ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯಗಳು ಬೆಂಗಳೂರಿನಲ್ಲಿ ಆರಂಭ. ಉತ್ತರ ವಲಯ vs ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ vs ಕೇಂದ್ರ ವಲಯ ತಂಡಗಳು ಸೆಣಸಲಿವೆ. ಹಲವು ತಾರಾ ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ.

ಬೆಂಗಳೂರು: ದುಲೀಪ್‌ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಗುರುವಾರ ಆರಂಭಗೊಳ್ಳಲಿವೆ. ಬಿಸಿಸಿಐ ಸೆಂಟರ್‌ನಲ್ಲಿ ಏಕಕಾಲಕ್ಕೆ 2 ಪಂದ್ಯಗಳು ನಡೆಯಲಿವೆ. ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ವಲಯ ತಂಡಗಳು ಸೆಣಸಾಡಲಿದ್ದು, ಮತ್ತೊಂದು ಸೆಮಿಫೈನಲ್‌ನಲ್ಲಿ ಕೇಂದ್ರ ವಲಯಕ್ಕೆ ಪಶ್ಚಿಮ ವಲಯದ ಸವಾಲು ಎದುರಾಗಲಿದೆ.

ಟೂರ್ನಿಯಲ್ಲಿ ಹಲವು ತಾರಾ ಕ್ರಿಕೆಟಿಗರು ಆಡಲಿದ್ದು, ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಪಶ್ಚಿಮ ವಲಯ ಪರ ಶ್ರೇಯಸ್‌ ಅಯ್ಯರ್‌, ಯಶಸ್ವಿ ಜೈಸ್ವಾಲ್‌, ಶಾರ್ದೂಲ್‌ ಠಾಕೂರ್‌ ಕಣಕ್ಕಿಳಿಯಲಿದ್ದಾರೆ. ಕೇಂದ್ರ ತಂಡದಲ್ಲಿ ಧ್ರುವ್‌ ಜುರೆಲ್‌, ರಜತ್‌ ಪಾಟೀದಾರ್‌ ಇದ್ದಾರೆ.

ಕೇಂದ್ರ ವಲಯ ಎದುರು ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಶಾರ್ದೂಲ್ ಠಾಕೂರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಪಶ್ಚಿಮ ವಲಯ ಪರ ಯಶಸ್ವಿ ಜೈಸ್ವಾಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಹಾರ್ವಿಕ್ ದೇಸಾಯಿ ಇನ್ನಿಂಗ್ಸ್ ಆರಂಭಿಸಿದ್ದಾರೆ.

ತಿಲಕ್‌ ವರ್ಮಾ ಅನುಪಸ್ಥಿತಿಯಲ್ಲಿ ದಕ್ಷಿಣ ವಲಯದ ತಂಡ ಅಜರುದ್ದೀನ್‌ ನಾಯಕತ್ವದಲ್ಲಿ ಆಡಲಿದೆ. ಈ ತಂಡದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್‌, ವೇಗಿ ವಾಸುಕಿ ಕೌಶಿಕ್‌ ಕಣಕ್ಕಿಳಿಯಲಿದ್ದಾರೆ.

