ಬೆಂಗಳೂರಿನಲ್ಲಿ ಆರಂಭವಾದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಕೆಲ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಬಂದಿದೆ.  

ಬೆಂಗಳೂರು: ದುಲೀಪ್ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯ ಫೈನಲ್ ಪಂದ್ಯ ಗುರುವಾರದಿಂದ ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಕೇಂದ್ರ ವಲಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಕೇಂದ್ರ ವಲಯವನ್ನು ರಜತ್ ಪಾಟೀದಾರ್ ಮುನ್ನಡೆಸುತ್ತಿದ್ದರೇ, ದಕ್ಷಿಣ ವಲಯ ತಂಡವನ್ನು ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಅಜರುದ್ದೀನ್ ಮುನ್ನಡೆಸುತ್ತಿದ್ದಾರೆ.

ಎರಡೂ ತಂಡಗಳಲ್ಲಿ ಮಹತ್ವದ ಬದಲಾವಣೆ

ಎರಡೂ ತಂಡಗಳ ಕೆಲ ಪ್ರಮುಖ ಆಟಗಾರರು ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದ ಕಾರಣ, ಕೆಲ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಲಾಗಿದೆ. ದಕ್ಷಿಣ ವಲಯ ಪರ ಕರ್ನಾಟಕದ ಆರ್. ಸ್ಮರಣ್ ಹಾಗೂ ತಮಿಳುನಾಡಿನ ಆ್ಯಂಡ್ರೆ ಸಿದ್ದಾರ್ಥ್ ಮಿಂಚಲು ಸಿದ್ಧರಾಗಿದ್ದಾರೆ. ಎನ್. ಜಗದೀಶನ್ ಹಾಗೂ ದೇವದತ್ ಪಡಿಕ್ಕಲ್‌ರ ಸೇವೆ ದಕ್ಷಿಣ ವಲಯಕ್ಕೆ ಅಲಭ್ಯವಾಗಲಿದೆ.

ಅದೇ ರೀತಿ ಕೇಂದ್ರ ವಲಯ ತನ್ನ ತಾರಾ ಆಟಗಾರರಾದ ಯಶ್ ಠಾಕೂರ್, ಹರ್ಷ ದುಬೆ, ಖಲೀಲ್ ಅಹ್ಮದ್ ಹಾಗೂ ಮಾನವ್ ಸುಥಾರ್ ಇಲ್ಲದೇ ಆಡುತ್ತಿದೆ. ಹೀಗಾಗಿ ತಂಡ ವಿದರ್ಭದ ಯುವ ಬ್ಯಾಟರ್ ದಾನಿಶ್ ಮಾಲೆವಾರ್ ಮೇಲೆ ಎಲ್ಲರ ಕಣ್ಣಿದೆ. ಫೈನಲ್ ಪಂದ್ಯ 5 ದಿನಗಳ ಕಾಲ ನಡೆಯಲಿದೆ. ದಕ್ಷಿಣ ವಲಯ ಪರ ತನ್ಮಯ್ ಅಗರ್‌ವಾಲ್ ಹಾಗೂ ಮೋಹಿತ್ ಕಾಲೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಈ ಹಿಂದಿನ ಪಂದ್ಯಗಳು ಡ್ರಾನಲ್ಲಿ ಕೊನೆ

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಈ ಹಿಂದೆ ನಡೆದ ಎರಡು ಕ್ವಾರ್ಟರ್ ಫೈನಲ್ ಹಾಗೂ ಎರಡು ಸೆಮಿಫೈನಲ್ ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದವು. ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದವು. ಇದೀಗ ಫೈನಲ್ ಪಂದ್ಯದಲ್ಲಿ ಯಾವ ಫಲಿತಾಂಶ ಹೊರಬೀಳಲಿದೆ ಎನ್ನುವ ಕುತೂಹಲ ಜೋರಾಗಿದೆ.

ತಂಡಗಳು ಹೀಗಿವೆ

ದಕ್ಷಿಣ ವಲಯ: ತನ್ಮಯ್ ಅಗರ್‌ವಾಲ್, ಮೋಹಿತ್ ಕಾಲೆ, ಸ್ಮರಣ್ ರವಿಚಂದ್ರನ್, ರಿಕಿ ಬುಯೆ, ಮೊಹಮ್ಮದ್ ಅಜರುದ್ದೀನ್(ವಿಕೆಟ್ ಕೀಪರ್/ನಾಯಕ), ಆಂಡ್ರೆ ಸಿದ್ದಾರ್ಥ್ ಸಿ, ಸಲ್ಮಾನ್ ನಿಜಾರ್, ಅಂಕಿತ್ ಶರ್ಮಾ, ಗುರ್ಜಪನೀತ್ ಸಿಂಗ್, ಎಂಡಿ ನಿದೇಶ್, ವಾಸುಕಿ ಕೌಶಿಕ್.

ಕೇಂದ್ರ ವಲಯ: ಯಶ್ ರಾಥೋಡ್, ದಾನಿಶ್ ಮಲೇವಾರ್, ಅಕ್ಷಯ್ ವಾಡ್ಕರ್, ರಜತ್ ಪಾಟೀದಾರ್(ನಾಯಕ), ಶುಭಂ ಶರ್ಮಾ, ಉಪೇಂದ್ರ ಯಾದವ್(ವಿಕೆಟ್ ಕೀಪರ್), ಸಾರಾನ್ಶ್ ಜೈನ್, ದೀಪಕ್ ಚಹರ್, ಆದಿತ್ಯ ಠಾಕ್ರೆ, ಕುಮಾರ್ ಕಾರ್ತಿಕೇಯ, ಕುಲ್ದೀಪ್ ಸೆನ್.