸ್ ಎದುರು ಮುಂದುವರೆದ ಸತತ ಟೆಸ್ಟ್ ಗೆಲುವಿನ ನಾಗಾಲೋಟ:
ಭಾರತ ತಂಡವು ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಸರಣಿಯಲ್ಲಿ ಸತತ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಭಾರತದಲ್ಲಿ 2013ರಿಂದೀಚಗೆ ವೆಸ್ಟ್ ಇಂಡೀಸ್ ತಂಡವು ಇಲ್ಲಿಯವರೆಗೆ ಆರು ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಆರು ಟೆಸ್ಟ್‌ನಲ್ಲೂ ವಿಂಡೀಸ್ ಎದುರು ಭಾರತ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡವು 2002ರಿಂದ 2025ರವರೆಗೆ ವೆಸ್ಟ್ ಇಂಡೀಸ್ ಎದುರು 10 ಟೆಸ್ಟ್ ಸರಣಿಗಳನ್ನಾಡಿದೆ. ಈ ಹತ್ತು ಸರಣಿಗಳಲ್ಲೂ ಟೀಂ ಇಂಡಿಯಾ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇದೀಗ ಟೀಂ ಇಂಡಿಯಾ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಗೆ ಆಸೀಸ್‌ಗೆ ಹಾರಲಿದೆ.
