ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದಿದೆ. ಹಣದಾಟದ ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯಿಂದಾಗಿ ಈ ಬೆಳವಣಿಗೆ ನಡೆದಿದೆ. ಏಷ್ಯಾಕಪ್‌ನಲ್ಲಿ ಭಾರತ ತಂಡ ಪ್ರಾಯೋಜಕರಿಲ್ಲದೆ ಕಣಕ್ಕಿಳಿಯಲಿದೆ.
ಮುಂಬೈ: ಭಾರತ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕರಾಗಿದ್ದ ಆನ್‌ಲೈನ್ ಗೇಮಿಂಗ್ ಆ್ಯಪ್ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಬಿಸಿಸಿಐ ಅಧಿಕೃತವಾಗಿ ರದ್ದುಗೊಳಿಸಿದೆ. ಹಣದಾಟದ ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಭವಿಷ್ಯದಲ್ಲಿ ಇಂತಹ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಹಣವಿಟ್ಟು ಆಡುವ ಎಲ್ಲಾ ಆನ್‌ಲೈನ್ ಗೇಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ, ಮನಿ ಗೇಮಿಂಗ್ ಸಂಸ್ಥೆಯಾಗಿರುವ ಡ್ರೀಮ್ 11 ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.
ಡ್ರೀಮ್ 11 ಜೊತೆಗಿನ ಒಪ್ಪಂದ ರದ್ದಾದ ಹಿನ್ನೆಲೆಯಲ್ಲಿ ಮುಂಬರುವ ಏಷ್ಯಾಕಪ್‌ನಲ್ಲಿ ಭಾರತ ತಂಡ ಪ್ರಾಯೋಜಕರಿಲ್ಲದೆ ಕಣಕ್ಕಿಳಿಯಲಿದೆ. ಟೊಯೋಟಾ ಸೇರಿದಂತೆ ಹಲವು ದೊಡ್ಡ ಕಂಪನಿಗಳು ಈಗಾಗಲೇ ಪ್ರಾಯೋಜಕತ್ವದ ಆಸಕ್ತಿ ತೋರಿಸಿವೆ. ಡ್ರೀಮ್ 11ರ ಹೇಮಂಗ್ ಅಮೀನ್ ಬಿಸಿಸಿಐ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಇದರ ಬಳಿಕ ಬಿಸಿಸಿಐ ಅಧಿಕೃತವಾಗಿ ಒಪ್ಪಂದ ರದ್ದುಗೊಳಿಸಿದೆ.
2026ರವರೆಗೆ ಡ್ರೀಮ್ 11 ಜೊತೆ ಒಪ್ಪಂದವಿದ್ದರೂ, ಒಪ್ಪಂದ ಮುರಿದಿದ್ದಕ್ಕೆ ಬಿಸಿಸಿಐ ಯಾವುದೇ ಪರಿಹಾರ ನೀಡಬೇಕಿಲ್ಲ. ಸರ್ಕಾರದ ಕಾನೂನಿನಿಂದಾಗಿ ಒಪ್ಪಂದ ರದ್ದಾದರೆ ಬಿಸಿಸಿಐ ಪರಿಹಾರ ನೀಡಬೇಕಿಲ್ಲ ಎಂಬ ಷರತ್ತು ಒಪ್ಪಂದದಲ್ಲಿತ್ತು.
18 ವರ್ಷಗಳ ಹಿಂದೆ ಆರಂಭವಾದ ಡ್ರೀಮ್ 11, 8 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಬೈಜೂಸ್ ಕಂಪನಿಯ ಆರ್ಥಿಕ ಸಮಸ್ಯೆಗಳಿಂದಾಗಿ 2023ರ ಜುಲೈನಲ್ಲಿ ಡ್ರೀಮ್ 11 ಭಾರತ ತಂಡದ ಪ್ರಾಯೋಜಕತ್ವ ಪಡೆದಿತ್ತು. ಮೂರು ವರ್ಷಗಳಿಗೆ 358 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು. ಐಪಿಎಲ್‌ನಲ್ಲೂ ಡ್ರೀಮ್ 11 ಪ್ರಮುಖ ಪ್ರಾಯೋಜಕರಾಗಿದ್ದರು. ರೋಹಿತ್ ಶರ್ಮ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಆಟಗಾರರು ಡ್ರೀಮ್ 11ರ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದರು.
ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರು ಜೆರ್ಸಿಯಲ್ಲಿ ಡ್ರೀಮ್ 11 ಬ್ರ್ಯಾಂಡ್ ಹೆಸರು ಕಾಣಿಸಿಕೊಳ್ಳುವುದಿಲ್ಲ. ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯು ಮುಂಬರುವ ಸೆಪ್ಟೆಂಬರ್ 09ರಿಂದ ಆರಂಭವಾಗಲಿದ್ದು, ಏಷ್ಯಾದ 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಮತ್ತೊಮ್ಮೆ ಏಷ್ಯಾಕಪ್ ಗೆಲ್ಲುವ ವಿಶ್ವಾಸದಲ್ಲಿದ್ದು, ಈಗಾಗಲೇ ಮಹತ್ವದ ಟೂರ್ನಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದು, ಶುಭ್‌ಮನ್ ಗಿಲ್ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಏಷ್ಯಾಕಪ್‌ನಲ್ಲಿ 10ಕ್ಕೆ ಯುಎಇ ವಿರುದ್ಧ ಭಾರತ ಮೊದಲ ಪಂದ್ಯ ಆಡುತ್ತೆ. 14ಕ್ಕೆ ಭಾರತ-ಪಾಕಿಸ್ತಾನ ಪಂದ್ಯ ನಡೆಯುತ್ತೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.
ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ತಿಲಕ್ ವರ್ಮಾ, ರಿಂಕು ಸಿಂಗ್
ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್. ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಜಿತೇಶ್ ಶರ್ಮಾ.
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್.
ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.