ಚಿನ್ನಸ್ವಾಮಿ ಸೇರಿ 8 ಕಡೆಗಳಲ್ಲಿ ಇಂದಿನಿಂದ ಕೆಎಸ್‌ಸಿಎ ಟೂರ್ನಿ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮರಣಾರ್ಥ ಕ್ರಿಕೆಟ್‌ ಟೂರ್ನಿ ಗುರುವಾರ ಆರಂಭಗೊಳ್ಳಲಿದೆ. ಚಿನ್ನಸ್ವಾಮಿ ಕ್ರೀಡಾಂಗಣ, ಆಲೂರು, ಮೈಸೂರು ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಕರ್ನಾಟಕದ 4 ತಂಡಗಳು, ಮುಂಬೈ, ತ್ರಿಪುರಾ, ಛತ್ತೀಸ್‌ಗಢ, ಮಹಾರಾಷ್ಟ್ರ, ಗುಜರಾತ್‌, ವಿದರ್ಭ, ಗೋವಾ, ಅಸ್ಸಾಂ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಬರೋಡಾ ಹಾಗೂ ಆಂಧ್ರ ತಂಡಗಳು ಕಣಕ್ಕಿಳಿಯಲಿವೆ. ಇದು 4 ದಿನಗಳ ಪಂದ್ಯವಾಗಿದ್ದು, ಪ್ರತಿ ತಂಡ ಗುಂಪು ಹಂತದಲ್ಲಿ ತಲಾ 3 ಪಂದ್ಯಗಳನ್ನಾಡಲಿವೆ. ಪ್ರತಿ ಗುಂಪಿನ ಅಗ್ರಸ್ಥಾನಿ ತಂಡ ಸೆಮಿಫೈನಲ್‌ಗೇರಲಿವೆ. ಸೆ.26ರಿಂದ ಫೈನಲ್‌ ನಡೆಯಲಿದೆ.

ಮಹಾರಾಜ ಟ್ರೋಫಿ 10 ಕೋಟಿ ವೀಕ್ಷಣೆ: ದಾಖಲೆ

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಡಿಜಿಟಲ್‌ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ ಎಂದು ಕರ್ನಾಟಕ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಹೇಳಿಕೊಂಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್‌ಸಿಎ, ‘2025ರ ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಭಾರತೀಯ ದೇಸಿ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಡಿಜಿಟಲ್‌ನಲ್ಲಿ 10 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಮೊದಲ ರಾಜ್ಯ ಮಟ್ಟದ ಲೀಗ್‌ ಎನಿಸಿಕೊಂಡಿದೆ’ ಎಂದಿದೆ. ಅಲ್ಲದೆ, ಸಾಮಾಜಿಕ ತಾಣಗಳಲ್ಲಿ 212 ವಿಡಿಯೋಗಳು 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ, 24 ವಿಡಿಯೋಗಳು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ ಎಂದು ಮಾಹಿತಿ ನೀಡಿದೆ. ಮೈಸೂರಿನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್‌ ತಂಡ ಚಾಂಪಿಯನ್‌ ಆಗಿತ್ತು. ಒಟ್ಟು 6 ತಂಡಗಳು ಟೂರ್ನಿಯಲ್ಲಿ ಆಡಿದ್ದವು.

ಸಚಿವ ಜ್ಯೋತಿರಾದಿತ್ಯ ಪುತ್ರ, 29ರ ಮಹನಾರ್ಯಮನ್‌ ಮಧ್ಯಪ್ರದೇಶ ಕ್ರಿಕೆಟ್‌ ಅಧ್ಯಕ್ಷ!

ಇಂದೋರ್‌: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರ, 29 ವರ್ಷದ ಮಹನಾರ್ಯಮನ್‌ ಸಿಂಧಿಯಾ ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ(ಎಂಪಿಸಿಎ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ವಾಲಿಯರ್‌ ರಾಜಮನೆತನ ಮಹನಾರ್ಯಮನ್‌, ಈ ಸಂಸ್ಥೆಯ ಅತಿ ಕಿರಿಯ ಅಧ್ಯಕ್ಷ ಎನಿಸಿಕೊಂಡಿದ್ದಾರೆ. ಅವರು ಕಳೆದ 3 ವರ್ಷಗಳಿಂದ ಕ್ರಿಕೆಟ್‌ ಆಡಳಿತದ ಭಾಗವಾಗಿದ್ದಾರೆ. 2022ರಿಂದಲೂ ಎಂಪಿಸಿಎ ಆಜೀವ ಸದಸ್ಯರಾಗಿರುವ ಅವರು, 2024ರಲ್ಲಿ ಮಧ್ಯಪ್ರದೇಶ ಟಿ20 ಲೀಗ್‌ ಮುಖ್ಯಸ್ಥರಾಗಿಯೂ ಆಯ್ಕೆಯಾಗಿದ್ದರು.